ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಹಳಗನ್ನಡ ಸಾಹಿತ್ಯವು ಮಾನವೀಯ ಮೌಲ್ಯ ಬೆಳೆಸುತ್ತದೆ ಶಾಲೆ, ಕಾಲೇಜು ಪಠ್ಯದಲ್ಲಿ ಹಳಗನ್ನಡ ಸಾಹಿತ್ಯ ವಿಫುಲವಾಗಬೇಕು ಎಂದು ಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ಚೈತನ್ಯ ಆಶ್ರಮ ವಸತಿ ಶಾಲೆ ಆತಿಥ್ಯದಲ್ಲಿ ಗೋಕಾವಿ ಗೆಳೆಯರ ಬಳಗದಿಂದ ಶನಿವಾರ ಆಯೋಜಿಸಿದ್ದ ಕುಂ.ವೀರಭದ್ರಪ್ಪ ಹಾಗೂ ಡಿ.ಮಹೇಂದ್ರ ಅವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದ್ದು ಹಳಗನ್ನಡ ಸಾಹಿತ್ಯವಾಗಿದ್ದು, ಅದರಲ್ಲಿ ಕನ್ನಡದ ಸತ್ವ ಇದೆ ಎಂದರು.
ಪ್ರಾಚೀನ ಕನ್ನಡ ಸಾಹಿತ್ಯದ ಹರವು ವಿಸ್ತಾರವಾದುದು. ವಿದ್ಯಾರ್ಥಿಗಳು ಹಳಗನ್ನಡ ಕಾವ್ಯ, ಗದ್ಯ ಗ್ರಂಥಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಯುವ ಮನಸುಗಳು ಪ್ರಾಚೀನ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಿದರೆ ಮಾತ್ರ ಅರ್ಥಪೂರ್ಣವಾದ ಸಾಹಿತ್ಯ ಪರಂಪರೆ ಮತ್ತು ಕನ್ನಡವನ್ನು ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಹಳಗನ್ನಡ ಅಧ್ಯಯನ ಮಾಡಿ ಮಕ್ಕಳಲ್ಲಿ ಹಳಗನ್ನಡದ ಬಗ್ಗೆ ಆಸಕ್ತಿ ಕೆರಳಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಡಾ.ಸಿ.ಕೆ. ನಾವಲಗಿ ಮಾತನಾಡಿ, ಜಾನಪದ ಸಾಹಿತ್ಯಕ್ಕೆ ಸಾವಿಲ್ಲ. ಅದು ನಿತ್ಯ ನೂತನವಾದದ್ದು. ಪ್ರಾಚೀನ ಕನ್ನಡ ಸಾಹಿತ್ಯದ ಕೃತಿಗಳ ಓದು ಇಂದಿನ ಅವಶ್ಯಕತೆ ಇದೆ ಎಂದರು.
ಕೊಪ್ಪಳದ ಜಿಲ್ಲಾ ಕಾರಾಗೃಹ ಅಧೀಕ್ಷಕ ಅಂಬರೀಶ ಪೂಜಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಿ.ಮಹೇಂದ್ರ ಕೇಂದ್ರ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ತಿಳಿಸಿದರು.ಡಾ.ಮಹಾದೇವ ಜಿಡ್ಡಿಮನಿ, ಎಸ್.ಎಂ. ಪಿರಜಾದೆ, ಶಂಕರ ನಿಂಗನೂರ, ಡಾ.ಮಹಾದೇವ ಪೋತರಾಜ, ಅಶೋಕ ಲಗಮಪ್ಪಗೋಳ, ರಜನಿ ಜಿರಗ್ಯಾಳ, ಡಾ.ಸುರೇಶ ಹನಗಂಡಿ, ಸಂದ್ಯಾ ಪಾಟೀಲ, ನಾಗರ ಜಂಡೇನವರ ಸಂವಾದದಲ್ಲಿ ಭಾಗವಹಿಸಿದ್ದರು.
ಚೈತನ್ಯ ಶಾಲೆಯ ಆಡಳಿತಾಧಿಕಾರಿ ಎಸ್.ಎಂ. ಕಮದಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಬಾಲಶೇಖರ ಬಂದಿ, ವೈ.ಬಿ. ಪಾಟೀಲ, ಕಸಾಪ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ, ಮಕ್ಕಳ ಸಾಹಿತಿ ಲಕ್ಷ್ಮಣ ಚೌರಿ ಅತಿಥಿಯಾಗಿ ಆಗಮಿಸಿದ್ದರು.ಸಾಹಿತಿ ಶಂಕರ ಕ್ಯಾಸ್ತಿ ಪ್ರಾಸ್ತಾವಿಕ ಮಾತನಾಡಿದರು, ಗೆಳೆಯರ ಬಳಗದ ಸಂಸ್ಥಾಪಕ ಜಯಾನಂದ ಮಾದರ ನಿರೂಪಿಸಿದರು.
---ಪ್ರಸ್ತುತ ದಿನಗಳಲ್ಲಿ ಹಳಗನ್ನಡ ಸಾಹಿತ್ಯದ ನಿರ್ಲಕ್ಷ್ಯತೆ ನಡೆಯುತ್ತಿದ್ದು, ಅದು ಕನ್ನಡ ಭಾಷೆಗೆ ಮಾಡುವ ಬಹುದೊಡ್ಡ ದ್ರೋಹ ಮತ್ತು ಸಾಂಸ್ಕೃತಿಕವಾಗಿ ಅತಂಕಕಾರಿಯಾಗಿದೆ. ಜಾಗತೀಕರಣದಿಂದ ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳು ಅವನತಿಯತ್ತ ಸಾಗಿದ್ದು, ಇದರಿಂದ ಸಂಸ್ಕೃತಿ ಹಾಳಾಗುತ್ತಲಿದೆ, ದೇಸಿಯತೆ, ಜಾನಪದ ಮರೆಯಾಗುತ್ತಲಿದ್ದು, ಡಾಲರ್ ಸಂಸ್ಕೃತಿ ಬೆಳೆಯುತ್ತಲಿದೆ.
- ಕುಂ.ವೀರಭದ್ರಪ್ಪ ಕಾದಂಬರಿಕಾರ