ಹಾವೇರಿ: ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು 2025-26ನೇ ಸಾಲಿನಲ್ಲಿ ಸುಮಾರು ₹ 8 ಕೋಟಿ ನಿವ್ವಳ ಲಾಭ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ಹಾವೇರಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ಹೇಳಿದರು.
ನಗರದ ಹಾವೇಮುಲ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ಹಾವೇಮುಲ್ ಸುಮಾರು 14.95 ಕೋಟಿ ರು. ಆರ್ಥಿಕ ನಷ್ಟ ಅನುಭವಿಸಿತ್ತು. ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ ಕೈಗೊಂಡ ಅನೇಕ ಸುಧಾರಣಾ ಹಾಗೂ ಪಾರದರ್ಶಕ ಕ್ರಮಗಳಿಂದಾಗಿ ಈ ವರ್ಷ ಸಂಸ್ಥೆ ಲಾಭಗಳಿಸುತ್ತಿರುವುದು ಸಂತಸ ತಂದಿದೆ ಎಂದರು.ಹಾವೇರಿ ಜಿಲ್ಲಾ ಹಾಲು ಒಕ್ಕೂಟವು ಧಾರವಾಡ ಜಿಲ್ಲಾ ಹಾಲು ಒಕ್ಕೂಟದಿಂದ ವಿಭಜನೆಗೊಂಡು 2022 ಏ.1ರಿಂದ ತನ್ನ ಕಾರ್ಯಚಟುವಟಿಕೆ ಆರಂಭಿಸಿತು. ಪ್ರತಿದಿನ 1.50ಲಕ್ಷ ಲೀ. ಹಾಲು ಶೇಖರಣೆ ಮಾಡುತ್ತಿದ್ದು, ಒಕ್ಕೂಟ ವ್ಯಾಪ್ತಿಯಲ್ಲಿ 33 ಬಿಎಂಸಿ ಕೇಂದ್ರಗಳು, ಎರಡು ಶೀತಲೀಕರಣ ಘಟಕಗಳು, 449 ಸಹಕಾರ ಸಂಘಗಳು, ಯುಎಚ್‌ಟಿ ಘಟಕ, ಪೌಚ್ ಘಟಕವನ್ನು ಒಳಗೊಂಡಿದ್ದರೂ ಆರ್ಥಿಕ ಹೊಡೆತವನ್ನು ಅನುಭವಿಸಬೇಕಾಯಿತು ಎಂದರು.ಕಳೆದ 2025-26ನೇ ಸಾಲಿನಲ್ಲಿ 28 ಹೊಸ ಸಂಘಗಳನ್ನು ಸ್ಥಾಪನೆ ಮಾಡಿದೆ. ಒಕ್ಕೂಟ ನಷ್ಟದಲ್ಲಿದ್ದರೂ ಹಾಲು ಉತ್ಪಾದಕರಿಗೆ ಎರಡು ವರ್ಷಗಳಿಂದ ಖರೀದಿ ದರವನ್ನು ಹೆಚ್ಚಿಗೆ ಪಾವತಿಸಲಾಗಿದೆ. 2024-25ನೇ ಸಾಲಿಗೆ ಹೋಲಿಕೆ ಮಾಡಿದ್ದಲ್ಲಿ ಹಾಲು ಉತ್ಪಾದಕ ಸಂಘಗಳಿಗೆ 5 ರಿಂದ 6 ಬಿಲ್ ಪಾವತಿಗೆ ಬಾಕಿ ಇರುತ್ತಿದ್ದದ್ದು ಪ್ರಸ್ತುತ 2 ಬಿಲ್ ಮಾತ್ರ ಬಾಕಿ ಇದೆ. 2026 ಏ. 1ರಿಂದ ಅನ್ವಯವಾಗುವಂತೆ ಸಂಘಗಳ ಸಿಬ್ಬಂದಿಗಳಿಗೆ ಹಾಲು ಗುಣಮಟ್ಟದ ಪ್ರೋತ್ಸಾಹ ಧನವನ್ನು ಪ್ರತಿ ಕೆಜಿ ಹಾಲಿಗೆ 15 ಪೈಸೆಯಂತೆ ಹೆಚ್ಚಿಸಿ ಒಟ್ಟು 50 ಪೈಸೆಯಂತೆ ಪಾವತಿಸಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ಡಿವಿಡೆಂಡ್ ಮತ್ತು ಬೋನಸ್‌ನ್ನು ಹೊಸ ಆಡಳಿತ ಮಂಡಳಿ ಬಂದ ಬಳಿಕ ಸುಮಾರು 60 ಲಕ್ಷ ರು. ಹಣವನ್ನು ಹಾಲು ಉತ್ಪಾದಕ ಸಂಘಗಳಿಗೆ ಪಾವತಿಸಲಾಗಿದೆ ಎಂದರು.ಗುಣಮಟ್ಟ ಸುಧಾರಣೆಗೆ ಕ್ರಮ: ಹಾಲಿನ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. 