ಶಾಲೆಯ ಮುಖ್ಯ ದ್ವಾರದಲ್ಲಿ ಅತಿಥಿಗಳು ಹಾಗೂ ಶಿಕ್ಷಕರು ಸೇರಿ ಮಕ್ಕಳ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಂಡರು. ಮಕ್ಕಳಿಗಾಗಿ ವಿಶೇಷವಾಗಿ ನಿರ್ಮಿಸಲಾಗಿದ್ದ ಸೆಲ್ಫಿ ಕಾರ್ನರ್ ವಿದ್ಯಾರ್ಥಿಗಳ, ಪಾಲಕರ ಗಮನ ಸೆಳೆಯಿತು.

ಗದಗ: ಹೊಸ ಶೈಕ್ಷಣಿಕ ವರ್ಷದ ಆರಂಭವನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ತಾಲೂಕಿನ ಅಸುಂಡಿಯ ಕುವೆಂಪು ಶತಮಾನೋತ್ಸವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾರಂಭೋತ್ಸವ ಕಾರ್ಯಕ್ರಮ ಅದ್ಧೂರಿ ಹಾಗೂ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳ ಭವ್ಯ ಮೆರವಣಿಗೆ ನಡೆಯಿತು. ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಶಾಲೆಗೆ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು ಮಕ್ಕಳನ್ನು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಿದರು.

ಶಾಲೆಯ ಮುಖ್ಯ ದ್ವಾರದಲ್ಲಿ ಅತಿಥಿಗಳು ಹಾಗೂ ಶಿಕ್ಷಕರು ಸೇರಿ ಮಕ್ಕಳ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಂಡರು. ಮಕ್ಕಳಿಗಾಗಿ ವಿಶೇಷವಾಗಿ ನಿರ್ಮಿಸಲಾಗಿದ್ದ ಸೆಲ್ಫಿ ಕಾರ್ನರ್ ವಿದ್ಯಾರ್ಥಿಗಳ, ಪಾಲಕರ ಗಮನ ಸೆಳೆಯಿತು.ಶಾಲಾರಂಭೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಶಿಕ್ಷಣವು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕಾಗಿದ್ದು, ಸರ್ಕಾರ ಮತ್ತು ಸಂವಿಧಾನದ ಆಶಯವೂ ಎಲ್ಲ ಮಕ್ಕಳಿಗೆ ಗುಣಮಟ್ಟದ ಹಾಗೂ ಸಮಾನ ಶಿಕ್ಷಣ ಒದಗಿಸುವುದಾಗಿದೆ ಎಂದರು.

ಪ್ರತಿ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಪೂರ್ವಯೋಜಿತವಾಗಿ ರೂಪಿಸಿ ಅನುಷ್ಠಾನಗೊಳಿಸುವುದೇ ಶಾಲಾರಂಭೋತ್ಸವದ ಪ್ರಮುಖ ಉದ್ದೇಶವಾಗಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಮಾಜ ಅರಿಯಬೇಕು ಎಂದರು.

ನಿವೃತ್ತ ಉಪನಿರ್ದೇಶಕ ಎ.ಎನ್. ನಾಗರಳ್ಳಿ ಮಾತನಾಡಿ, ಶಿಕ್ಷಕರ ಪಾತ್ರ ಸಮಾಜ ನಿರ್ಮಾಣದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಅಭಿವೃದ್ಧಿ) ಕೆ.ಡಿ. ಬಡಿಗೇರ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು.

ಗದಗ ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿ ಜೆ.ಎ. ಭಾವಿಕಟ್ಟಿ, ಡಿವೈಪಿಸಿ ರವಿ ಪ್ರಕಾಶ, ಪ್ರೌಢಶಾಲಾ ಶಿಕ್ಷಣ ಸಂಘದ ಅಧ್ಯಕ್ಷ ಬಿ.ಎಫ್. ಪೂಜಾರ, ವಿ.ಎಂ. ಹಿರೇಮಠ, ರವಿರಾಜ ಪವಾರ, ಗೀತಾ ಕುಲಕರ್ಣಿ, ವಿ.ಎಫ್. ಕಲಕುಂಬಿ, ಶಂಕರ ಹಡಗಲಿ, ಶೈಲಜಾ ಮಟ್ಟಿ, ಡಾ. ಬಸವರಾಜ ಬಳ್ಳಾರಿ, ಎಚ್.ವೈ. ಹೊನ್ನಿನಾಯ್ಕರ, ಸೋಮರೆಡ್ಡಿ ರಾಮೇನಳ್ಳಿ, ಶಿವಾನಂದ ಕರಿಗಾರ, ಫಕ್ಕಿರೆಡ್ಡಿ ಮಾಡಳ್ಳಿ, ತಾಜುದ್ದೀನ ಓಲೇಕಾರ, ರೇಖಾ ತಿಮ್ಮನಗೌಡ್ರ ಸೇರಿದಂತೆ ಇತರರು ಇದ್ದರು. ಶಿವಕುಮಾರ ಕುರಿ ಸ್ವಾಗತಿಸಿದರು. ಡಿ.ಎಚ್. ಪರಂಗಿ ನಿರೂಪಿಸಿದರು. ವಿ.ವಿ. ನಡುವಿನಮನಿ ವಂದಿಸಿದರು.