ಶಿಕ್ಷಣದಿಂದ ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ. ಇದು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿ, ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮಾಡುತ್ತದೆ.

ಶಿರಹಟ್ಟಿ: ಸಮಾಜದ ಎಲ್ಲ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಣವು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸವಿತಾ ತಾಂಭ್ರೆ ತಿಳಿಸಿದರು.ಸೋಮವಾರ ಪಟ್ಟಣದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಲ್ಲಿ ೨೦೨೬- ೨೭ನೇ ಸಾಲಿನ ಶೈಕ್ಷಣಿಕ ಶಾಲಾ ಪ್ರಾಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಿಗೆ ಪ್ರಸಕ್ತ ಸಾಲಿನ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿ ಮಾತನಾಡಿದರು.

ಶಿಕ್ಷಣದಿಂದ ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ. ಇದು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿ, ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮಾಡುತ್ತದೆ. ಬಡತನ, ಲಿಂಗಭೇದ, ಅಂಗವೈಕಲ್ಯ ಅಥವಾ ದೂರದ ಪ್ರದೇಶಗಳಲ್ಲಿ ವಾಸಿಸುವಂಥ ಕಾರಣಗಳಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂದರು.

ಸರ್ಕಾರ, ಶಾಲೆಗಳು, ಪೋಷಕರು ಮತ್ತು ಸಮಾಜದ ಎಲ್ಲ ಸದಸ್ಯರು ಸೇರಿ ಶಿಕ್ಷಣದ ಅವಕಾಶಗಳನ್ನು ಎಲ್ಲರಿಗೂ ತಲುಪಿಸುವ ಜವಾಬ್ದಾರಿ ಹೊಂದಿದ್ದಾರೆ. ಆದ್ದರಿಂದ ಸಮಾಜದ ಎಲ್ಲ ವರ್ಗದ ಮಕ್ಕಳಿಗೂ ಸಮಾನವಾಗಿ ಶಿಕ್ಷಣ ಸಿಗುವಂತೆ ಮಾಡುವುದು ಅಭಿವೃದ್ಧಿಶೀಲ ಮತ್ತು ನ್ಯಾಯಸಮ್ಮತ ಸಮಾಜ ನಿರ್ಮಾಣ ಅತ್ಯಗತ್ಯವಾಗಿದೆ ಎಂದರು.

ಶಿರಹಟ್ಟಿ ಕ್ಲಸ್ಟರ್ ಸಿಆರ್‌ಪಿ ಎನ್.ಎನ್. ಸಾವಿರಕುರಿ ಮಾತನಾಡಿ, ವಿದ್ಯೆ ಎಂಬುದು ಮಾನವನ ಜೀವನದಲ್ಲಿ ಅಮೂಲ್ಯವಾದ ಸಂಪತ್ತು. ಮಕ್ಕಳು ಈ ಸಂಪತ್ತನ್ನು ತುಂಬಾ ಶ್ರದ್ಧೆಯಿಂದ ನಿರಂತರವಾದ ಪರಿಶ್ರಮದೊಂದಿಗೆ ಸಂಪಾದಿಸಿಕೊಂಡು ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಬದುಕಿದರೆ ಸುಸಂಸ್ಕೃತ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದರು.

ಪಿಎಂಶ್ರೀ ಶಾಲೆಯ ಪ್ರಧಾನ ಗುರುಗಳಾದ ಆರ್.ಬಿ. ಪಲ್ಲೇದ, ಉರ್ದು ಕ್ಲಸ್ಟರ್‌ನ ಸಿಆರ್‌ಪಿ ಜಾಫರ್ ಬದಾಮಿ, ನೌಕರ ಸಂಘದ ನಿರ್ದೇಶಕ ಕಾಶಪ್ಪ ಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಯಾಸ್ಮಿನ ಶಿರಹಟ್ಟಿ, ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಸದಸ್ಯರು ಭಾಗವಹಿಸಿದ್ದರು.