ಸಾರಾಂಶ
ಜೀವನದಲ್ಲಿ ತುತ್ತು ಕೊಟ್ಟ ಹೆತ್ತವರನ್ನು ಯುವ ಸಮುದಾಯ ಮರೆಯಬಾರದು. ಯುವಕರು ಯಾವುದೇ ದುಷ್ಚಟಕ್ಕೆ ಬಲಿಯಾಗದೇ ನಮಾಜ್, ರೋಜಾ, ಜಕಾತ್ ಮೂಲಕ ದೀನ್ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಖ್ಯಾತ ವಾಗ್ಮಿ, ಹಜರತ್ ಮೆಹಬೂಬ್ ಸುಭಾನಿ ವಂಶಸ್ಥ ಗಾಜೀಯೇ ಮಿಲ್ಲತ್ ಸೈಯದ್ ಮಹಮ್ಮದ್ ಹಾಷ್ಮೀಮಿಯಾ ಹೇಳಿದರು.
ಗಜೇಂದ್ರಗಡ: ಸ್ವರ್ಗವು ನಿಮ್ಮ ತಾಯಿಯ ಪಾದದ ಕೆಳಗಿದ್ದು, ಸ್ವರ್ಗಕ್ಕೆ ಅಂಗೀಕಾರವನ್ನು ಪಡೆಯಲು ತಾಯಿಯನ್ನು ಗೌರವಿಸಬೇಕು ಎಂದು ಪ್ರವಾದಿಯವರು ಹಾಕಿಕೊಟ್ಟ ಸಂಪ್ರದಾಯ ನಮ್ಮದು ಎಂದು ಖ್ಯಾತ ವಾಗ್ಮಿ, ಹಜರತ್ ಮೆಹಬೂಬ್ ಸುಭಾನಿ ವಂಶಸ್ಥ ಗಾಜೀಯೇ ಮಿಲ್ಲತ್ ಸೈಯದ್ ಮಹಮ್ಮದ್ ಹಾಷ್ಮೀಮಿಯಾ ಹೇಳಿದರು.
ಸ್ಥಳೀಯ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಗೌಸೇ ಆಜಂ ಕಾನ್ಫರೆನ್ಸ್ ಕಮಿಟಿ ವತಿಯಿಂದ ರಾಜಾಬಕ್ಷಾರ ದರ್ಗಾದ ಡಾ. ಬುಕ್ಕಿಟಗಾರ ಅವರ ಬಯಲು ಜಾಗದಲ್ಲಿ ನಡೆದ ಗೌಸೇ ಆಜಂ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೀವನದಲ್ಲಿ ತುತ್ತು ಕೊಟ್ಟ ಹೆತ್ತವರನ್ನು ಯುವ ಸಮುದಾಯ ಮರೆಯಬಾರದು. ಯುವಕರು ಯಾವುದೇ ದುಷ್ಚಟಕ್ಕೆ ಬಲಿಯಾಗದೇ ನಮಾಜ್, ರೋಜಾ, ಜಕಾತ್ ಮೂಲಕ ದೀನ್ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದ ಅವರು, ಖುರಾನ್ (ಇಸ್ಲಾಂನ ಪವಿತ್ರ ಗ್ರಂಥ) ಮತ್ತು ಸುನ್ನತ್ (ಪ್ರವಾದಿ ಮುಹಮ್ಮದ್ ಅವರ ಕಾರ್ಯಗಳು ಮತ್ತು ಹೇಳಿಕೆಗಳು) ಪ್ರಕಾರ, ನಮ್ಮ ಹೆತ್ತವರನ್ನು ಗೌರವ ಮತ್ತು ಪ್ರೀತಿಯಿಂದ ನಡೆಸಿಕೊಳ್ಳುವುದು ಆರಾಧನೆಯ ಕ್ರಿಯೆಯಾಗಿದೆ. ಸರ್ವಶಕ್ತನಾದ ಅಲ್ಲಾ (ದೇವರು) ತನ್ನ ಸೃಷ್ಟಿಯ ಬಗೆಗಿನ ಪ್ರೀತಿ ಮತ್ತು ಕರುಣೆಯನ್ನು ತಾಯಿಯ ಪ್ರೀತಿಯೊಂದಿಗೆ ಹೋಲಿಸುವ ಮೂಲಕ ವಿವರಿಸಲಾಗಿದೆ ಎಂದರು.ಸೈಯದ್ ಮಹಮ್ಮದ್ ನೂರಾನಿ ಮಿಯಾ ಅವರು ಮಾತನಾಡಿ, ಪ್ರವಾದಿ ಮುಹಮ್ಮದ್ (ಸ) ದೇವನ ಪ್ರವಾದಿಗಳ ಪೈಕಿ ಅಂತಿಮ ಸಂದೇಶವಾಹಕರಾಗಿದ್ದಾರೆ. ಅವರ ಜೀವನವು ಒಂದು ತೆರೆದ ಗ್ರಂಥವಾಗಿದೆ. ಪ್ರವಾದಿ (ಸ) ಅವರ ಜೀವನ ಚರಿತ್ರೆಯನ್ನು ದಾಖಲಿಸಿರುವಂತೆ ಜಗತ್ತಿನಲ್ಲಿ ಈ ವರೆಗೂ ಬೇರೆ ಯಾರ ಚರಿತ್ರೆಯನ್ನೂ ದಾಖಲಿಸಲಾಗಿಲ್ಲ ಎಂದರು.
ಇದಕ್ಕೂ ಮುನ್ನ ಸೂಪಿಯಾನ್ ಸಖಾಫಿ ಕನ್ನಡದಲ್ಲಿ ಪ್ರವಚನ ನೀಡಿದರು. ಮೌಲಾನ ಖಲೀಲ ಅಹ್ಮದ ಖಾಜಿ, ರಫೀಕ್ ಮೌಲಾನ, ಯಾಸೀನ ಮೌಲಾನ, ಅಂಜುಮನ್ ಇಸ್ಲಾಂ ಕಮಿಟಿ ಚೇರ್‌ಮನ್ ಹಸನಸಾಬ ತಟಗಾರ, ಪುರಸಭೆ ಸದಸ್ಯರಾದ ಮುರ್ತುಜಾ ಡಾಲಾಯತ್, ರಾಜು ಸಾಂಗ್ಲೀಕರ ಹಾಗೂ ಎ.ಡಿ. ಕೋಲಕಾರ, ಎಂ.ಎಚ್. ಕೋಲಕಾರ, ಸುಭಾನಸಾಬ ಆರಗಿದ್ದಿ, ಫಯಾಜ್ ತೋಟದ, ದಾವಲಸಾಬ ತಾಳಿಕೋಟಿ, ಮಾಸುಮಲಿ ಮದಗಾರ, ಇಮ್ರಾನ್ ಅತ್ತಾರ, ನಾಸೀರಅಲಿ ಸುರಪುರ ಇತರರು ಇದ್ದರು.