ವೀರಶೈವ- ಲಿಂಗಾಯತ ಮಠಗಳಿಂದಾಗಿ ಅನೇಕರು ಶಿಕ್ಷಣದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಅದರಲ್ಲಿ ಮುಂಡರಗಿ ಅನ್ನದಾನೀಶ್ವರ ಮಠವು ಶಿಕ್ಷಣ ಮತ್ತು ದಾಸೋಹ ಕಾರ್ಯವನ್ನು ಕಳೆದ 100 ವರ್ಷಗಳಿಂದ ಮಾಡುತ್ತಿರುವುದು ನಾಡಿನ ಹೆಮ್ಮೆ.
ಮುಂಡರಗಿ: ರಾಜ್ಯದಲ್ಲಿ ವೀರಶೈವ- ಲಿಂಗಾಯತ ಮಠಗಳು ಸಮಾಜದ ಎಲ್ಲ ವರ್ಗದ ಜನರಿಗೆ ಶಿಕ್ಷಣ ಮತ್ತು ದಾಸೋಹದ ಮೂಲಕ ಪ್ರಸಾದ ನೀಡುವ ಮೂಲಕ ಹೊಟ್ಟೆ ಮತ್ತು ನೆತ್ತಿ ತುಂಬಿಸುವ ಕಾರ್ಯ ಮಾಡುತ್ತಾ ಬಂದಿವೆ ಎಂದು ಹಾವೇರಿ ಹುಕ್ಕೇರಿಮಠದ ಡಾ. ಸದಾಶಿವ ಸ್ವಾಮೀಜಿ ತಿಳಿಸಿದರು.ಪಟ್ಟಣದ ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ 1847ನೇ ಮಾಸಿಕ ಶಿವಾನುಭವ ಮತ್ತು ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದಿಂದ ಹಾವೇರಿ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಪಡೆದ ಹಿನ್ನೆಲೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವೀರಶೈವ- ಲಿಂಗಾಯತ ಮಠಗಳಿಂದಾಗಿ ಅನೇಕರು ಶಿಕ್ಷಣದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಅದರಲ್ಲಿ ಮುಂಡರಗಿ ಅನ್ನದಾನೀಶ್ವರ ಮಠವು ಶಿಕ್ಷಣ ಮತ್ತು ದಾಸೋಹ ಕಾರ್ಯವನ್ನು ಕಳೆದ 100 ವರ್ಷಗಳಿಂದ ಮಾಡುತ್ತಿರುವುದು ನಾಡಿನ ಹೆಮ್ಮೆ. ನಾವೆಲ್ಲ ಶಿವಯೋಗಿಮಂದಿರದಲ್ಲಿ ವಟುಗಳಿದ್ದಾಗ ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿಯವರು ನಮಗೆ ಪಾಠ- ಪ್ರವಚನ ಮಾಡಿ ಸಂಸ್ಕಾರ ನೀಡಿದ್ದಾರೆ. ಸಮಾಜ ಸೇವೆಗೆ ನಮ್ಮನ್ನೆಲ್ಲ ಸನ್ನದ್ಧರಾಗುವಂತೆ ಮಾಡಿದ್ದಾರೆ. ಶ್ರೀಗಳು ನಡೆದಾಡುವ ವಿಶ್ವವಿದ್ಯಾಲಯವಿದ್ದಂತೆ ಎಂದರು,ಗದುಗಿನ ಪಂ. ಪಂಚಾಕ್ಷರಿ ಗವಾಯಿಗಳ ಶಿಕ್ಷಣ ಮಹಾವಿದ್ಯಾಲಯದ ಪ್ರಾ. ಡಾ. ವೀರೇಶ ಹಿತ್ತಲಮನಿ ಮಾತನಾಡಿ, ಯುವಜನತೆ ನೂರೆಂಟು ಕೆಟ್ಟ ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರ ಜೀವನ ಉಜ್ವಲವಾಗಬೇಕಾದರೆ ಶ್ರೀಮಠದ ಸಾಮೀಪ್ಯ ಬರಬೇಕು ಎಂದರು.ಸಾನ್ನಿಧ್ಯ ವಹಿಸಿದ್ದ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿದರು. ಶ್ರೀಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಡಾ. ವೀರಭದ್ರ ಶಿವಾಚಾರ್ಯರು ಮತ್ತು ಲಕ್ಷ್ಮೇಶ್ವರದ ಮಂಜುನಾಥಯ್ಯ ದೇವರು ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಎಸ್.ಸಿ. ಚಕ್ಕಡಿಮಠ, ನಾಗಭೂಷಣ ಹಿರೇಮಠ, ಎಸ್.ಎಸ್. ಮಠದ, ಎಸ್.ಬಿ. ಗಿಂಡಿಮಠ, ವಿನಯಕುಮಾರ ಗಂಧದ ಅವರನ್ನು ಸತ್ಕರಿಸಲಾಯಿತು. ಕಳೆದ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ವೀರಭದ್ರಯ್ಯ ಹಿರೇಮಠ, ಕೆ.ವಿ. ಹಿರೇಮಠ ಉಪಸ್ಥಿತರಿದ್ದರು. ಸಂಗೀತ ಶಿಕ್ಷಕ ಆರ್.ಎಸ್. ಮರಿದೇವರಮಠ ಅವರಿಂದ ಸಂಗೀತ ಸೇವೆ ನಡೆಯಿತು. ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ವಿ.ಜೆ. ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಮಠದ ಮತ್ತು ಶ್ರೀಮತಿ ಹಂಪಿಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.