ಸಿಎಂ ಬಳಿಕ ಡಿಕೆಶಿ ದಿಢೀರ್‌ ರಸ್ತೆ ಗುಂಡಿ ಪರಿಶೀಲನೆ

| Published : Oct 01 2025, 01:00 AM IST

ಸಾರಾಂಶ

ನಗರದಲ್ಲಿ ಈವರೆಗೆ 13 ಸಾವಿರ ರಸ್ತೆ ಗುಂಡಿ ಮುಚ್ಚಲಾಗಿದ್ದು, 550 ಕಿ.ಮೀ ಉದ್ದದ ಮುಖ್ಯ ರಸ್ತೆ ಅಭಿವೃದ್ಧಿಗೆ ₹1100 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಈವರೆಗೆ 13 ಸಾವಿರ ರಸ್ತೆ ಗುಂಡಿ ಮುಚ್ಚಲಾಗಿದ್ದು, 550 ಕಿ.ಮೀ ಉದ್ದದ ಮುಖ್ಯ ರಸ್ತೆ ಅಭಿವೃದ್ಧಿಗೆ ₹1100 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಮಂಗಳವಾರ ನಗರದ ವಿವಿಧ ಕಡೆ ಭೇಟಿ ನೀಡಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲಿಸಿ ಮಾತನಾಡಿ, ಅಧಿಕಾರಿಗಳು ಸರ್ಕಾರದ ಆದೇಶ ಪಾಲನೆ ಮಾಡಿ ಗುಂಡಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ. ಪ್ರತಿ ಗುಂಡಿ ಮುಚ್ಚಿರುವುದಕ್ಕೆ ಫೋಟೋ, ವಿಡಿಯೋ ದಾಖಲೆ ಮಾಡಿಸಲಾಗಿದೆ.ಯಾರೂ ಬೇಕಾದರೂ ಪರಿಶೀಲನೆ ಮಾಡಬಹುದು ಎಂದು ತಿಳಿಸಿದರು.

ಜತೆಗೆ 550 ಕಿ.ಮೀ ಉದ್ದದ ಮುಖ್ಯರಸ್ತೆಗಳ ಅಭಿವೃದ್ಧಿಗೆ ₹1100 ಕೋಟಿ ವೆಚ್ಚದ ಕಾರ್ಯಯೋಜನೆ ಸಿದ್ಧಪಡಿಸಲು ಸೂಚನೆ ನೀಡಿದ್ದೇನೆ. ಮುಖ್ಯರಸ್ತೆಗಳ ಜಂಕ್ಷನ್ ನಲ್ಲಿ ಕಾಂಕ್ರೀಟ್ ಹಾಕಲು 26 ದಿನಗಳ ಅಗತ್ಯವಿದ್ದು, ಟ್ರಾಫಿಕ್ ನಿಯಂತ್ರಣದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದರು.

ಬೆಂಗಳೂರು ರಸ್ತೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತಿದ್ದೇನೆ. ರಸ್ತೆಗುಂಡಿ ಮುಚ್ಚುವುದಕ್ಕಾಗಿ 750 ಕೋಟಿ ರು. ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ವಾರ್ಡ್ ಮಟ್ಟದ ರಸ್ತೆಗಳ ಅಭಿವೃದ್ಧಿಗೆ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಲು 1100 ಕೋಟಿ ರು. ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಈ ಅನುದಾನವನ್ನು ರಸ್ತೆಗಳ ಸುಧಾರಣೆಗೆ ಬಳಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಯಾವುದೇ ನಗರದ ಮಂತ್ರಿ ರಸ್ತೆಯಲ್ಲಿ ಗುಂಡಿ ಕಂಡರೆ ಮಾಹಿತಿ ನೀಡಿ ಎಂದು ಸಾರ್ವಜನಿಕರಿಗೆ ಕರೆ ನೀಡಿರಲಿಲ್ಲ. ಆದರೆ, ಇದಕ್ಕಾಗಿ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಿ, ಪೋಲೀಸರ ಸಹಕಾರದಲ್ಲಿ ರಸ್ತೆಗುಂಡಿ ಮುಚ್ಚಲಾಗುತ್ತಿದೆ. ಇಂತಹ ಪ್ರಯತ್ನ ನಡೆದಿರುವುದು ಕರ್ನಾಟಕದಲ್ಲಿ ಮಾತ್ರ. ಬೆಂಗಳೂರು ಜಾಗತಿಕ ನಗರ. ಹೀಗಾಗಿ ಎಲ್ಲರೂ ಬೆಂಗಳೂರು ರಸ್ತೆಗುಂಡಿಗಳ ಬಗ್ಗೆ ಮಾತ್ರ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

