ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕಿನಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬರದ ಛಾಯೆ ಆವರಿಸುತ್ತಿದ್ದು, ಅನ್ನದಾತರು ಆತಂಕಕ್ಕೆ ಸಿಲುಕಿದ್ದಾರೆ.

ಕೆಲವು ರೈತರು ಬಿತ್ತನೆಗೆ ಕೃಷಿ ಭೂಮಿ ಹಸನು ಮಾಡಿಕೊಂಡು ಆಕಾಶದತ್ತ ಮುಖ ಮಾಡಿದ್ದರೆ, ಬಿತ್ತನೆ ಮಾಡಿದ ರೈತರು ಚಿಗುರೊಡೆದ ಪೈರು ಕಣ್ಮುಂದೆ ಒಣಗುತ್ತಿರುವುದನ್ನು ಕಂಡು ಸಂಕಟ ಪಡುತ್ತಿದ್ದಾರೆ. ಕಳೆದ ವರ್ಷ ಈ ವೇಳೆಗೆ ಶೇ.80ರಷ್ಟು ಬಿತ್ತನೆ ಮಾಡಲಾಗಿತ್ತು. ಈ ವರ್ಷ ಕೇವಲ ಶೇ.5ರಷ್ಟು ಮಾತ್ರ ಬಿತ್ತನೆ ಮಾಡಲಾಗಿದೆ.

ಬಿತ್ತನೆ ಮಾಡುವಷ್ಟು ಮಳೆ ಇಲ್ಲ :ತಾಲೂಕಿನಲ್ಲಿ ಬಿತ್ತನೆ ಮಾಡುವಷ್ಟು ಮಳೆಯಾಗಿಲ್ಲ. ಕೃಷಿ ಇಲಾಖೆ ಈ ಬಾರಿ 1.76 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿದೆ. ಈಗಾಗಲೇ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಮುಂಗಾರು ಬಿತ್ತನೆ ಮಾಡಲಾಗಿದೆ.


ಮಳೆಗಾಗಿ ಕಾಯುತ್ತಿರುವ ರೈತ ಸಮೂಹ:ತಾಲೂ­ಕಿನ ರೈತರನ್ನು ಬರಗಾಲ ಬಿಟ್ಟೂ ಬಿಡದಂತೆ ಕಾಡುತ್ತಿದೆ. ಸದ್ಯ ಹೊಲ ಹದಗೊಳಿಸಿ ಮಳೆಗಾಗಿ ಕಾಯುತ್ತಾ ಕುಳಿತಿರುವ ರೈತರ ಬದುಕಿನ ಮೇಲೆ ಕಾರ್ಮೋಡ ಕವಿದಿದೆ. ರೋಹಿಣಿ, ಮೃಗಶಿರಾ ಮುಂಗಾರು ಮಳೆ ಧರೆಗಿಳಿಯಲು ಮುಜುಗರ ಪಡುತ್ತಿದೆ. ಹೀಗಾಗಿ ಅನ್ನದಾತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ. ಆಕಾಶದಲ್ಲಿ ನಿತ್ಯವೂ ದಟ್ಟ ಮೋಡಗಳು ಆವರಿಸಿಕೊಳ್ಳುತ್ತಿವೆ. ಆದರೆ ಗಾಳಿಯ ರಭಸದಿಂದ ಸಂಜೆಯ ವೇಳೆಗೆ ಮೋಡಗಳು ಕರಗಿ ತಂಗಾಳಿ­ಯಾಗುತ್ತಿವೆ. ಇದರಿಂದ ಈ ಬಾರಿ ನಿಧಾನ­ವಾಗಿ ಬರಗಾಲ ಅಪ್ಪಳಿಸುವ ಎಲ್ಲ ಲಕ್ಷಣಗಳು ಕಾಣುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಈ ವೇಳೆಗೆ ವಾಡಿಕೆಯಂತೆ 156 ಮಿ.ಮೀ. ಮಳೆಯಾಗ­ಬೇಕಿತ್ತು. ಆದರೆ ಆಗಿದ್ದು ಕೇವಲ 132 ಮಿ.ಮೀ. ಇದರಿಂದ ತಾಲೂಕಿನಲ್ಲಿ ಶೇ.16ರಷ್ಟು ಮಳೆ ಕೊರತೆ ಉಂಟಾಗಿದೆ ರೋಹಿಣಿ ಮಳೆಯಾಗುತ್ತದೆ, ಬಿತ್ತನೆ ಕಾರ್ಯ ಕೈಗೊಳ್ಳಬೇಕು ಎಂದು ರೈತರು ಜಮೀನು ಹದ ಮಾಡಿಕೊಂಡು ಮಳೆಗಾಗಿ ಕಾದಿದ್ದಾರೆ. ಕೃತಿಕಾ, ರೋಹಿಣಿ ಮಳೆಗಳು ಆಗಲಿಲ್ಲ. ಮೃಗಶಿರಾ ಮಳೆಯಂತೂ ಸಂಪೂರ್ಣ ಕೈಕೊಟ್ಟಿದೆ. ಆರಿದ್ರ ಮಳೆ ಆಗುತ್ತದೆ ಎಂಬ ವಿಶ್ವಾಸದಲ್ಲಿ ರೈತರು ಇದ್ದಾರೆ. ಆದರೆ ಗಾಳಿಯ ರಭಸಕ್ಕೆ ಮೊಡ ಓಡುತ್ತಿದ್ದು, ಇನ್ನೇನು ಮಳೆ ಬರುತ್ತದೆ ಎನ್ನುವಷ್ಟರಲ್ಲಿ ಮೊಡ ಛಿದ್ರ ಛಿದ್ರವಾಗಿ ಮಾಯವಾಗುತ್ತಿದೆ. ಮಳೆ ಕೊರತೆ ಕೃಷಿ ಕೆಲಸಗಳಿಗೆ ನಷ್ಟವನ್ನುಂಟು ಮಾಡುತ್ತಿದೆ ಮತ್ತು ರೈತರಿಗೆ ಆರ್ಥಿಕ ಸಂಕಷ್ಟ ತರುತ್ತಿದೆ.

ಮಳೆಗಾಗಿ ಮುಗಿಲತ್ತ ಮುಖ ಮಾಡಿದ ಅನ್ನದಾತ:ತಾಲೂಕಿನಲ್ಲಿ ಇತ್ತೀಚೆಗೆ ಅಲ್ಲೊಂದಿಷ್ಟು,ಇಲ್ಲೊಂದಿಷ್ಟು ಸುರಿದ ಮಳೆಯಿಂದ ಖುಷಿಯಾಗಿದ್ದ ರೈತರು, ಮುಂಗಾರು ಹಂಗಾಮಿಗಾಗಿ ಜಮೀನು ಹದ ಮಾಡಿಕೊಳ್ಳುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಗಾರು ಬೆಳೆಗೆ ಭೂಮಿ ತಣಿಯುವಷ್ಟು ಮಳೆಯ ಅಗತ್ಯವಿದೆ. ಹೀಗಾಗಿ ರೈತಾಪಿ ವರ್ಗ ಮುಗಿಲ ಕಡೆಗೆ ನೋಡುತ್ತಾ ಕಾಯುತ್ತಿದ್ದಾರೆ. ವರುಣ ದೇವ ಯಾವಾಗ ಕೃಪೆ ತೋರುವನೋ ಎಂದು ಚಾಲಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಮುಂಗಾರು ಮಳೆಗಳಾದ ಕೃತಿಕಾ, ರೋಹಿಣಿ, ಮೃಗಶಿರ, ಆರಿದ್ರಾ, ಪುನರ್ವಸು, ಪುಷ್ಯ ಮತ್ತು ಆಶ್ಲೇಷ ಮಳೆಗಳು ಸಕಾಲಕ್ಕೆ ತಕ್ಕಂತೆ ಬಂದರೆ ಮಾತ್ರ ಕೃಷಿಕರಿಗೆ ಬಂಪರ್‌ ಸಿಗಲಿದೆ. ಅತಿವೃಷ್ಟಿ ಇಲ್ಲವೆ ಅನಾವೃಷ್ಟಿ ಉಂಟಾದರೆ ಸಂಕಷ್ಟ ತಪ್ಪಿದ್ದಲ್ಲ. ಮುಂಗಾರಿನಲ್ಲಿ ರೊಕ್ಕದ ಬೆಳೆಗಳಾದ ಹೆಸರು, ಉದ್ದು, ತೊಗರಿ, ಸಜ್ಜೆ ಮೊದಲಾದ ಅಲ್ಪಾವಧಿ ಬೆಳೆ ಬೆಳೆದರೆ ಮಾತ್ರ ರೈತರ ಮೊಗದಲ್ಲಿ ನಗೆ ಮೂಡುತ್ತದೆ. ಮುಂಗಾರು ಹೋದರೆ ಹಿಂಗಾರು ಮಾತ್ರ ಗತಿ.

ಮಳೆಯ ನಿರೀಕ್ಷೆಯೊಂದಿಗೆ ಹೊಲಗಳನ್ನು ಹದ ಮಾಡುವ ಕೆಲಸ ಪ್ರಾರಂಭಿಸಿದ್ದಾರೆ. ಕೃಷಿ ಸಲಕರಣೆಗಳಾದ ಕುಂಟೆ, ಕುಡುಪಿಗಳ ಬಾಯಿ ತೊಳಸಿಕೊಡುವ ನಡೆದಿದೆ. ಉತ್ತಮ ಮಳೆ ಬಂದರೆ ರೈತರು ಬಿತ್ತನೆ ಕಾದು ಕುಳಿತಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳು ಸಕಾಲಕ್ಕೆ ರೈತರಿಗೆ ಬೀಜ, ರಸಗೊಬ್ಬರ ನೀಡಲು ದಾಸ್ತಾನು ಮಾಡಿದ್ದಾರೆ. 1200 ಕ್ವಿಂಟಲ್ ಬೀಜ ದಾಸ್ತಾನದಲ್ಲಿ ಇಲ್ಲಿಯವರೆಗೆ ಕೇವಲ 450 ಕ್ವಿಂಟಲ್ ಬೀಜ ಮಾರಾಟವಾಗಿದೆ.

ಗೊಬ್ಬರ,ಬೀಜದ ಮೇಲೆ ನಿಗಾ ಇರಲಿ :ಗೊಬ್ಬರ-ಬೀಜದ ಅಂಗಡಿಗಳು ನಾಯಿಕೊಡೆಗಳಂತೆ ಆರಂಭಗೊಂಡಿದ್ದು, ನಕಲಿ ಬೀಜ-ಗೊಬ್ಬರ ಮಾರಾಟಕ್ಕೂ ಕಡಿವಾಣ ಹಾಕಬೇಕಿದೆ. ಮೊದಲೇ ಭೀಕರ ಬರಗಾಲ ಕಹಿ ಉಂಡ ರೈತರಿಗೆ ಈ ಬಾರಿಯಾದರೂ ಉತ್ತಮ ಮಳೆಯಾಗಿ ಉತ್ತಮ ಬೆಳೆ ಬಂದು ಬೆಳೆದ ಬೆಳೆಗೆ ಸೂಕ್ತ ಬೆಲೆ ಬಂದು ರೈತನ ಬಾಳು ಬೆಳಗಲಿದೆ ಎಂಬ ಆಶಾಭಾವನೆಯಲ್ಲಿ ಇದ್ದಾರೆ.

ಈ ವರ್ಷ ಮುಂಗಾರು ಹಂಗಾಮು ರೈತರ ಭರವಸೆ ಹುಸಿಗೊಳಿಸಿದೆ. ವರ್ಷದ ಕುಟುಂಬ ಖರ್ಚುವೆಚ್ಚಕ್ಕಾಗಿ ರೈತರು ಮುಂಗಾರು ಫಸಲನ್ನೇ ಅವಲಂಬಿಸಿರುತ್ತಾರೆ. ಮುಂಗಾರು ಕೈಕೊಟ್ಟರೆ ರೈತರ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಲಿದೆ. ಜೂನ್‌ ಮುಗಿದು ಜುಲೈ ಆರಂಭವಾದರೂ ಮಳೆಯ ಸುಳಿವು ಇಲ್ಲ. ಮುಂದೆ ಏನು ಮಾಡಬೇಕೆಂದು ತಿಳಿಯದಾಗಿದೆ.

- ಪ್ರಶಾಂತ ಲಾಳಸಂಗಿ ರೈತ

ಮುಂಗಾರು ಬಿತ್ತನೆ ಹಂಗಾಮು ಬಿತ್ತನೆಗೆ ಅಗತ್ಯವಾದ ವಿವಿಧ ಬೀಜಗಳನ್ನು ಇಲಾಖೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಮುಂಗಾರು ಬೆಳೆಗಳಾದ ಹೆಸರು, ಸಜ್ಜೆ, ತೊಗರಿ, ಮೆಕ್ಕೆಜೋಳ, ತೊಗರಿ ಇತರೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ. ಆದರೆ ಬರಬೇಕಾದ ಪ್ರಮಾಣದಲ್ಲಿ ಮಳೆ ಆಗಿಲ್ಲ. ಹೀಗೆಯೇ ಮುಂದುವರಿದರೆ ಬಿತ್ತನೆಗೆ ಸಮಸ್ಯೆ ಆಗುತ್ತದೆ.

- ಮಹಾದೇವಪ್ಪ ಏವೂರ, ಸಹಾಯಕ ಕೃಷಿ ನಿರ್ದೇಶಕ ಇಂಡಿ

ಜುಲೈ ತಿಂಗಳಲ್ಲಿ ಮಳೆ ಬಾರದಿದ್ದರೆ ಲಿಂಬೆ ಕೊಂಡಿ ಉದುರುತ್ತದೆ. ಲಿಂಬೆ ಕಾಯಿ ಸಣ್ಣದಾಗಿ ಬೆಳೆಯುತ್ತದೆ. ಇಳುವರಿ ಮೇಲೆ ಪರಿಣಾಮ ಬೀರುತ್ತದೆ.

- ಸತೀಶ ಬಡಿಗೇರ, ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