ಹಗರಿಬೊಮ್ಮನಹಳ್ಳಿ: ಬೆರಳಣಿಕೆಯಷ್ಟು ಜನರಿಂದ ಆರಂಭವಾದ ಬಿಜೆಪಿ ಇಂದು ವಿಶ್ವದಲ್ಲಿಯೇ 12 ಕೋಟಿಗೂ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರ್ಯಕರ್ತರ ಪರಿಶ್ರಮದಿಂದ ರಾಷ್ಟ್ರ ಮಟ್ಟದಲ್ಲಿ ಅಧಿಕಾರ ಪಡೆದಿರುವ ಬಿಜೆಪಿ ಶೂನ್ಯದಿಂದ ಶಿಖರಕ್ಕೇರಿದಂತಾಗಿದೆ ಎಂದು ನಗರ ಘಟಕದ ಅಧ್ಯಕ್ಷ ಮಂಜುನಾಥ ಹಿರೇಮಠ ಪ್ರತಿಪಾದಿಸಿದರು.

ಪಟ್ಟಣದ ಕೂಡ್ಲಿಗಿ ವೃತ್ತದಲ್ಲಿರುವ ಪಕ್ಷದ ಕಚೇರಿಯಲ್ಲಿ ಸೋಮವಾರ ನಗರ ಘಟಕ ಆಯೋಜಿಸಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಶ್ಯಾಮ ಪ್ರಸಾದ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ ಹಾಗೂ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶವು ಸಂಕಷ್ಟದಲ್ಲಿದ್ದಾಗ, ದೇಶ ಪ್ರೇಮದ ಕಿಚ್ಚನ್ನು ಜನರಲ್ಲಿ ಮೂಡಿಸಿದ ಪರಿಣಾಮವಾಗಿಯೇ ಪಕ್ಷದ ಮೇಲೆ ಜನರಲ್ಲಿ ವಿಶ್ವಾಸ ಮೂಡಿದೆ. ಸ್ವಾತಂತ್ರ್ಯಾ ನಂತರ ಆಸ್ತಿತ್ವಕ್ಕೆ ಬಂದಿರುವ ಯಾವ ಪಕ್ಷಗಳೂ ಇಷ್ಟು ಕಡಿಮೆ ಆವಧಿಯಲ್ಲಿ ವ್ಯಾಪಕವಾಗಿ ಬೆಳೆದಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಚಿಂತನೆಗಳ ಮೂಲಕ ದೇಶದ ಅಭಿವೃದ್ಧಿಯ ಪಥಕ್ಕೆ ನಾಂದಿ ಹಾಡಿದ ಪಕ್ಷದ ಹಿರಿಯರಾದ ವಾಜಪೇಯಿ, ಅಡ್ವಾಣಿ ಹಾಗೂ ನರೇಂದ್ರ ಮೋದಿ ಮತ್ತಿತರೇ ನಾಯಕರನ್ನು ಸ್ಮರಿಸಿಕೊಳ್ಳುವ ಜೊತೆಗೆ ತಳಮಟ್ಟದಿಂದ ಪಕ್ಷವನ್ನು ಬಲಪಡಿಸುತ್ತಿರುವ ಕಾರ್ಯಕರ್ತರ ಶ್ರಮವನ್ನೂ ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ಹಾಗೂ ದುರಾಡಳಿತ ಮಿತಿ ಮೀರಿದೆ. ಬಿಜೆಪಿ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಬಿಜೆಪಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಮಂಡಲ ಪ್ರಧಾನ ಕಾರ್ಯದರ್ಶಿ ಕೋಗಳಿ ಹನಮಂತಪ್ಪ, ದಿವಾಕರ ಗೌಡ, ಯುವ ಮೋರ್ಚಾದ ಮಾಲವಿ ಮಂಜುನಾಥ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ, ಪರಿಶಿಷ್ಠ ಜಾತಿ ಮೋರ್ಚಾದ ಮರಿಯಪ್ಪ, ಚಿರು ಬೆಳ್ಳಕ್ಕಿ, ಪೂಜಾರ್ ರಮೇಶ್, ಬ್ಯಾಟಿ ಸಂತೋಷ್, ಮಂಜುನಾಥ್, ಗೊಂಡಬಾಳು ಬಸವರಾಜ್, ಬಸವಪ್ಪ ಹಾಗೂ ಸುರೇಶ್ ಮತ್ತಿತರರಿದ್ದರು.