ಸಾರಾಂಶ
ನಾಲ್ಕು ನೂರು ವರ್ಷಗಳ ಇತಿಹಾಸ ಹೊಂದಿರುವ ಆದಿ ಮುತ್ತಪ್ಪ ದೇಗುಲದ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.
ಕನ್ನಡಪ್ರಭವಾರ್ತೆ ವಿರಾಜಪೇಟೆ
ಕೊಡಗು ಜಿಲ್ಲೆಯಲ್ಲಿ ಮೊತ್ತ ಮೊದಲ ಬಾರಿಗೆ ನೆಲೆ ಕಂಡು ಸುದೀರ್ಘ ನಾಲ್ಕು ನೂರು ವರ್ಷಗಳ ಇತಿಹಾಸ ಹೊಂದಿರುವ ಆದಿ ಮುತ್ತಪ್ಪ ದೇಗುಲದ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು.ವಿರಾಜಪೇಟೆ ತಾಲೂಕು ಕದನೂರು ಗ್ರಾಮದ ಶ್ರೀ ಚೈತನ್ಯ ಮಠಪುರ ಆದಿ ಮುತ್ತಪ್ಪನ್ ದೇವಾಲಯದ ವಾರ್ಷಿಕ ತೆರೆ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು. ದೇಗುಲದಲ್ಲಿ ಬೆಳಗ್ಗೆ ಗಣಪತಿ ಹೋಮ ನಡೆಯಿತು. ಬಳಿಕ ಪೈಂಗುತ್ತಿ ಕಾರ್ಯಕ್ರಮ ನಡೆಯಿತು. ಸಂಜೆ ವೇಳೆಗೆ ಶ್ರೀ ಶ್ರೀ ಮುತ್ತಪ್ಪನ್ ವೆಳ್ಳಾಟಂ, ಗುಳಿಗ ವೆಳ್ಳಾಟಂ ತೆರೆಗಳು ಭಕ್ತರಿಗೆ ಅಭಯ ಹಸ್ತ ನೀಡಿದವು. ಸಂಜೆ 6-30ಕ್ಕೆ ಆರಂಭವಾದ ತೆರ ಪ್ರದರ್ಶನಗಳು ರಾತ್ರಿ 11 ಗಂಟೆಯ ವೇಳೆಗೆ ಸಮಾಪ್ತಿಯಾಯಿತು. ದೇಗುಲದ ಆಡಳಿತ ಮಂಡಳಿ ಮತ್ತು ಉತ್ಸವ ಸಮಿತಿ ವತಿಯಿಂದ ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಗ್ರಾಮಸ್ಥರು, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನಗರ ಪ್ರದೇಶಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ಆದಿ ಶ್ರೀ ಮುತ್ತಪ್ಪನ್ ದೇಗುಲವು ಶಿಥಿಲಗೊಂಡ ಕಾರಣ 2024 ರ ವಾರ್ಷಿಕ ಉತ್ಸವದ ಬಳಿಕ ದೇಗುಲ ಪುನರ್ ನಿರ್ಮಾಣ ಕಾರ್ಯವು ಶರವೇಗದಲ್ಲಿ ನಡೆಯಿತು. ದೇಗುಲದ ಪುನರ್ ನಿರ್ಮಾಣದ ಕಾರ್ಯಗಳು ಅಪೂರ್ಣಗೊಂಡಿದ್ದು ವಾರ್ಷಿಕ ಉತ್ಸವದ ಬಳಿಕ ದಾನಿಗಳ ನೆರವಿನಿಂದ ಹಂತ ಹಂತವಾಗಿ ಜೀರ್ಣೋದ್ಧಾರ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ದೇಗುಲದ ಪ್ರಮುಖರಾದ ಜಯೇಶ್ ಹೇಳಿದರು.ಈ ಸಂದರ್ಭ ದೇಗುಲದ ಆಡಳಿತ ಮಂಡಳಿಯ ಸದಸ್ಯರು ಕುಟುಂಬ ವರ್ಗ ಮತ್ತು ಉತ್ಸವ ಸಮಿತಿ ಸದಸ್ಯರು ಭಕ್ತಾದಿಗಳು ಹಾಜರಿದ್ದರು.