ಸಮೀವುಲ್ಲಾ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಜಿವಿಟಿ ಬಸವರಾಜು

| Published : Aug 30 2024, 01:12 AM IST

ಸಮೀವುಲ್ಲಾ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಜಿವಿಟಿ ಬಸವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಪ್ರಥಮ ಪ್ರಜೆಯಾದ ಸಮಿವುಲ್ಲಾರವರು ಈಗ ಯಾವ ಪಕ್ಷದಲ್ಲಿದ್ದಾರೆ, ಕಳೆದ ವಿಧಾನಸಭಾ-ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆ ಯಾರ ಜೊತೆ ಇದ್ದೀರೆಂದು ತಿಳಿಯದ? ಅರಸೀಕರೆ ಜನತೆ ದಡ್ಡರಲ್ಲ. ಶಾಸಕರ ಜೊತೆ ಸೇರಿ ಹಣಬಲ ಮತ್ತು ಕುತಂತ್ರ ಮಾರ್ಗದಿಂದ ನಗರಸಭಾ ಅಧ್ಯಕ್ಷರಾಗಿರುವ ನೀವು ಕಳೆದ ಬಾರಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಗರದಲ್ಲಿ ನಡೆದ ರಸ್ತೆ ಒಳಚರಂಡಿ ಮತ್ತು ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದೀರಿ ಎಂದು ಜಿವಿಟಿ ಬಸವರಾಜು ನೇರವಾಗಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರಸಭಾಧ್ಯಕ್ಷರಾಗಿ ಆಯ್ಕೆಯಾದ ಸಮೀವುಲ್ಲಾರವರು ನಾವು ಜನತಾದಳದಿಂದ ಗೆದ್ದಿದ್ದು ಈಗಲೂ ಅಲ್ಲಿಂದಲೇ ನಗರಸಭಾ ಅಧ್ಯಕ್ಷರಾಗಿ, ಜೆಡಿಎಸ್‌ನಲ್ಲೇ ಮುಂದುವರೆಯುವುದಾಗಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಮತ್ತು ಕಾನೂನು ಹಾಗೂ ಜನತೆಗೆ ಮಾಡಿದ ಮಹಾ ಮೋಸವಾಗಿದೆ ಎಂದು ಬಿಜೆಪಿ ಮುಖಂಡ ಜಿವಿಟಿ ಬಸವರಾಜು ಆರೋಪ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪ್ರಥಮ ಪ್ರಜೆಯಾದ ಸಮಿವುಲ್ಲಾರವರು ಈಗ ಯಾವ ಪಕ್ಷದಲ್ಲಿದ್ದಾರೆ, ಕಳೆದ ವಿಧಾನಸಭಾ-ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆ ಯಾರ ಜೊತೆ ಇದ್ದೀರೆಂದು ತಿಳಿಯದ? ಅರಸೀಕರೆ ಜನತೆ ದಡ್ಡರಲ್ಲ. ಶಾಸಕರ ಜೊತೆ ಸೇರಿ ಹಣಬಲ ಮತ್ತು ಕುತಂತ್ರ ಮಾರ್ಗದಿಂದ ನಗರಸಭಾ ಅಧ್ಯಕ್ಷರಾಗಿರುವ ನೀವು ಕಳೆದ ಬಾರಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಗರದಲ್ಲಿ ನಡೆದ ರಸ್ತೆ ಒಳಚರಂಡಿ ಮತ್ತು ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದೀರಿ ಎಂದು ನೇರವಾಗಿ ಆರೋಪಿಸಿದರು.ಶಾಸಕ ಶಿವಲಿಂಗೇಗೌಡ ಹಾಗೂ ನಗರಸಭೆ ಅಧ್ಯಕ್ಷ ಸಮೀವುಲ್ಲಾ ಇಬ್ಬರೂ ಸೇರಿ ಸುಳ್ಳು ಮತ್ತು ಭ್ರಷ್ಟಚಾರದ ಎಸ್ ಮತ್ತು ಎಸ್ ಕಂಪೆನಿ ನಡೆಸುತ್ತಿದ್ದಾರೆ. ನಗರಸಭೆ ಅಧ್ಯಕ್ಷರಾಗಲು ಸದಸ್ಯರಿಗೆ ತಲಾ ೧೦ ಲಕ್ಷ ಹಣದ ಆಮಿಷ ನೀಡಿ ಗದ್ದುಗೆ ಹಿಡಿದಿದ್ದಾರೆ. ಹಣದ ಆಮಿಷ ತೋರಿಸಿ ಕಾನೂನು ಕಣ್ಣಿಗೆ ಮಣ್ಣೆರೆಚಿ ಅಧ್ಯಕ್ಷರಾದ ನಿಮ್ಮಿಂದ ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ೩ನೇ ಬಾರಿ ನಿಮ್ಮನ್ನು ಕೂರಿಸಿದ ಸಾಮಾಜಿಕ ನ್ಯಾಯದ ಹರಿಕಾರರಾದ ಶಾಸಕರು ಅರಸೀಕೆರೆ ನಗರಸಭೆಯನ್ನು ಎಸ್ ಮತ್ತು ಎಸ್ ಕಂಪನಿ ಮಾಡಿಕೊಂಡು ಲೂಟಿ ಕೇಂದ್ರ ಮಾಡಿಕೊಂಡಿದ್ದೀರಾ ಎಂದು ಆರೋಪಿಸಿದರು. ಶಾಸಕರ ನಡೆಗೆ ಖಂಡನೆ: ಶಾಸಕರ ಶಿವಲಿಂಗೇಗೌಡ ವಿರುದ್ಧ ಹರಿಹಾಯ್ದು, ಯಾವುದೇ ಸರ್ಕಾರವಿರಲಿ ಟೇಬಲ್ ಗುದ್ದಿ ಅನುದಾನ ತಂದು ಅಭಿವೃದ್ಧಿ ಮಾಡುತ್ತೇನೆ ಎನ್ನುತ್ತಿದ್ದ ಶಾಸಕರು ಅವರದ್ದೇ ಸರ್ಕಾರ ಇದ್ದರೂ ಎಲ್ಲೂ ಟೇಬಲ್ ಗುದ್ದಿದ ಶಬ್ದವೇ ಕೇಳುತ್ತಿಲ್ಲ ಎಂದು ವ್ಯಂಗ್ಯವಾಡಿದರು. ಸರ್ಕಾರದಿಂದ ವಿಶೇಷ ಅನುದಾನ ತಂದು ಜನಪರ ಕೆಲಸ ಮಾಡಿ ಎಂದು ಆಗ್ರಹಿಸಿದರು. ಬಿಜೆಪಿ ನಗರಾಧ್ಯಕ್ಷ ಪುರುಷತ್ತಮ್ ಮಾತನಾಡಿ, ನಗರಸಭೆ ಚುನಾವಣೆಯನ್ನು ದೊಂಬರಾಟದ ರೀತಿ ನಡೆಸಿದ್ದಾರೆ. ಜೆಡಿಎಸ್ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಇವರು ತಮ್ಮದೆ ಆಟದ ಕಂಪನಿ ನಡೆಸಲು ನಗರಸಭೆ ಗದ್ದುಗೆ ಏರಿದ್ದಾರೆ, ನಗರಸಭೆ ಕಚೇರಿ ಆವರಣದ ಶೌಚಾಲಯನ್ನೆ ಸ್ವಚ್ಛವಾಗಿಟ್ಟುಕೊಳ್ಳದ ಇವರು ನಗರವನ್ನು ಹೇಗೆ ಇಟ್ಟುಕೊಂಡಾರು ಎಂದು ವ್ಯಂಗ್ಯವಾಡಿದರು.ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಅಣ್ಣಾಯ್ಕನಹಳ್ಳಿ ವಿಜಯಕುಮಾರ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅವಿನಾಶ್‌ ನಾಯ್ಡು, ರೇಣುಕಪ್ಪ ಉಪಸ್ಥಿತರಿದ್ದರು.ಫೋಟೋ ಶೀರ್ಷಿಕೆ: ಬಿಜೆಪಿ ಮುಖಂಡ ಜಿವಿಟಿ ಬಸವರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.