ಸದಸ್ಯತ್ವ ಅಭಿಯಾನ ಸಮಾಲೋಚನೆ

| Published : Sep 01 2024, 01:49 AM IST

ಸಾರಾಂಶ

ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿವಾಗಿ ಮಹಿಳೆಯರ ಪಾತ್ರ ಅಪಾರವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಡೆದ ಮಹಿಳಾ ಕಾರ್ಯಾಗಾರದಲ್ಲಿ ಮಹಿಳಾ ಸದಸ್ಯತ್ವ ಹಾಗೂ ಸಂಘಟನೆ ಕುರಿತು ಸುಧೀರ್ಘ

ಸಮಾಲೋಚನೆ ನಡೆಸಲಾಯಿತು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಮಾತನಾಡಿ, ಮಹಿಳಾ ಮೋರ್ಚಾದ ಪದಾಧಿಕಾರಿಗಳು ತಮ್ಮ ತಮ್ಮ ಬೂತ್ ಗಳಲ್ಲಿ ಬೂತ್ ಅಧ್ಯಕ್ಷರುಗಳ ಜೊತೆಗೂಡಿ ಅತೀ ಹೆಚ್ಚು ಮಹಿಳಾ ಸದಸ್ಯತ್ವ ಮಾಡಿಸುವ ಮೂಲಕ ಬಿಜೆಪಿಗೆ ಹೆಚ್ಚಿನ ಮಹಿಳಾ ಬಲ ದೊರೆಯುವಂತೆ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಗುರಿಯಲ್ಲಿ ಮಹಿಳೆಯರಿಗೆ ಸ್ವಾವಲಂಬಿಗಳಾಗಿ ದುಡಿಯಲು ಅನೇಕ ಯೋಜನೆ ಜಾರಿಗೆ ತಂದಿದ್ದು ಅದನ್ನೆಲ್ಲ ಮಹಿಳೆಯರು ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ನಾರಿಶಕ್ತಿಯರು ಮುಂದೆ ಬರಬೇಕು ಎಂದರು.

ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿವಾಗಿ ಮಹಿಳೆಯರ ಪಾತ್ರ ಅಪಾರವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಮೋರ್ಚಾ ಹೆಣ್ಣು ಮಕ್ಕಳು ತಮ್ಮ ತಮ್ಮ ವಾರ್ಡ್ ಗಳು ಹಾಗೂ ಬೂತ್ ಗಳಲ್ಲಿ ಸದಸ್ಯತ್ವ ಅಭಿಯಾನದ ಅಂಗವಾಗಿ ಮೊ. 88800 02024 ಈ ಟೋಲ್ ಫ್ರೀ ನಂಬರಿಗೆ ಮಿಸ್ ಕಾಲ್ ಕೊಡಿಸುವ ಮೂಲಕ ಅತೀ ಹೆಚ್ಚು ಮಹಿಳೆಯರನ್ನು ಸದಸ್ಯತ್ವ ಹೊಂದುವಂತೆ ಮಾಡುವ ನಿಟ್ಟಿನಲ್ಲಿ ಪಕ್ಷ ಬಲಗೊಳಿಸಬೇಕು. ಪ್ರತೀ ಚುನಾವಣೆಗಳಲ್ಲಿಯೂ ಮಹಿಳಾ ಪಾತ್ರ ಹೆಚ್ಚಿನದ್ದಾಗಿರಬೇಕು. ಇಡೀ ರಾಷ್ಟ್ರದಲ್ಲಿ ಮಹಿಳಾ ಸದಸ್ಯತ್ವ ಹೆಚ್ಚಿರುವ ಪಕ್ಷ ನಮ್ಮ‌ಬಿಜೆಪಿ ಯದ್ದಾಗಿರಬೇಕು ಎಂದರು.

ಪ್ರಸ್ತುತ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಹಲವಾರು ಭ್ರಷ್ಟಾಚಾರ ಹಗರಣಗಳಲ್ಲಿ ಪಾಲುದಾರರಾಗಿದ್ದು, ಅಭಿವೃದ್ಧಿಯ ಬದಲಾಗಿ ಭ್ರಷ್ಟಾಚಾರವನ್ನೇ ಪ್ರತಿನಿತ್ಯದ ಕಾರ್ಯವನ್ನಾಗಿ ಮಾಡಿಕೊಂಡಿದ್ದಾರೆ. ಜನರು ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಬೇಸತ್ತು ಹೋಗಿದ್ದಾರೆ. ಪ್ರತೀ ತಾಲೂಕಿನಲ್ಲೂ ಅಭಿವೃದ್ಧಿ ಕೆಲಸಗಳು ಆಗದೆ, ಜನ ಸರ್ಕಾರಕ್ಕೆ ಇಡಿ ಶಾಪ ಹಾಕುತ್ತಿದ್ದಾರೆ ಎಂದರು.

ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಎಂಡಿಎ ಹಗರಣದಲ್ಲಿ ಸಿಎಂ ಭಾಗಿಯಾಗಿದ್ದು ರಾಜ್ಯದ ಜನತೆಗೆ ಇವರಿಂದ ಯಾವ ರೀತಿಯಾದ ಆಡಳಿತ ಕೊಡಲು ಸಾಧ್ಯ? ಬಿಟ್ಟಿ ಭಾಗ್ಯಗಳನ್ನು ಪೂರೈಸಲಾಗದ ಕಾಂಗ್ರೆಸ್ ಸರ್ಕಾರ ವಿವಿಧ ಅನುದಾನಗಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿದೆ. ಇದರಿಂದ ಇಡೀ ರಾಜ್ಯದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿದೆ. ಅಭಿವೃದ್ಧಿ ಇಲ್ಲದೇ ನಮ್ಮ‌ರಾಜ್ಯ ಸುಮಾರು 30 ವರ್ಷಗಳ ಹಿಂದೆ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ನ ಭ್ರಷ್ಟಾಚಾರದ ಬಗ್ಗೆ ವಿವರಿಸಿದರು.

ಎಂ.ಬಿ. ಪಾಟೀಲ್ ಅವರ ಮಾತುಗಳು ರಾಜಕೀಯವಾಗಿ ಆರೋಗ್ಯಕರವಾಗಿರಬೇಕೆ ಹೊರತು ಪರಸ್ಪರ ವಿರೋಧಿ ರೀತಿಯಲ್ಲಿರಬಾರದು. ಛಲವಾದಿ ನಾರಾಯಣಸ್ವಾಮಿ ಅವರು ವಿರೋಧ ಪಕ್ಷದ ನಾಯಕರಿದ್ದಾರೆ. ಆ ಸ್ಥಾನಕ್ಕೆ ಗೌರವ ಕೊಡಬೇಕು. ಟೀಕಿಸುವ ಭರದಲ್ಲಿ ಏನೇನೋ ಮಾತನಾಡಬಾರದು. ರಾಜಕೀಯವಾಗಿ ವಿರೋಧಿಸುವಾಗ ಮಾತುಗಳ ಮೇಲೆ ಹಿಡಿತವಿರಬೇಕು ಎಂದರು.

ಬಳಿಕ ಮಾತನಾಡಿದ ರಾಜ್ಯ ಕಾರ್ಯದರ್ಶಿ ಲೋಕೇಶ್ ಅಂಬೆಗಲ್, ನಮ್ಮ ಬಿಜೆಪಿ ಮಹಿಳಾ ಮೋರ್ಚಾದವರು ರಾಜ್ಯದೆಲ್ಲೆಡೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಮಹಿಳಾ ಸದಸ್ಯತ್ವವು ಮೈಲಿಗಲ್ಲು ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಮಹಿಳೆಯರು ಪ್ರತಿ ವಿಧಾನಸಭಾ ಚುನಾವಣೆಯಲ್ಲಿಯೂ ತಮ್ಮ ಸಂಘಟನೆಯ ಮೂಲಕ‌ಪ್ರಧಾನಿ ನರೇಂದ್ರ ಮೋದಿ ಅವರು ಹೆಣ್ಣು ಮಕ್ಕಳಿಗೆ ನೀಡಿರುವ ಯೋಜನೆಗಳ ಕುರಿತು ಗ್ರಾಮೀಣ ಭಾಗಗಳಲ್ಲಿ ಮನದಟ್ಟು ಮಾಡುವುದರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಇದು ಹೀಗೆಯೇ ಮುಂದುವರೆಯಬೇಕು. ರಾಜಕೀಯವಾಗಿ ಮಹಿಳೆಯರು ಇನ್ನೂ ಹೆಚ್ಚಾಗಿ ಮುಂದೆ ಬರಬೇಕು ಎಂದರು.

ಸದಸ್ಯತ್ವ ಅಭಿಯಾನದಲ್ಲಿ ಇಡೀ ರಾಷ್ಟ್ರದಲ್ಲಿ ಹೆಣ್ಣುಮಕ್ಕಳದೇ ಮೇಲುಗೈ ಆಗಿರಬೇಕು ಎಂದು ಮಹಿಳಾ ಮೋರ್ಚಾ ಕುರಿತು ಶ್ಲಾಘಿಸಿದರು.

ಈ ವೇಳೆ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿ ಗೌಡ, ಪ್ರಧಾನ ಕಾರ್ಯದರ್ಶಿ ನಂದಿನಿ, ರಾಧಿಕಾ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರು, ಮೊದಲಾದವರು ಇದ್ದರು.