ಹಾವೇರಿ: ಹಾವೇರಿ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಿ, ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ರೈತ ಮುಖಂಡರು ಶನಿವಾರ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕಚೇರಿ ಅಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಸಂಘದ ತಾಲೂಕಾಧ್ಯಕ್ಷ ದಿಳ್ಳೆಪ್ಪ ಮಣ್ಣೂರ ಮಾತನಾಡಿ, ಹಾವೇರಿ ತಾಲೂಕಿನಲ್ಲಿ ಕಳೆದ 3-4 ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಮಾಡಿ ಬಂಡವಾಳ ಹೂಡಿದರೂ ಬೆಳೆ ಬಾರದೆ ರೈತರ ಸರಣಿ ಆತ್ಮಹತ್ಯೆಗಳು ನಡೆಯುತ್ತಿವೆ. ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗಿದ್ದು, ಕಂಡು ಕೇಳರಿಯದ ಬರಗಾಲ ಆವರಿಸುತ್ತಿದೆ. ರೈತರು ಬಿತ್ತನೆ ಮಾಡಿ ಆಕಾಶ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ, ಎಕರೆಗೆ ಕನಿಷ್ಠ 30 ಸಾವಿರ ಬರ ಪರಿಹಾರ ನೀಡಬೇಕು. ತಾಲೂಕಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ ಮಾತನಾಡಿ, ಬೆಳೆ ವಿಮೆ ಕಂತು ತುಂಬಲು ಕಟಬಾಕಿದಾರರ ಬೆಳೆ ವಿಮೆ ಗೊಂದಲ ಸರಿಪಡಿಸಬೇಕು. 2025-26ನೇ ಸಾಲಿನ ವಿಮೆ ಹಣ ತಕ್ಷಣ ಜಮಾ ಮಾಡಬೇಕು. ತುಂಗಾ ಮೇಲ್ದಂಡೆ ಕಾಲುವೆಯಿಂದ ಕೆರೆಗಳಿಗೆ ನೀರು ತುಂಬಿಸಬೇಕು. ಹೊಂಬರಡಿ ಗುಡ್ಡದಲ್ಲಿ 220 ಕೆ.ವಿ.ಎ ಹೊಸ ಗ್ರಿಡ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ತಾಲೂಕಾ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಹೊಸಗೌಡ್ರ ಮಾತನಾಡಿ, ನೀರಾವರಿ ಸೌಲಭ್ಯ ಮಾಡಿಕೊಳ್ಳುವ ರೈತರಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿದ್ದು, ಕನಿಷ್ಠ 7 ತಾಸು ನಿರಂತರ ವಿದ್ಯುತ್ ಕೊಡಬೇಕು. ಅಕ್ರಮ-ಸಕ್ರಮ ಯೋಜನೆ ಮರು ಜಾರಿ ಮಾಡಬೇಕೆಂದು ಒತ್ತಾಯಿಸಿದ ಅವರು, ರೈತರ ಪ್ರಮುಖ ಬೇಡಿಕೆಗಳನ್ನು ಜು.20ರೊಳಗಾಗಿ ಈಡೇರಿಸದಿದ್ದರೆ, ಜು.21ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಸಂಘದ ನೇತೃತ್ವದಲ್ಲಿ ಹಾವೇರಿಯ ಸಿದ್ದಪ್ಪ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಈ ವೇಳೆ ತಹಸೀಲ್ದಾರ್ ಕಚೇರಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಘದ ಗೌರವಾಧ್ಯಕ್ಷ ಸುರೇಶ ಚಲವಾದಿ, ಮುಖಂಡರಾದ ರಾಜು ತರ್ಲಗಟ್ಟ, ಗುಡ್ಡನಗೌಡ ಪ್ಯಾಟಿಗೌಡ್ರ, ಬಸವರಾಜ ನಿವಾಳಕರ, ಬಸವರಾಜ ಗಾಣಿಗೇರ, ಸುರೇಶ ಕರೇಗೌಡ್ರ, ಸಿದ್ದರಾಜ ಮರೆಣ್ಣನವರ, ದೇವರಾಜ ಪಾಟೀಲ ಸೇರಿದಂತೆ ಇತರರು ಇದ್ದರು.