ಹೃದಯ ಕಾಳಜಿ ಬಹುಮುಖ್ಯ: ಡಾ.ವಿಜೇತ್
KannadaprabhaNewsNetwork | Published : Oct 07 2023, 02:18 AM IST
ಹೃದಯ ಕಾಳಜಿ ಬಹುಮುಖ್ಯ: ಡಾ.ವಿಜೇತ್
ಸಾರಾಂಶ
ವಿಶ್ವ ಹೃದಯ ದಿನ ಕಾರ್ಯಕ್ರಮ
ಶಿವಮೊಗ್ಗ: ಯುವಜನತೆ ಈಗಿನಿಂದಲೇ ಹೃದಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಖ್ಯಾತ ಹೃದ್ರೋಗ ತಜ್ಞ ವೈದ್ಯ ಡಾ.ವಿಜೇತ್ ಹೇಳಿದರು. ಸರ್ಜಿ ಆಸ್ಪತ್ರೆ ಹಾಗೂ ಗ್ಲೆನ್ ಮಾರ್ಕ್ ಫಾರ್ಮಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹೃದಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಕಾಯಿಲೆ ಬಾರದಿರುವಂತೆ ನೋಡಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿದರು. ಮನುಷ್ಯನ ಅಂಗಾಂಗಗಳಲ್ಲಿ ಅತ್ಯಂತ ಪ್ರಮುಖವಾದ ಹೃದಯದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಬೇಕು. ಯುವಜನತೆಯು ಈಗಿನಿಂದಲೇ ಇದರತ್ತ ಗಮನಹರಿಸುವುದು ಅತ್ಯಂತ ಜರೂರಾಗಿದೆ ಎಂದು ಹೇಳಿದರು. ಪ್ರತಿನಿತ್ಯ ವ್ಯಾಯಾಮ ಮಾಡುವುದು, ಮದ್ಯಪಾನ, ಧೂಮಪಾನದಿಂದ ದೂರವಿರುವುದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು, ಆಹಾರ ಸೇವನೆಯಲ್ಲಿ ಎಚ್ಚರ ವಹಿಸುವುದು, ಜೀವನದಲ್ಲಿ ಅನಗತ್ಯ ಒತ್ತಕ್ಕೆ ಒಳಗಾಗದೇ ಇರುವುದು ಮೊದಲಾದವುಗಳಿಂದ ಹೃದಯ ಸಂಬಂಧಿ ರೋಗದಿಂದ ದೂರವಿರಲು ಸಾಧ್ಯ ಎಂದರು. ಸರ್ಜಿ ಸಮೂಹ ಸಂಸ್ಥೆಗಳ ನಿರ್ದೇಶಕಿ ನಮಿತಾ ಮಾತನಾಡಿ, 6 ಸಾವಿರ ಲೀಟರ್ ರಕ್ತವನ್ನು ಪ್ರತಿನಿತ್ಯ ಪಂಪ್ ಮಾಡುವ ಹೃದಯದ ಕಾರ್ಯಕ್ರಮತೆಯನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಇಂತಹ ಹೃದಯದ ಬಗ್ಗೆ ಹೆಚ್ಚು ಕಾಳಜಿ, ಗಮನ ವಹಿಸಬೇಕಾಗುತ್ತದೆ. ಮಧುಮೇಹ, ಬಿ.ಪಿ. ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಪ್ರತಿಯೊಬ್ಬರೂ ನಿರಂತರವಾಗಿ ವೈದ್ಯರನ್ನು ಭೇಟಿಯಾಗಿ ಹೃದಯದ ತಪಾಸಣೆ ಮಾಡಿಸಬೇಕು ಎಂದರು. ಪತ್ರಕರ್ತ ವೈ.ಕೆ. ಸೂರ್ಯನಾರಾಯಣ್ ಮಾತನಾಡಿ, ಸರ್ಜಿ ಸಮೂಹ ಸಂಸ್ಥೆಗಳು ಕೇವಲ ಚಿಕಿತ್ಸೆ ನೀಡಲು ಸೀಮಿತವಾಗದೆ, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಪರಿಸರ ಸಂರಕ್ಷಣೆ ಚಟುವಟಿಕೆಗಳು, ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ, ವಿಶೇಷ ಚೇತನರ ಆರೈಕೆ ಹೀಗೆ ಸಮಗ್ರವಾಗಿ ಸಮಾಜಕ್ಕೆ ಪೂರಕವಾಗಿ ಡಾ.ಧನಂಜಯ ಸರ್ಜಿ ಮತ್ತು ನಮಿತಾ ಸರ್ಜಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಗ್ಲೆನ್ ಮಾರ್ಕ್ ಫಾರ್ಮಾದ ಅನಿಲ್ ಬೇಗೂರು ಸೂರ್ಯನಾರಾಯಣ ಉಪಸ್ಥಿತರಿದ್ದರು. - - - -ಫೋಟೋ: ಶಿವಮೊಗ್ಗದ ಸರ್ಜಿ ಆಸ್ಪತ್ರೆ ಹಾಗೂ ಗ್ಲೆನ್ ಮಾರ್ಕ್ ಫಾರ್ಮಗಳ ಆಶ್ರಯದಲ್ಲಿ ವಿಶ್ವ ಹೃದಯ ದಿನ ಕಾರ್ಯಕ್ರಮ ನಡೆಯಿತು.