ಪುತ್ತೂರು: ಹನುಮಗಿರಿಯ ಕೋದಂಡರಾಮ-ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಏ.೯ರಿಂದ ೧೨ರ ತನಕ ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಶಿಷ್ಠ ರೀತಿಯಲ್ಲಿ ನಡೆಯಲಿದೆ. ಬ್ರಹ್ಮಕಲಶೋತ್ಸವದ ಸಕಲ ಸಿದ್ಧತೆಗಳು ನಡೆದಿವೆ.
ಏ. ೧೦ರಂದು ರಾಜ್ಯದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕ್ಷೇತ್ರದಲ್ಲಿ ಮರು ನಿರ್ಮಿಸಲಾಗಿರುವ ಮುಖಮಂಟಪ ಮತ್ತು ಪವಿತ್ರ ವನವನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.ಮಂಗಳವಾರ ಹನುಮಗಿರಿ ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಬ್ರಹ್ಮಕಲಶೋತ್ಸವ ಬಗ್ಗೆ ಮಾಹಿತಿ ನೀಡಿದರು. ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಹೊಸ ಗೋಪುರ ರಚನೆ, ಪಂಚಮುಖಿ ಆಂಜನೇಯ ಮತ್ತು ಕೋದಂಡರಾಮ ದೇವರ ಪೀಠಗಳಿಗೆ ಹಿತ್ತಾಳೆಯ ಕವಚ, ಸುಂದರ ವನ ನಿರ್ಮಾಣ ಮಾಡಲಾಗಿದೆ. ವಿಶಾಲವಾದ ಯಾಗ ಮಂಟಪ ರಚನೆ, ಎರಡು ಪ್ರತ್ಯೇಕ ಲವ-ಕುಶ ಹೆಸರಿನ ಸಾಂಸ್ಕೃತಿಕ ವೇದಿಕೆ, ಪಾಕಶಾಲೆ-ಭೋಜನಾಲಯ ವ್ಯವಸ್ಥೆ, ಹಸಿರುವಾಣಿ ಸಂಗ್ರಹಣಾ ಕೊಠಡಿಗಳ ವ್ಯವಸ್ಥೆ ಸೇರಿದಂತೆ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿಗಳು ಈಗಾಗಲೇ ನಡೆದಿದೆ.
ಹೊರೆಕಾಣಿಕೆ ಮೆರವಣಿಗೆ: ಏ. ೮ರಂದು ಅಪರಾಹ್ನ ೩ ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಹನುಮಗಿರಿಗೆ ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಇದಕ್ಕೂ ಮೊದಲು ಬೆಳಗ್ಗೆ ಈಶ್ವರಮಂಗಲ ಗ್ರಾಮಸ್ಥರ ಹೊರೆಕಾಣಿಕೆ ಸಮರ್ಪಣೆ ಕ್ಷೇತ್ರಕ್ಕೆ ನಡೆಯಲಿದ್ದು, ಉಗ್ರಾಣ ಮುಹೂರ್ತ ನಡೆಯಲಿದೆ.ಸಂಜೆ ಪುತ್ತೂರಿನಿಂದ ಹೊರಟ ಹೊರೆಕಾಣಿಕೆ ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ಸಮರ್ಪಣೆಯಾಗಲಿದೆ. ಅಯೋಧ್ಯೆ ಮತ್ತು ಅಂಜನಾದ್ರಿ ಬೆಟ್ಟದಿಂದ ಬಂದ ಶ್ರೀರಾಮ-ಹನುಮ ಜ್ಯೋತಿಯು ಈಗಾಗಲೇ ೬೦ ಗ್ರಾಮಗಳಲ್ಲಿ ಪರ್ಯಟನೆ ಮಾಡುತ್ತಿದ್ದು, ಏ.೯ ರಂದು ಅಪರಾಹ್ನ ೩ ಗಂಟೆಗೆ ಹನುಮಗಿರಿ ಕ್ಷೇತ್ರಕ್ಕೆ ಆಗಮಿಸಲಿದೆ. ಈ ಸಂದರ್ಭ ಭವ್ಯವಾಗಿ ಸ್ವಾಗತಿಸಲಾಗುವುದು.
