ಕನ್ನಡಪ್ರಭ ವಾರ್ತೆ ಮಂಡ್ಯ

ನಾಲ್ವಡಿ ಕೃಷ್ಣರಾಜ ಒಡೆಯರ್ ಆಧುನಿಕ ಮೈಸೂರು ಸಂಸ್ಥಾನದ ನಿರ್ಮಾತೃವಾಗಿ ಶಿಕ್ಷಣದಿಂದ ಆರಂಭವಾಗಿ ಆರೋಗ್ಯ, ಕೃಷಿ, ಕೈಗಾರಿಕೆ, ವಾಣಿಜ್ಯ ಸೇರಿದಂತೆ ಅಭಿವೃದ್ಧಿಯಲ್ಲಿ ಎಲ್ಲ ಕ್ಷೇತ್ರಗಳಿಗೂ ಸಮಾನ ಆದ್ಯತೆ ನೀಡಿದ ಆದರ್ಶಪ್ರಾಯ ವ್ಯಕ್ತಿ ಎಂದು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್‌ಕುಮಾರ್ ಹೇಳಿದರು.

ನಗರದ ಮಹಾವೀರ ವೃತ್ತದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಹಾಗೂ ಕನ್ನಡಪರ ಪ್ರಗತಿಪರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಾಮಾಜಿಕ ಸಮಾನತೆಯ ಮೂಲಕ ಕರ್ನಾಟಕದ ಪ್ರಗತಿಗೆ ಭದ್ರ ಬುನಾದಿ ಹಾಕಿದ ದೂರದೃಷ್ಟಿಯ ಜನಪ್ರಿಯ ರಾಜ. ಅವರೊಬ್ಬ ಪ್ರಜಾಪ್ರೇಮಿ ಆಡಳಿತಗಾರ. ಮೈಸೂರು ಸಂಸ್ಥಾನವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿ ಜಾಗತಿಕ ನಾಯಕರಿಂದ ಶ್ಲಾಘನೆಗೆ ಒಳಗಾದರು. ಮಹಾತ್ಮಗಾಂಧೀಜಿ ಅವರಿಂದ ರಾಜರ್ಷಿ ಎನಿಸಿಕೊಂಡ ನಾಲ್ವಡಿಯವರ ಕೊಡುಗೆಗಳು ಅವಿಸ್ಮರಣೀಯ. ಅಂತಹ ಮಹಾಪುರುಷರನ್ನು ನೆನೆಯಬೇಕಿರುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ಬೆಂಗಾಡಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜಸಾಗರ ಅಣೆಕಟ್ಟನ್ನು ನಿರ್ಮಿಸಿ ಭೂತಾಯಿಗೆ ಹಸಿರ ಸಿರಿ ಹೊದಿಸಿದರು. ಅರಮನೆ ಚಿನ್ನಾಭರಣವನ್ನೆಲ್ಲಾ ಅಡವಿಟ್ಟು ಅಣೆಕಟ್ಟು ಪೂರ್ಣಗೊಳಿಸಿ ರೈತರ ಬದುಕಿಗೆ ಆಸರೆಯಾದರು ಎಂದು ಬಣ್ಣಿಸಿದರು.


ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿಯ ಜನಕರಾಗಿದ್ದರು. ಅವರು ದೇಶದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಜಾತಿ ಆಧಾರಿತ ಮೀಸಲಾತಿಯನ್ನು ಮೈಸೂರು ರಾಜ್ಯದಲ್ಲಿ ಜಾರಿಗೆ ತಂದರು. ನಾಲ್ವಡಿಯವರ ಆಡಳಿತಾವಧಿ ಮೈಸೂರು ರಾಜ್ಯದ ಸುವರ್ಣಯುಗವಾಗಿತ್ತು. ಶಿಕ್ಷಣ, ಕೈಗಾರಿಕೆ, ನೀರಾವರಿ ಮತ್ತು ಸಾಮಾಜಿಕ ನ್ಯಾಯದಂತಹ ಕ್ಷೇತ್ರಗಳಲ್ಲಿ ಅವರ ಅಪಾರ ಕೊಡುಗೆಗಳು ಇಂದಿಗೂ ಮಾದರಿಯಾಗಿವೆ. ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಪ್ರಾತಿನಿಧ್ಯ ನೀಡಲು ೧೯೧೮ರಲ್ಲಿ ಲೆಸ್ಲಿ ಮಿಲ್ಲರ್ ಸಮಿತಿಯನ್ನು ರಚಿಸಿ, ಭಾರತದಲ್ಲೇ ಮೊದಲ ಬಾರಿಗೆ ಸಾಮಾಜಿಕ ಮೀಸಲಾತಿಗೆ ಅಡಿಪಾಯ ಹಾಕಿದರು ಎಂದರು.

ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್ ನಾರಾಯಣ್ ಮಾತನಾಡಿ, ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ರಾಜಾಡಳಿತ ವ್ಯವಸ್ಥೆಯಲ್ಲಿ ಅಭೂತಪೂರ್ವ ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಜಾನಪದ ಗಾಯಕರಿಂದ ನಾಲ್ವಡಿ ಕುರಿತ ಗೀತೆಗಳನ್ನು ಹಾಡಿದರು. ನಾಗರಿಕರಿಗೆ ಸಿಹಿ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಕ್ರೀಡಾಧಿಕಾರಿ ಮನುಜಶ್ರೀ, ನೆಲದನಿ ಬಳಗ ಅಧ್ಯಕ್ಷ ಮಂಗಲ ಲಂಕೇಶ್, ಯುವ ಮುಖಂಡ ತಗ್ಗಹಳ್ಳಿ ಮಂಜು, ಮುಖ್ಯ ಶಿಕ್ಷಕ ಎಚ್.ಎಂ.ದೇವರಾಜು, ದ ಕೋ.ಹಳ್ಳಿ ಚಂದ್ರಶೇಖರ್, ಟಿ.ಡಿ.ನಾಗರಾಜು, ಡಯಟ್ ಗುರುಮೂರ್ತಿ, ಎಂ.ಎಸ್.ಚಿದಂಬರ್ ಸೇರಿದಂತೆ ಹಲವರು ಹಾಜರಿದ್ದರು.