ಸಾರಾಂಶ
-ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಎಂಎಲ್ಸಿಗಳ ಗೈರು
-ಒಂದು ಬಣ ಆಯೋಜಿಸಿ ಮಾಡಿದ ಕಾರ್ಯಕ್ರಮಕ್ಕೆ ಮತ್ತೊಂದು ಬಣದ ಗಣ್ಯರ ಅನುಪಸ್ಥಿತಿ----
ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆ ಮಾನ್ವಿ ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಮೇಳವು ರಾಜಕೀಯ ಪ್ರತಿಷ್ಠೆಯ ವೇದಿಕೆಯಾಗಿ ಪರಿಣಮಿಸಿತ್ತು.
ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಕುದಿಯುತ್ತಿರುವ ಒಳಬೇಗುದಿಯ ಬಣ ಸಂಘರ್ಷದಿಂದಾಗಿ ಸರ್ಕಾರದ ಕಾರ್ಯಕ್ರಮಕ್ಕೆ ಪಕ್ಷದ ಒಂದು ಗುಂಪಿಗೆ ಸೇರಿದ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಎಂಎಲ್ಸಿಗಳು ಹಾಗೂ ಅವರ ಬೆಂಬಲಿತರು ಗೈರಾದರೆ, ಮತ್ತೊಂದೆಡೆ ಆಡಳಿತಾತ್ಮಕವಾಗಿ ಜಿಲ್ಲೆಗೆ ಅಂಟಿಕೊಳ್ಳದವರು ಮುಂದೆ ನಿಂತು ಕಾರ್ಯಕ್ರಮ ಮುನ್ನಡೆಸಿರುವುದು ಮೇಳದಲ್ಲಿ ಕಂಡು ಬಂತು.ಬ್ಯಾನರ್ ನಲ್ಲಿ ಕಂಡರು: ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್) ಹಾಗೂ ವಿವಿಧ ಸಂಘ-ಸಂಸ್ಥೆಗಳು, ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಮೇಳವನ್ನು ಉದ್ಘಾಟಿಸಲು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಆಗಮಿಸಿದ್ದರೆ ಹೊರತು ಮೇಳದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮಂತ್ರಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಪಕ್ಕದ ಕಲಬುರಗಿ ಜಿಲ್ಲೆಯವರಾಗಿದ್ದರೂ ಕಾರ್ಯಕ್ರಮಕ್ಕೆ ಬಾರದೇ ಬರೀ ಬ್ಯಾನರ್ ನಲ್ಲಿ ಕಂಡು ಬಂದರು.
ಅವರೇ ಬರಲಿಲ್ಲ: ಸರ್ಕಾರದ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಮಾನ್ವಿ ಶಾಸಕ ಹಂಪಯ್ಯ ಸಾಹುಕಾರ, ಸಂಸದ ಜಿ.ಕುಮಾರ ನಾಯಕ ಬಿಟ್ಟರೇ ಉಸ್ತುವಾರಿ ಡಾ.ಶರಣಪ್ರಕಾಶ ಪಾಟೀಲ್, ಉಳಿದ ಶಾಸಕರಾದ ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ಎಂಎಲ್ಸಿಗಳಾದ ಎ.ವಸಂತ ಕುಮಾರ, ಶರಣಗೌಡ ಪಾಟೀಲ್ ಬಯ್ಯಾಪುರ ಸೇರಿದಂತೆ ಇತರೆ ಜನಪ್ರತಿನಿಧಿಗಳ ಗೈರಾಗಿದ್ದರು.ಈ ಮುಂಚೆಯೂ ರಾಯಚೂರು ನಗರದಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಒಂದು ಬಣದವರು ದೂರ ಉಳಿದು ತಮ್ಮ ಅಸಮಧಾನವನ್ನು ಹೊರಹಾಕಿದ್ದರು ಇದೀಗ ಮಾನ್ವಿಯಲ್ಲಿ ನಡೆದ ಬೃಹತ್ ಆರೋಗ್ಯ ಮೇಳದಲ್ಲಿ ಸಹ ಅದೇ ಮಾದರಿಯಲ್ಲಿ ಅಸಮಧಾನವು ಪ್ರಕಟಗೊಂಡಿದೆ.