ಶ್ರೀರಾಮ ತಾರಕ ಯಜ್ಞಕ್ಕಾಗಿ ೧೦ ಯಜ್ಞ ಕುಂಡಗಳನ್ನು ರಚಿಸಲಾಗಿದೆ. ಏ.೧೦ರಂದು ಬೆಳಗ್ಗೆ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯಾಗ ಮಂಟಪ ಉದ್ಘಾಟಿಸುವರು. ಇದಾದ ಬಳಿಕ ಶ್ರೀರಾಮ ತಾರಕ ಜಪ ಆರಂಭಗೊಳ್ಳಲಿದೆ. ಈಗಾಗಲೇ ಜಪ ಯಜ್ಞದ ದೀಕ್ಷೆ ಪಡೆದಿರುವ ಸುಮಾರು ೧೩ ಸಾವಿರ ಭಕ್ತರು ದಂಪತಿ ಸಹಿತವಾಗಿ ಯಾಗದಲ್ಲಿ ಭಾಗವಹಿಸಲು ತಿಳಿಸಲಾಗಿದೆ. ಏ. ೧೧ರಂದು ಮಧ್ಯಾಹ್ನ ಯಾಗದ ಪೂರ್ಣಾಹುತಿ ನಡೆಯಲಿದೆ. ಈ ಸಂದರ್ಭದಲ್ಲಿ ದೇಶದ ಪ್ರಮುಖ ಶಂಕರಾಚಾರ್ಯ ಮಠಗಳಲ್ಲಿ ಒಂದಾದ ಕಂಚಿ ಕಾಮಕೋಟಿ ಮಠದ ಸ್ವಾಮೀಜಿ ಉಪಸ್ಥಿತರಿರುತ್ತಾರೆ. ಏ. ೧೨ರಂದು ಬೆಳಗ್ಗೆ ಶ್ರೀ ಕೋದಂಡರಾಮ ದೇವರು ಮತ್ತು ಶ್ರೀ ಪಂಚಮುಖಿ ಆಂಜನೇಯ ದೇವರಿಗೆ ಏಕ ಕಾಲದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಕುಂಟಾರು ಮತ್ತು ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿ ಕುಂಚಾರು ಆಚಾರ್ಯತ್ವದಲ್ಲಿ ಧಾರ್ಮಿಕ, ವೈದಿಕ ಕಾರ್‍ಯಕ್ರಮಗಳು ನಡೆಯಲಿವೆ. ಏ.೯ರಂದು ಸಂಜೆ ೫ ಗಂಟೆಗೆ ತಂತ್ರಿಗಳು ಮತ್ತು ವೈದಿಕರನ್ನು ಕ್ಷೇತ್ರಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಸಂಜೆ ೬ರಿಂದ ಸುದರ್ಶನ ಹವನ, ವಾಸ್ತು ಬಲಿ ನಡೆಯಲಿದೆ. ಏ.೧೦ರಂದು ಬೆಳಗ್ಗೆ ೮ ಗಂಟೆಗೆ ಅಷ್ಟೋತ್ತರ ಶತ ನಾರಿಕೇಳ ಗಣ ಹವನ, ಮಧ್ಯಾಹ್ನ ಪೂರ್ಣಾಹುತಿ, ಸಂಜೆ ಅಷ್ಟಾವಧಾನ ಸೇವೆ ನಡೆಯಲಿದೆ. ಏ. ೧೧ರಂದು ಬೆಳಗ್ಗೆ ೬ ರಿಂದ ಅರಣೀಮಥನ ಪ್ರಧಾನ ಕುಂಡದಲ್ಲಿ ಅಗ್ನಿ ಸ್ಥಾಪನೆ, ಅಗ್ನಿವಿಹರಣ, ಶ್ರೀರಾಮ ತಾರಕ ಯಾಗ ಆರಂಭಗೊಳ್ಳಲಿದೆ. ಮಧ್ಯಾಹ್ನ ಪೂರ್ಣಾಹುತಿ ನಡೆಯಲಿದೆ. ಸಂಜೆ ಬ್ರಹ್ಮಕಲಶ ಪೂಜೆ ನಡೆಯಲಿದೆ. ಏ. ೧೨ರಂದು ಬೆಳಗ್ಗೆ ೫ರಿಂದ ಗಣಪತಿ ಹೋಮ, ಪ್ರತಿಷ್ಠಾಪಾಣಿ ವೃಷಭ ಲಗ್ನ ಸುಮುಹೂರ್ತದಲ್ಲಿ ಕೋದಂಡರಾಮ ಮತ್ತು ಪಂಜಮುಖಿ ಆಂಜನೇಯ ದೇವರ ಪ್ರತಿಷ್ಠೆ, ಪರಿವಾರ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಸಂಜೆ ಶ್ರೀ ಕೋದಂಡರಾಮ ದೇವರಿಗೆ ರಂಗಪೂಜೆ, ದೇವರ ಉತ್ಸವ ಬಲಿ ನಡೆಯಲಿದೆ. ೪ ದಿನಗಳ ಮಹೋತ್ಸವದಲ್ಲಿ ಅನ್ನಸಂತರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಹನುಮಗಿರಿಯಲ್ಲಿ ಲವ ವೇದಿಕೆ ಮತ್ತು ಅಮರಗಿರಿಯಲ್ಲಿ ಕುಶ ವೇದಿಕೆ ನಿರ್ಮಿಸಲಾಗಿದೆ. ಏ.