-ತಡೆಗೋಡೆ ವಾಲುತ್ತಿರುವುದನ್ನು ಕಂಡು ನಿವಾಸಿಗಳ ಆತಂಕ । ತಾಲೂಕು ಕಚೇರಿ ಎದುರು ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಶೃಂಗೇರಿಪಟ್ಟಣದ ಹೃದಯ ಭಾಗದ ಭಾರತಿ ಬೀದಿಗೆ ತಾಗಿಕೊಂಡಿರುವ ತಾಲೂಕು ಕಚೇರಿ ಬಳಿಯ ಗುಡ್ಡಕ್ಕೆ ನಿರ್ಮಿಸುತ್ತಿರುವ ತಡೆಗೋಡೆಯುದ್ದಕ್ಕೂ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬಿರುಕು ಬಿಟ್ಟು ಪಟ್ಟಣ ಹಾಗೂ ಮನೆಗಳತ್ತ ವಾಲಿಕೊಂಡಿದೆ. ಯಾವುದೇ ಕ್ಷಣದಲ್ಲಿ ಕುಸಿಯುವ ಆತಂಕ ಎದುರಾಗಿದೆ.
ತಾಲೂಕು ಕಚೇರಿ ಹಾಗೂ ಮುಸ್ಲಿಮರ ದರ್ಗಾವಿದ್ದು ಈ ಹಿಂದೆ ಭಾರೀ ಮಳೆಯಿಂದ ದರ್ಗಾದ ಬಳಿ ಗುಡ್ಡಕುಸಿಯಲಾರಂಬಿಸಿತ್ತು. ಗುಡ್ಡಕ್ಕೆ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ಸುಮಾರು ₹1.84 ಕೋಟಿ ಅನುದಾನದಡಿ ಕಳೆದ ಮೂರು ತಿಂಗಳ ಹಿಂದೆ ಕಾಮಗಾರಿ ಆರಂಭಗೊಂಡಿತ್ತು.ವಾಲ್ ನಿರ್ಮಿಸಿ ಸುಮಾರು 1000ಕ್ಕೂ ಹೆಚ್ಚು ಲೋಡ್ ಮಣ್ಣು ತುಂಬಿಸಲಾಗಿತ್ತು. ನಾಲ್ಕೈದು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ತಡೆಗೋಡೆಯಲ್ಲಿ ಬಿರುಕು ಕಾಣಲಾರಂಭಿಸಿದೆ. ಗುರುವಾರ ಬೆಳಿಗ್ಗೆ ತಡೆಗೋಡೆ ಸಂಪೂರ್ಣ ಬಿರುಕು ಬಿಟ್ಟು, ವಾಲುತ್ತಿರುವುದನ್ನು ಕಂಡ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ತಡೆಗೊಡೆ ಕೆಳಭಾಗದಲ್ಲಿ ಅನೇಕ ವಾಸದ ಮನೆಗಳು, ಅಂಗಡಿ ಹೋಟೇಲುಗಳು, ಭಾರತೀ ಬೀದಿ ಮುಖ್ಯ ರಸ್ತೆಯಿದೆ.
ತಡೆಗೋಡೆ ಸಹಿತ ಗುಡ್ಡ ಕುಸಿಯುವ ಹಂತದಲ್ಲಿದ್ದು ಭಾರೀ ಅನಾಹುತದ ಮುನ್ಸೂಚನೆ ಕಂಡುಬರುತ್ತಿದೆ. ಈಗಾಗಲೇ ಸ್ಥಳೀಯರು, ವರ್ತಕರು ಸ್ಥಳಾಂತರಗೊಳ್ಳುವಂತೆ ತಾಲೂಕು ಆಡಳಿತ ಸೂಚನೆ ನೀಡಿದೆ. ಅತ್ತ ದಿನೇ ದಿನೇ ತಡೆಗೋಡೆ, ಗುಡ್ಡ ಕುಸಿಯುವ ಹಂತ ತಲುಪಿದ್ದರೆ ಇತ್ತ ರಸ್ತೆಯಲ್ಲಿ ಸಂಚರಿಸುವವರೂ ಸಹ ಭಯದಲ್ಲೆ ಓಡಾಡುವಂತಾಗಿದೆ. ಗುರುವಾರ ಬೆಳಿಗ್ಗೆಯಿಂದಲೇ ತಾಲೂಕು ಕಚೇರಿ ಎದುರು ಸ್ಥಳೀಯರು ಜಮಾಯಿಸಿ ಸ್ಥಳಾಂತರ ಗೊಂಡರೆ ಮುಂದಿನ ಜೀವನ ಹೇಗೆ ಪರಿಹಾರ ಇತರೆ ವಿಷಯವಾಗಿ ಅಧಿಕಾರಿಗಳನ್ನು ಕೇಳತೊಡಗಿದರು.