ನಗರದಲ್ಲಿ ಕಸದ ಸಮಸ್ಯೆಯೂ ಇದೆ. ಕಾಂಗ್ರೆಸ್ ಕಚೇರಿಗೆ ಹೋಗುವಾಗ ಜಯಮಹಲ್ ರಸ್ತೆಯಲ್ಲಿ ಯಾರೋ ಒಂದು ಲೋಡ್ ಕಸ ಸುರಿದಿದ್ದಾರೆ. ಸೋಮವಾರ ರಾತ್ರಿ ಇರಲಿಲ್ಲ. ರಾತ್ರೊರಾತ್ರಿ ಬಂದು ಸುರಿದಿದ್ದಾರೆ. ಈ ಕಸ ಸುರಿದವರು ಯಾರು ಎಂದು ಸಿಸಿಟಿವಿಯಲ್ಲಿ ಪತ್ತೆ ಮಾಡಿ ಅವನ ವಿರುದ್ಧ ಪ್ರಕರಣ ದಾಖಲಿಸಬೇಕು. ವಾಹನ ಸೀಜ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಎಚ್‌ಡಿಕೆಗೆ ನನ್ನ ಮೇಲೆ ಬಹಳ ಪ್ರೀತಿ

ಕುಮಾರಸ್ವಾಮಿ ಅವರಿಗೆ ನನ್ನ ಮೇಲೆ ಬಹಳ ಪ್ರೀತಿ ಇದೆ. ಕುಮಾರಸ್ವಾಮಿ ಹಾಗೂ ಬಿಜೆಪಿಯವರು ನನ್ನನ್ನು ಪ್ರೀತಿಸಿದಷ್ಟು ಬೇರೆ ಯಾರನ್ನು ಪ್ರೀತಿಸುವುದಿಲ್ಲ ಎಂದು ಡಿಕೆಶಿ ಲೇವಡಿ ಮಾಡಿದರು.

ಬಿಜೆಪಿಯವರು ನನ್ನೊಟ್ಟಿಗೆ

ದೆಹಲಿಗೆ ಬರಲಿ: ಡಿಕೆಶಿ

ಪ್ರಧಾನಮಂತ್ರಿಗಳ ಮನೆ ರಸ್ತೆಯಲ್ಲಿ ಗುಂಡಿ ಇಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬೇಕಿದ್ದರೆ ನನ್ನ ಜತೆಗೆ ಅವರು ಬರಲಿ ತೋರಿಸುತ್ತೇನೆ. ದೆಹಲಿಯಲ್ಲಿರುವ ರಸ್ತೆಗುಂಡಿ ತೋರಿಸುತ್ತೇನೆ. ಕರ್ನಾಟಕ ಭವನದಿಂದ ಹೋಗುವಾಗ ನೋಡಿದ್ದೇನೆ. ಎಲ್ಲ ಕಡೆ ಇದೇ ಪರಿಸ್ಥಿತಿ ಇದೆ. ಅವರ ತಪ್ಪು ಎಂದು ಹೇಳುವುದಿಲ್ಲ. ಅವರು ಯಾವಾಗ ಬರುತ್ತಾರೆ ಹೇಳಿ, ರಾಜ್ಯದಿಂದ ಒಂದು ನಿಯೋಗ ಹೋಗೋಣ. ಹಾಗೆ ಯಾರಾದರೂ ಕೇಂದ್ರ ಸರ್ಕಾರದಿಂದ ಹಣ ಕೊಡಿಸಿದರೆ ತರೋಣ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.