೯ರಂದು ಸಂಜೆ ೫ರಿಂದ ಲವ ವೇದಿಕೆಯಲ್ಲಿ ದಾಸವಾಣಿ ಮತ್ತು ನೃತ್ಯರೂಪಕ ನಡೆಯಲಿದೆ. ರಾತ್ರಿ ೮ರಿಂದ ಕುಶ ವೇದಿಕೆಯಲ್ಲಿ ಜೋಡು ಜೀಟಿಗೆ ನಾಟಕ ಪ್ರದರ್ಶನ ನಡೆಯಲಿದೆ. ಏ.೧೦ರಂದು ಬೆಳಗ್ಗೆ೯.೩೯ ರಿಂದ ಲವ ವೇದಿಕೆಯಲ್ಲಿ ತಾಳಮದ್ದಳೆ, ನೃತ್ಯಸಂಭ್ರಮ, ಭಕ್ತಿ ಭಾವ ಸಂಗಮ, ಸಂಜೆ ಭರತನಾಟ್ಯ, ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಕುಶ ವೇದಿಕೆಯಲ್ಲಿ ಬೆಳಗ್ಗೆ ೧೦ರಿಂದ ನೃತ್ಯ, ಭಕ್ತಿ ಸಂಗೀತ, ಭರತನಾಟ್ಯ, ಯಕ್ಷಗಾನ ಪ್ರದರ್ಶನ, ಸಂಜೆ ನೃತ್ಯ, ಶಾಸ್ತ್ರೀಯ ಮತ್ತು ಜನಪದ ನೃತ್ಯ ನಡೆಯಲಿದೆ.ಏ. ೧೧ರಂದು ಬೆಳಗ್ಗೆ ೧೦ರಿಂದ ಲವ ವೇದಿಕೆಯಲ್ಲಿ ಸಾಂಸ್ಕೃತಿಕ ವೈವಿಧ್ಯ, ಸಂಗೀತ ಗಾನ ಸಂಭ್ರಮ, ಯಕ್ಷಗಾನ, ಸಂಜೆ ಭರತನಾಟ್ಯ, ಭಕ್ತಿಗೀತೆ, ನೃತ್ಯ ರೂಪಕ ನಡೆಯಲಿದೆ. ಕುಶ ವೇದಿಕೆಯಲ್ಲಿ ಬೆಳಗ್ಗೆ ೧೦ರಿಂದ ಯಕ್ಷಗಾನ, ಭರತನಾಟ್ಯ, ಸಂಗೀತ ಕಾರ್ಯಕ್ರಮ, ಸಂಜೆ ಸ್ವರ ಮಾಧುರ್ಯ ಮ್ಯೂಸಿಕ್, ನೃತ್ಯರೂಪಕ, ನೃತ್ಯೋಹಂ ನಡೆಯಲಿದೆ. ಏ.೧೨ರಂದು ಲವ ವೇದಿಕೆಯಲ್ಲಿ ಬೆಳಗ್ಗೆ ೧೦ರಿಂದ ನೃತ್ಯ ವೈಭವ, ಭರತ ನಾಟ್ಯ, ಯಕ್ಷಗಾನಾರ್ಚನೆ, ಗಾನಾರ್ಚನೆ, ಸಂಜೆ ೭.೩೦ ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ. ಬೆಳಗ್ಗೆ ಕುಶ ವೇದಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಕ್ಷೇತ್ರದ ಬ್ರಹ್ಮಕಲಶೋತ್ಸವವು ಸಮಾಜದ ಸೇವೆಯ ಧ್ಯೇಯ, ವಿಶ್ವ ಕಲ್ಯಾಣ, ದೇಶದ ಸುಭಿಕ್ಷೆಯ ಉದ್ದೇಶಗಳೊಂದಿಗೆ ನಡೆಯಲಿದೆ. ಬ್ರಹ್ಮಕಲಶೋತ್ಸವದಲ್ಲಿ ಸುಬ್ರಹ್ಮಣ್ಯ ಶ್ರೀ, ಎಡನೀರು ಸ್ವಾಮೀಜಿ, ಪೇಜಾವರ ಸ್ವಾಮೀಜಿ, ಒಡಿಯೂರು ಸ್ವಾಮೀಜಿ, ಶೃಂಗೇರಿ ಸ್ವಾಮೀಜಿ, ಕನ್ಯಾಡಿ ಸ್ವಾಮೀಜಿ ಸಹಿತ ಪ್ರಮುಖ ಮಠಗಳ ಜಗದ್ಗುರುಗಳು, ಪೀಠಾಧಿಪತಿಗಳು, ಸಾಧು ಸಂತರು, ಅರಸು ವಂಶದವರು, ಭಾಗವಹಿಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಯ ಭಾಗದಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ರವೀಶ್ ಪಡುಮಲೆ, ಹೊರೆಕಾಣಿಕೆ ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ಸಾಜ ರಾಧಾಕೃಷ್ಣ ಆಳ್ವ, ಶ್ರೀರಾಮ ಪಕ್ಕಳ, ಮುರಳೀಕೃಷ್ಣ ಹಸಂತಡ್ಕ, ರವಿಕಿರಣ ಶೆಟ್ಟಿ ಬೆದ್ರಾಡಿ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ. ನಾರಾಯಣ ರೆಂಜ, ನಹುಷ ಪಿ.ವಿ. ಉಪಸ್ಥಿತರಿದ್ದರು.