-- ಬಾಕ್ಸ್--
ಜನರ ಬದುಕಿನೊಂದಿಗೆ ಚೆಲ್ಲಾಟ ಬೇಡ: ಜೀವರಾಜ್ತಡೆಗೋಡೆಯಲ್ಲಿನ ಬಿರುಕು ಹಾಗೂ ವಾಲುತ್ತಿರುವ ವಿಷಯ ತಿಳಿಯುತ್ತಿದ್ದಂತೆ ತಾಲೂಕು ಕಚೇರಿ ಸಮೀಪ ಬೆಳಿಗ್ಗೆಯಿಂದಲೇ ನಿವಾಸಿಗಳು, ಸ್ಥಳೀಯರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು, ಎಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಮನವೊಲಿಸತೊಡಗಿದ್ದರು. ಸ್ಥಳೀಯರು ಕಳಪೆ, ಅವೈಜ್ಞಾನಿಕ ಕಾಮಗಾರಿ ವಿರುದ್ಧ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಕಳಪೆ, ಅವೈಜ್ಞಾನಿಕ ಕಾಮಗಾರಿ ವಿರುದ್ಧ ಘೋಷಣೆ ಕೂಗಿದ್ದರಿಂದ ಕೆಲಹೊತ್ತು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ತಹಸೀಲ್ದಾರ್ ಪ್ರತಿಭಟನಾನಿರತರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದರು.ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ. ಸುಮಾರು ₹1,84 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆದಿದೆ. ನಡೆದಿರುವ 60 ಪರ್ಸೆಂಟ್ ಕಾಮಗಾರಿ ಕಳೆಪೆ ಹಾಗೂ ಅವೈಜ್ಞಾನಿಕವಾಗಿದೆ. ಇದರಲ್ಲಿ ಸಾಕಷ್ಟು ಜನ ಶಾಮಿಲಾಗಿದ್ದಾರೆ. ಚಿಕ್ಕಮಗಳೂರಿನ ಗುತ್ತಿಗೆದಾರನಿಗೆ ಗುತ್ತಿಗೆ ನೀಡಿದ್ದಾರೆ. ಇಡೀ ಗುಡ್ಡವೇ ಕುಸಿದು ಮನೆಗಳ ಮೇಲೆ ಬೀಳುವ ಸ್ಥಿತಿಯಲ್ಲಿದೆ. ಕೇರಳದ ವಯನಾಡು ಘಟನೆ ಇಲ್ಲಿ ಸಂಭವಿಸುವುದರಲ್ಲಿ ಸಂಶಯವಿಲ್ಲ. ಜನರ ಜೀವಕ್ಕೆ ಯಾರು ಭರವಸೆ ನೀಡುತ್ತಾರೆ ಎಂದು ಪ್ರಶ್ನಿಸಿದರು.
ಶೃಂಗೇರಿಯ ಮಣ್ಣು ಮಾಫಿಯದಿಂದ ಲೋಡುಗಟ್ಟಲೇ ಮಣ್ಣು ತುಂಬಿಸಲಾಗಿದೆ. ಈಗ ಇಡೀ ಗುಡ್ಡವೇ ಕುಸಿಯುತ್ತಿದ್ದು, ಕೆಳಗಿರುವ ನಿವಾಸಿಗಳ ಜವಾಬ್ದಾರಿ ತೆಗೆದುಕೊಳ್ಳುವವರು ಯಾರು. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸ್ಥಳದಲ್ಲಿ ಬಿ.ಶಿವಶಂಕರ್, ಪಪಂ ಮಾಜಿ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ್, ಹರೀಶ್ ಶೆಟ್ಟಿ, ಡಿ.ಸಿ.ಶಂಕರಪ್ಪ, ಎಚ್.ಕೆ ನೂತನ್ ಕುಮಾರ್, ಸ್ಥಳೀಯರು ಸೇರಿದಂತೆ ನೂರಾರು ಜನರು ಇದ್ದರು.
9 ಶ್ರೀ ಚಿತ್ರ 1-ಶೃಂಗೇರಿ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದ ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿರುವ ತಾಲೂಕು ಕಚೇರಿ ಬಳಿನಿರ್ಮಾಣ ಹಂತದಲ್ಲಿರುವತಡೆಗೋಡೆ,ಹಾಗೂ ಕುಸಿಯುತ್ತಿರುವ ಗುಡ್ಡ.
9 ಶ್ರೀ ಚಿತ್ರ 2-ತಾಲೂಕು ಕಚೇರಿ ಎದುರು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿರುವುದು.