ಕನ್ನಡಪ್ರಭ ವಾರ್ತೆ ನಾಗಮಂಗಲ
ಹ್ಯಾಕಥಾನ್‌ಗಳು ವಿದ್ಯಾರ್ಥಿಗಳ ಸೃಜನಶೀಲತೆ, ನಾಯಕತ್ವ, ವಿಮರ್ಶಾತ್ಮಕ ಚಿಂತನೆ ಹಾಗೂ ನೈಜ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ಹಾಗೂ ಸಾಮರ್ಥ್ಯ ವೃದ್ಧಿಸುವ ವೇದಿಕೆಯಾಗಿದೆ ಎಂದು ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಎಸ್.ಎನ್.ಶ್ರೀಧರ ಅಭಿಪ್ರಾಯಪಟ್ಟರು.ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ವಿಶ್ವವಿದ್ಯಾಲಯದ ನಾವಿನ್ಯತೆ ಮಂಡಳಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹ್ಯಾಕಥಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಕೃತಕ ಬುದ್ಧಿಮತೆ (ಎಐ) ತಂತ್ರಜ್ಞಾನ, ಸಾಫ್ಟ್‌ವೇರ್ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಕೌಶಲ್ಯಗಳನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳು ಭವಿಷ್ಯದ ತಂತ್ರಜ್ಞಾನ ಸವಾಲುಗಳನ್ನು ಎದುರಿಸಲು ನೆರವಾಗುತ್ತವೆ. ವಿದ್ಯಾರ್ಥಿಗಳು ತಮ್ಮ ಹೊಸ ಕಲ್ಪನೆಗಳನ್ನು ಅಭಿವೃದ್ಧಿಪಡಿಸಿ ನವೋದ್ಯಮಗಳಾಗಿ ರೂಪಿಸಿಕೊಳ್ಳುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಶಿಕ್ಷಣ ತಜ್ಞ ಡಾ.ಸಂಜು ಥಾಮಸ್ ಅವರು ಅಂತಾರಾಷ್ಟ್ರೀಯ ಶಿಕ್ಷಣ, ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯಗಳ ಆಯ್ಕೆ, ವಿದ್ಯಾರ್ಥಿವೇತನ ಹಾಗೂ ಜಾಗತಿಕ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ದಕ್ಷಿಣ ಕೊರಿಯಾದ ಕ್ಯಾಲಸ್ ಕಂಪನಿ ಇಂಕ್ ಸಂಸ್ಥೆಯ ಸಿಇಒ ಜುನೋಯು ಅವರು ಸಂಶೋಧನೆ, ನಾವೀನ್ಯತೆ ಹಾಗೂ ತಂತ್ರಜ್ಞಾನದ ಭವಿಷ್ಯದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಅಮೆರಿಕದ ನ್ಯೂಯಾರ್ಕ್‌ನ ಓಪನ್ ಥೀಸಿಸ್ ಸಂಸ್ಥೆಯ ಸಿಇಒ ಮಿನ್ಸುಂಗ್ ಹ್ಯುನ್ ಅವರು ಎಐ ಆಧಾರಿತ ಸಾಫ್ಟ್‌ವೇರ್ ಅಭಿವೃದ್ಧಿ, ವೈಬ್ ಕೋಡಿಂಗ್ ಹಾಗೂ ಆಧುನಿಕ ತಂತ್ರಜ್ಞಾನಗಳ ಬಳಕೆಯ ಕುರಿತು ಉಪನ್ಯಾಸ ನೀಡಿದರು.
ಹ್ಯಾಕಥಾನ್‌ನಲ್ಲಿ ನೂರಾರು ವಿದ್ಯಾರ್ಥಿಗಳು ವಿವಿಧ ತಂಡಗಳಾಗಿ ಕಾರ್ಯನಿರ್ವಹಿಸಿ ನೈಜ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ರೂಪಿಸಿದರು. ಈ ಮೂಲಕ ಪ್ರೋಗ್ರಾಮಿಂಗ್ ಕೌಶಲ್ಯ, ವಿಶ್ಲೇಷಣಾತ್ಮಕ ಚಿಂತನೆ, ನಾಯಕತ್ವ, ತಂಡದ ಕಾರ್ಯನಿರ್ವಹಣೆ, ಸಂವಹನ ಕೌಶಲ್ಯ ಹಾಗೂ ಉದ್ಯಮಶೀಲ ಮನೋಭಾವವನ್ನು ಬೆಳೆಸಿಕೊಳ್ಳುವ ಅವಕಾಶ ದೊರೆಯಿತು.ಡಾ.ಶ್ರೀಧರ್ ಸರಸ್ವತಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಪ್ರಾಂಶುಪಾಲೆ ಡಾ.ಬಿ.ಎನ್.ಶೋಭ, ಇನ್‌ಸ್ಟಿಟ್ಯೂಷನ್ ಇನ್ನೋವೇಷನ್ ಕೌನ್ಸಿಲ್‌ನ ನಿರ್ದೇಶಕ ಡಾ.ಕೆ.ಬಿ.ಗಿರೀಶ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಎಸ್.ಎಚ್.ಮಂಜುನಾಥ್, ಸಾರ್ವಜನಿಕ ಸಂಪರ್ಕಾಧಿಕಾರಿ ವೈ.ಪಿ.ಧರ್ಮೇಂದ್ರ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕವರ್ಗ ಮತ್ತು ನೂರಾರು ವಿದ್ಯಾರ್ಥಿಗಳು ಇದ್ದರು.