ಸಾರಾಂಶ
ಕೊಪ್ಪ, ತಾಲೂಕು ಹರಂದೂರು ಗ್ರಾಮ ಪಂಚಾಯತಿ ಸರ್ವೆ ನಂ. ೪೬/೩ ರಲ್ಲಿ ಕೊಪ್ಪ ಪಟ್ಟಣಕ್ಕೆ ಮಂಜೂರಾದ ಮಲ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕೈಬಿಡುವಂತೆ ಕೋರಿ ಗ್ರಾಮಸ್ಥರು ಸೋಮವಾರ ಕೊಪ್ಪ ಪಪಂ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
- ಕೊಪ್ಪ ಪಪಂ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ
ಕನ್ನಡಪ್ರಭ ವಾರ್ತೆ, ಕೊಪ್ಪತಾಲೂಕು ಹರಂದೂರು ಗ್ರಾಮ ಪಂಚಾಯತಿ ಸರ್ವೆ ನಂ. ೪೬/೩ ರಲ್ಲಿ ಕೊಪ್ಪ ಪಟ್ಟಣಕ್ಕೆ ಮಂಜೂರಾದ ಮಲ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕೈಬಿಡುವಂತೆ ಕೋರಿ ಗ್ರಾಮಸ್ಥರು ಸೋಮವಾರ ಕೊಪ್ಪ ಪಪಂ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಕೊಪ್ಪ ಪಪಂಗೆ ಮಲ ತ್ಯಾಜ ಘಟಕ ನಿರ್ಮಾಣಕ್ಕಾಗಿ ಒಂದು ಎಕರೆ ಭೂಮಿಯನ್ನು ಹರಂದೂರು ಗ್ರಾಪಂನಿಂದ ನೀಡಲಾಗಿದ್ದು ಪಕ್ಕದಲ್ಲೇ ಹೊಸತಾಗಿ ೧೫೦ ಬಡವರಿಗೆ ಸೈಟುಗಳ ವಿತರಣಾ ಕಾರ್ಯ ನಡೆದಿದೆ. ಅಲ್ಲಿ ಹೊಸತಾಗಿ ಮನೆಗಳು ಪ್ರಾರಂಭಿಸಿ ದಾಗ ಈ ಮಲತ್ಯಾಜ ಘಟಕದ ದುರ್ವಾಸನೆಯಿಂದ ನಾಗರಿಕರು ಬದುಕಲು ಕಷ್ಟವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮುಂಭಾಗದಲ್ಲಿ ಮುಖ್ಯರಸ್ತೆಯಿದ್ದು, ಪಕ್ಕದಲ್ಲಿ ಸರ್ಕಾರಿ ಕೈಗಾರಿಕಾ (ಐಟಿಐ) ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ರೀ ಗಣೇಶ ದೇವಸ್ಥಾನ, ದೈವಗಳ ಗುಡಿಯಿದೆ. ಇದರ ಸುತ್ತ ಮುತ್ತ ಜನವಸತಿ ಪ್ರದೇಶ ವಾಗಿದ್ದು ಮಲ ತ್ಯಾಜ ಘಟಕವನ್ನು ಈ ಪ್ರದೇಶದಿಂದ ಕೈ ಬಿಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.ಕೊಪ್ಪ ಪಪಂ ಮುಖ್ಯಾಧಿಕಾರಿ ಕುರಿಯಕೋಸ್ ಮತ್ತು ಕೊಪ್ಪ ತಹಸೀಲ್ದಾರ್ ಕಚೇರಿ ಕಂದಾಯ ಇಲಾಖೆ ನೇಸರ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದಾಗ ಕೊಪ್ಪ ಪೊಲೀಸ್ ಠಾಣೆ ಸಬ್‌ಇನ್ಪೆಕ್ಟರ್ ಬಸವರಾಜ್ ಸಮ್ಮುಖದಲ್ಲಿ ಗ್ರಾಮಸ್ಥರು ಈ ವಿಷಯದ ಬಗ್ಗೆಯಲ್ಲಿ ಚರ್ಚಿಸಿ ಸ್ಥಳೀಯ ಜನರಿಗೆ ಆಗುವ ತೊಂದರೆಯನ್ನು ಗ್ರಾಮಸ್ಥರು ವಿವರಿಸಿ ವಿನಂತಿಸಿದ್ದಾರೆ.ಮಾಜಿ ಶಿಕ್ಷಣ ಸಚಿವ ದಿ. ಎಚ್.ಜಿ. ಗೋವಿಂದ ಗೌಡರ ಪುತ್ರ ಎಚ್.ಜಿ. ವೆಂಕಟೇಶ್ ಕೆಲವು ತಿಂಗಳ ಹಿಂದೆಯೇ ಹರಂದೂರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಲಿಖಿತವಾಗಿ ತಿಳಿಸಿ, ಯಾವುದೇ ಕಾರಣಕ್ಕೂ ಮಲತ್ಯಾಜ ಘಟಕವನ್ನು ಪಂಚಾಯತಿ ಗುರುತಿಸಿದ ಜಾಗದಲ್ಲಿ ನೀಡಬಾರದೆಂದು ಹೇಳಿದ್ದರು. ಅವರ ಬೆಂಬಲದೊಂದಿಗೆ ಗುಣವಂತೆ ರಸ್ತೆ ಸರ್ಕಲ್‌ನಲ್ಲಿ ಸೋಮವಾರ ಸಾರ್ವಜನಿಕರು ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಪ್ಪ ಪಟ್ಟಣದ ಮುಖ್ಯಾಧಿಕಾರಿ ಕುರಿಯಾಕೋಸ್ ಪಂಚಾಯತಿ ಗ್ರಾಮಸ್ಥರಲ್ಲಿ ಮಾತನಾಡಿ ಯಾವುದೇ ಕಾರಣಕ್ಕೂ ಈಗ ಸರ್ಕಾರದಿಂದ ಮಂಜೂರಾದ ಜಾಗದಲ್ಲಿ ಮಲತ್ಯಾಜ ಘಟಕ ನಿರ್ಮಿಸುವುದಿಲ್ಲವೆಂದೂ, ತಮ್ಮ ಪಂಚಾಯಿತಿಯಿಂದ ಬೇರೆ ಜಾಗ ಗುರುತಿಸಿ ಕೊಡುವವರೆಗೆ ಕಾಮಗಾರಿ ಸಂಪೂರ್ಣ ನಿಲ್ಲಿಸುವುದಾಗಿಯೂ ಗ್ರಾಮವಾಸಿಗಳಿಗೆ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.ಹರಂದೂರು ಗ್ರಾಪಂ ಅಧ್ಯಕ್ಷ ಸುದೇಶ್, ಮಾಜಿ ಅಧ್ಯಕ್ಷ ಎಂ.ಸಿ. ಅಶೋಕ, ಮಾಜಿ ಸದಸ್ಯರಾದ ಸುಜನಾ, ವಿಜಯ ಆಟೋ, ತಾಲೂಕು ಮುಸ್ಲಿಂ ಒಕ್ಕೂಟದ ಉಪಾಧ್ಯಕ್ಷ ಶಫಿ ಅಹಮದ್, ಪೂರ್ಣೇಶ, ಶಶಿಧರ, ಅನಿಲ್ ರೋಶನ್, ಅನಿಲ್ ಮಿರಂಡ, ದಿನೇಶ್ ಪ್ರತಾಪ ಗ್ಯಾರೇಜ್, ಲಿಸ್ಸಿ ಜಾಯ್, ದಿನೇಶ್ ಹಾಗೂ ನೂರಾರು ಗ್ರಾಮಸ್ಥರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.