ಹುಬ್ಬಳ್ಳಿ:
ನೂತನ ಸರ್ಕಾರದಲ್ಲಿ ಸಚಿವಗಿರಿಗಾಗಿ ಶಾಸಕರಾದ ಪ್ರಸಾದ ಅಬ್ಬಯ್ಯ ಹಾಗೂ ಎನ್.ಎಚ್. ಕೋನರಡ್ಡಿ ನಡುವೆ ಭಾರೀ ಪೈಪೋಟಿ ನಡೆದಿದೆ.ಹಾಗೆ ನೋಡಿದರೆ ಸಚಿವ ಸ್ಥಾನಕ್ಕೆ ಐವರು ಅರ್ಹರು. ಮಾಜಿ ಸಚಿವ ಸಂತೋಷ ಲಾಡ್, ಪ್ರಸಾದ ಅಬ್ಬಯ್ಯ, ಕೋನರಡ್ಡಿ, ವಿಪ ಹಿರಿಯ ಸದಸ್ಯ, ಸರ್ಕಾರಿ ಮುಖ್ಯ ಸಚೇತಕ ಸಲೀಂಅಹ್ಮದ, ಎಫ್.ಎಚ್. ಜಕ್ಕಪ್ಪನವರ ಈ ಐವರೂ ಅರ್ಹರಾಗಿದ್ದಾರೆ. ಅದರಲ್ಲಿ ಅಬ್ಬಯ್ಯ ಹಾಗೂ ಕೋನರಡ್ಡಿ ಮಧ್ಯೆ ಭಾರೀ ಪೈಪೋಟಿ ಏರ್ಪಟಿದೆ.
ಅಬ್ಬಯ್ಯ ಏಕೆ?ಮೂರು ಬಾರಿ ಶಾಸಕರಾಗಿ ಆಯ್ಕೆಯಾದವರು. ಲೀಡ್ಕರ್ ಹಾಗೂ ಸ್ಲಂ ಬೋರ್ಡ್ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದವರು. ಮೇಲಾಗಿ ಜಿಲ್ಲೆಯ ಹಿರಿಯ ಶಾಸಕರು. ಕಳೆದ ಬಾರಿಯೂ ತಮಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಸಲ ಸಚಿವ ಸ್ಥಾನ ನೀಡಬೇಕೆಂಬ ಇವರ ಬೆಂಬಲಿಗರ ಕೂಗು ಜೋರಾಗಿದೆ. ಸಿಗುವ ಸಾಧ್ಯತೆಯೂ ಹೆಚ್ಚಿದೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿರುವ ದಲಿತ ಎಡಗೈ ಸಮುದಾಯದ ವ್ಯಾಪ್ತಿಯಲ್ಲೇ ಬರುವ ಕಾರಣ ಅತ್ತ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆಗೆ ಉಪಮುಖ್ಯಮಂತ್ರಿ ಅಥವಾ ಮಂತ್ರಿಗಿರಿ ಸಿಗುವ ಸಾಧ್ಯತೆ ಇದ್ದು ಇವರಿಗೆ ಸಚಿವ ಸ್ಥಾನ ಸಿಗುವುದು ಕಷ್ಟ ಎಂದೆನಿಸಿದರೂ ಕೊಡಲೇಬೇಕೆಂಬ ಒತ್ತಾಯ ಬೆಂಬಲಿಗರದ್ದು. ಹೀಗಾಗಿ ಈ ಸಲ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ.
ಕೋನರಡ್ಡಿ ಏಕೆ?
ಕೋನರಡ್ಡಿ, ಈ ಸಲದ ಚುನಾವಣೆ ವೇಳೆ ಕಾಂಗ್ರೆಸ್ಸಿಗೆ ಬಂದವರಾದರೂ ರಾಜಕೀಯದಲ್ಲಿ ಹಿರಿಯರು. ಜೆಡಿಎಸ್‌ನಲ್ಲಿನ ಅನುಭವದಿಂದ ಕಾಂಗ್ರೆಸ್ ಕೈ ತಪ್ಪಿದ್ದ ನವಲಗುಂದ ಕ್ಷೇತ್ರವನ್ನು ಮರಳಿ ಕಾಂಗ್ರೆಸ್‌ಗೆ ತಂದಿರುವುದು ಇವರಿಗೆ ಪ್ಲಸ್ ಪಾಯಿಂಟ್. ಜತೆಗೆ ಮಹದಾಯಿ ಹೋರಾಟದಿಂದಲೇ ರಾಜಕೀಯಕ್ಕೆ ಬಂದಿರುವ ಕೋನರಡ್ಡಿ ಕ್ಷೇತ್ರದಲ್ಲೂ ಸಾಕಷ್ಟು ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಚಕ್ಕಡಿ ದಾರಿ ಹೆದ್ದಾರಿಯಂತೆ ಮಾಡಿದ ಹೆಗ್ಗಳಿಕೆ ಇವರದು. ಹೀಗಾಗಿ ತಮಗೆ ಅವಕಾಶ ಕೊಟ್ಟರೆ ಅತ್ಯಂತ ಕಟ್ಟುನಿಟ್ಟಿನಿಂದ ಅಭಿವೃದ್ಧಿ ಮಾಡಿ ತೋರಿಸುವೆ ಎಂಬ ಮಾತು ಕೋನರಡ್ಡಿ ಅವರದ್ದು.
ಇವರಿಬ್ಬರ ನಡುವೆ ಭಾರೀ ಪೈಪೋಟಿ ನಡೆದಿದೆಯಾದರೂ ಸಂತೋಷ ಲಾಡ್, ಇನ್ನೊಂದು ಸಲ ಅವಕಾಶ ಕೊಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಇನ್ನು ವಿದ್ಯಾರ್ಥಿ ಕಾಂಗ್ರೆಸ್‌ನಿಂದಲೇ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸಲೀಂ ಅಹ್ಮದ್ ಕೂಡ ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಇವೆಲ್ಲದರ ನಡುವೆ ಚುನಾವಣೆಗೆ ಎರಡೇ ವರ್ಷ ಇರುವ ಕಾರಣ ಪಕ್ಷವೂ ತನ್ನ ಸಂಘಟನೆಯನ್ನು ಗಮನದಲ್ಲಿಟ್ಟುಕೊಳ್ಳುವ ಜತೆ ಜತೆಗೆ ಅಭಿವೃದ್ಧಿಯ ಮೇಲೂ ನಿಗಾವಹಿಸಿಕೊಂಡು ಸಚಿವ ಸ್ಥಾನ ನೀಡುವ ಸವಾಲು ಇದೀಗ ಕೆಪಿಸಿಸಿ ಮೇಲಿದೆ. ಹೀಗಾಗಿ ಅಳೆದು-ತೂಗಿ ಸಚಿವ ಸ್ಥಾನ ನೀಡಲು ಪಕ್ಷ ನೀಡಲಿದೆ ಎಂಬುದು ಮಾತ್ರ ಸ್ಪಷ್ಟ. ಯಾರಿಗೆ ಸಚಿವಗಿರಿ ಒಲಿಯುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!