2025-26ನೇ ಸಾಲಿನಲ್ಲಿ ಹಾಲಿನ ಗುಣಮಟ್ಟ ಸುಧಾರಿಸಲು ಒಕ್ಕೂಟದಿಂದ ಸಂಘಗಳಿಗೆ 135 ಅನ್‌ಲೈಸರ್‌ಗಳು, 80 ಎಎಂಸಿಯುಗಳನ್ನು ನೀಡಲಾಗಿದೆ. ಬಿಎಂಸಿಗಳಲ್ಲಿ ಕಲಬೆರಿಕೆ ಹಾಲು ಪತ್ತೆ ಮಾಡಲು ಮಿಲ್ಕ್ ಅಡಲ್ಟೇಷನ್ ಮಶೀನ್‌ಗಳನ್ನು ನೀಡಿದೆ. ಜತೆಗೆ ಹೊಸದಾಗಿ ಆರು ಬಿಎಂಸಿಗಳನ್ನು ಅಳವಡಿಸಲಾಗಿದೆ. ಕಳೆದ ಎಂಟು ತಿಂಗಳಿನಿಂದ ಕೆಪಿಪಿಪಿ ನಿಯಮಾವಳಿ ಪ್ರಕಾರ 40ಕ್ಕಿಂತ ಹೆಚ್ಚು ಟೆಂಡರ್‌ಗಳನ್ನು ಕರೆದು ಪಾರದರ್ಶಕತೆ ಅಳವಡಿಸಿದ್ದು, ಇದರಿಂದ ಆರ್ಥಿಕವಾಗಿ ಒಕ್ಕೂಟಕ್ಕೆ ಉಳಿತಾಯವಾಗಿದೆ ಎಂದರು.60 ಫ್ರಾಂಚೈಸಿ ಸ್ಥಾಪನೆ:ಒಕ್ಕೂಟದ ವ್ಯಾಪ್ತಿಯಲ್ಲಿ ಕಳೆದ ಎಂಟು ತಿಂಗಳಿನಿಂದ ಸುಮಾರು 60 ಫ್ರಾಂಚೈಸಿ ಹಾಗೂ ಒಕ್ಕೂಟದಿಂದ 2 ಎಕ್ಸಕ್ಲೂಸಿವ್ ಕೇಂದ್ರಗಳನ್ನು ತೆರೆಯಲಾಗಿದೆ. ಇದರಿಂದ ಪ್ರತಿದಿನ 2 ಸಾವಿರ ಲೀ ಹಾಲು, 2 ಸಾವಿರ ಕೆಜಿ ಮೊಸರು ಹೆಚ್ಚಿಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿದಿನ 25 ಸಾವಿರ ಲೀ ಹಾಲು ಹಾಗೂ 10 ಸಾವಿರ ಕೆಜಿ ಮೊಸರು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಒಟ್ಟಾರೆಯಾಗಿ ಹಾಲು ಶೇಖರಣೆಯಲ್ಲಿ ಶೇ. 5ರಷ್ಟು ಪ್ರಗತಿ ಸಾಧಿಸಿದ್ದು, ಒಕ್ಕೂಟದಿಂದ ಮಾರಾಟವಾಗುತ್ತಿರುವ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರತಿಶತ 20ರಷ್ಟು ಪ್ರಗತಿ ಸಾಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಉಜ್ಜನಗೌಡ ಮಾವಿನತೋಪ, ನಿರ್ದೇಶಕರಾದ ಪ್ರಕಾಶ ಬನ್ನಿಹಟ್ಟಿ, ಬಸವೇಶಗೌಡ ಪಾಟೀಲ, ಚಂದ್ರಪ್ಪ ಜಾಲಗಾರ, ಶಂಕರಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಎಸ್.ಎಂ. ಇತರರು ಇದ್ದರು.ಮೆಗಾ ಡೇರಿ ನಿರ್ಮಾಣಕ್ಕೆ ಹಿಂದಿನ ಬಿಜೆಪಿ ಸರ್ಕಾರ ತನ್ನ ಬಜೆಟ್‌ನಲ್ಲಿ 70 ಕೋಟಿ ಅನುದಾನ ಘೋಷಿಸಿದ್ದು, ಈ ಪೈಕಿ ಆಗ ₹ 65 ಕೋಟಿ ಬಿಡುಗಡೆಗೊಳಿಸಿತ್ತು. ಬಾಕಿ ಉಳಿದ ₹ 5 ಕೋಟಿ ಅನುದಾನವನ್ನು ಪ್ರಸ್ತುತ ಸರ್ಕಾರದಿಂದ ಬಿಡುಗಡೆ ಮಾಡಿಕೊಂಡು ಬರಲಾಗಿದ್ದು, ಕೊನೆಯ ಹಂತದ ಕಾಮಗಾರಿ ನಡೆಯುತ್ತಿದೆ. ಎರಡ್ಮೂರು ತಿಂಗಳಲ್ಲಿ ಉದ್ಘಾಟನೆ ಮಾಡಲಾಗುವುದು ಎಂದು ಹಾವೇಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ ಹೇಳಿದರು.ನಷ್ಟದಿಂದ ಲಾಭದ ಹಳಿಗೆ ಬಂದ ಹಾವೇಮುಲ್
ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು 2025-26ನೇ ಸಾಲಿನಲ್ಲಿ ಸುಮಾರು ₹ 8 ಕೋಟಿ ನಿವ್ವಳ ಲಾಭ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ಹಾವೇರಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.