ಸಚಿವ ಎನ್.ಎಸ್.ಬೋಸರಾಜು ಅವರು ತಮ್ಮ ಪ್ರತಿಷ್ಠೆಗಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರಿಂದಲೆಯೇ ಉಸ್ತುವಾರಿ ಸಚಿವರ ಬಣದವರು ದೂರ ಉಳಿಯುವಂತಾಗಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಮೂಡಿರುವ ಬಣ ರಾಜಕೀಯದ ಸಂಘರ್ಷದ ಕಂದಕವು ದಿನೇ ದಿನೆ ಹಿರಿದಾಗುತ್ತಿದೆಯೇ ಹೊರತು ಕಡಿಮೆಗೊಳ್ಳುತ್ತಿಲ್ಲವೆಂದು ಪಕ್ಷದ ನಿಷ್ಠಾವಂತರ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.--------------------
.....ಬಾಕ್ಸ್....ಸಿಎಲ್‌ಪಿ ಸಭೆಯಲ್ಲಿ ಗಲಾಟೆಯಾಗಿಲ್ಲ: ಬೋಸರಾಜು
ರಾಯಚೂರು: ಶಾಸಕಾಂಗ ಪಕ್ಷದ ಸಭೆಯಲ್ಲಿ ನನಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಯಾವುದೇ ಗಲಾಟೆ ನಡೆದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು. ಬೆಂಗಳೂರಿನಲ್ಲಿ ನಡೆದ ಸಿಎಲ್ಪಿಸಭೆಯಲ್ಲಿ ಗಲಾಟೆಯಾಗಿಲ್ಲ. ಅದೆಲ್ಲ ಹೊರಗಡೆ ಮಾಧ್ಯಮದವರೇ ಸೃಷ್ಟಿಸಿದ್ದು. ಒಳಗೆ ಏನು ನಡೆದಿದೆ ಎಂದು ನಿಮಗೆ ಹೇಗೆ ಗೊತ್ತಾಯ್ತು. ಒಳ್ಳೆಯವರು ಯಾರು ಹೇಳಿಲ್ಲ. ಕಳ್ಳರು ಯಾರೋ ನಿಮಗೆ ಹೇಳಿರಬೇಕು. ಆ ರೀತಿ ಯಾವುದೇ ಗಲಾಟೆ ನಡೆದಿಲ್ಲ ಎಂದು ಖುದ್ದು ಮುಖ್ಯಮಂತ್ರಿಗಳೇ ಸ್ಪಷ್ಟನೆ ಕೊಟ್ಟಿದ್ದಾರೆ. ಮಾಧ್ಯಮದವರಿಗೆ ಈ ವಿಚಾರ ಯಾರು ಹೇಳಿದ್ದಾರೋ ಅವರೇ ಕಳ್ಳರು ಎಂದು ಟಾಂಗ್ ಕೊಟ್ಟರು.
ಎಲ್ಲ ಶಾಸಕರು, ಮಂತ್ರಿಗಳ ಜತೆ ಬಗ್ಗೆ ಸಾಮಾನ್ಯವಾಗಿ ಚರ್ಚೆ ನಡೆಯಿತು. ಸಭೆ ಬಳಿಕ ವಕ್ತಾರರು, ಸಿಎಂ, ಡಿಸಿಎಂ ಮಾತನಾಡುತ್ತಾರೆ. ಟ್ರಾನ್ಸಫರ್ ವಿಚಾರದಲ್ಲಿ ನಾವೇನು ತಲೆಕೆಡಿಕೊಂಡಿಲ್ಲ. ಸೇಡಂನಲ್ಲಿ ಕಾರ್ಯಕ್ರಮಗಳು ಮೊದಲೆ ನಿಗದಿಯಾಗಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿಗೆ ಬಂದಿಲ್ಲ ಎಂದು ಸಮಜಾಯಿಷಿ ಕೊಟ್ಟರು.-----------------------
15ಕೆಪಿಆರ್‌ಸಿಆರ್ 01: ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಜರುಗಿದ ಸರ್ಕಾರ ಮಟ್ಟದ ಬೃಹತ್ ಕಾರ್ಯಕ್ರಮವನ್ನು ಕಾಂಗ್ರೆಸ್ ಜಿಲ್ಲಾ ಸಮಿತಿಯ ಒಂದು ಬಣದವರು ಮುಂದೆನಿಂತುಕೊಂಡು ಆಯೋಜನೆ ಮಾಡಿದ್ದಕ್ಕೆ ಮತ್ತೊಂದು ಉಸ್ತುವಾರಿ ಸಚಿವರು, ಅವರ ಬಣದ ಶಾಸಕರು, ಎಂಎಲ್ಸಿಗಳ ಗೈರು ವೇದಿಕೆ ಮೇಲೆ ಎದ್ದು ಕಂಡಿತು.