ಕನ್ನಡಪ್ರಭ ವಾರ್ತೆ ರಾಮನಗರ
ಬಿಡದಿ ಟೌನ್ ಶಿಪ್ ಯೋಜನೆ ವಿಚಾರದಲ್ಲಿ 20 ವರ್ಷಗಳಿಂದ ಸಾಕಷ್ಟು ನೊಂದಿದ್ದೇವೆ. ನಾವು ಭೂಸ್ವಾಧೀನಕ್ಕೆ ಒಪ್ಪಿಗೆ ಕೊಟ್ಟಿದ್ದೇವೆ. ಎಲ್ಲ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಿ ಪರಿಹಾರ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವುದು ಸೇರಿದಂತೆ ನಮ್ಮ 12 ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ನಾವು ಸಹ ಹೋರಾಟ ತೀವ್ರಗೊಳಿಸುವುದು ಅನಿವಾರ್ಯವಾಗಲಿದೆ ಎಂದು ರೈತ ಮುಖಂಡ ಹೊಸೂರು ರಾಜಣ್ಣ ಎಚ್ಚರಿಸಿದರು.ನಗರದ ಜಿಬಿಡಿಎ ಕಚೇರಿಯ ಸಭಾಂಗಣದಲ್ಲಿ ಶಾಸಕ ಬಾಲಕೃಷ್ಣರವರು ಬಿಡದಿ ಟೌನ್ ಶಿಪ್ ಯೋಜನೆ ಪರವಾಗಿರುವ ರೈತರ ಸಭೆ ನಡೆಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿರುವ ರೈತರು ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಬಳಿ ಹೇಳಿ ಕೊಳ್ಳಬೇಕಾಗಿದೆ. ಹೀಗಾಗಿ ಅವರ ಭೇಟಿಗೆ ಅವಕಾಶ ಕಲ್ಪಿಸುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಭರವಸೆ ನೀಡಿದ್ದಾರೆ ಎಂದರು.
ಪರಿಹಾರದ ಮೊತ್ತ ಮಾತ್ರವಲ್ಲದೆ, ರೈತರ ಇತರ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕಾಗಿದೆ. ಇದರೊಟ್ಟಿಗೆ 12 ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಭೂಸ್ವಾಧೀನ ಪ್ರದೇಶದಲ್ಲಿ ವಾಸಿಸುತ್ತಿರುವ ಆರ್ಥಿಕವಾಗಿ ಬಡ ಕುಟುಂಬಗಳು, ಕೂಲಿ ಕಾರ್ಮಿಕರು, ವಸತಿ ರಹಿತರ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಿದ್ದೇವೆ ಎಂದು ವಿವರಿಸಿದರು.ಅಂತಿಮ ಅಧಿಸೂಚನೆ ಹೊರಡಿಸಿರುವ ಪ್ರದೇಶದಲ್ಲಿ ನಾಳೆಯಿಂದಲೇ ಜೆಎಂಸಿ ಆರಂಭಿಸಬೇಕೆಂದು ಶಾಸಕರನ್ನು ಒತ್ತಾಯಿಸಿದ್ದೇವೆ. ಇದಕ್ಕೆ ಶಾಸಕರು ಮತ್ತು ಜಿಬಿಡಿಎ ಅಧ್ಯಕ್ಷರು ಒಪ್ಪಿಗೆ ವ್ಯಕ್ತಪಡಿಸಿದ್ದಾರೆ. ಜೆಎಂಸಿ ಆದ ನಂತರ ತಕ್ಷಣ ಪರಿಹಾರದ ಮೊತ್ತವನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಬೇಕು ಎಂದು ಒತ್ತಡ ಹೇರಿದ್ದೇವೆ ಎಂದು ಹೊಸೂರು ರಾಜಣ್ಣ ಹೇಳಿದರು.
ಮತ್ತೊಬ್ಬ ಭೂಮಾಲೀಕರಾದ ಎಚ್.ಎಸ್.ಸಿದ್ದರಾಜು ಮಾತನಾಡಿ, ಕೆಲವರ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟು ಕೊಂಡು ಪ್ರಕ್ರಿಯೆಗಳಿಗೆ ವಿಳಂಬ ಮಾಡುವುದು ಸರಿಯಲ್ಲ. ಇಲ್ಲಿ ಪರಿಹಾರದ ಮೊತ್ತ ಸಿಗುತ್ತದೆ ಎಂಬ ಕಾರಣಕ್ಕೆ ಅನೇಕರು ಬೇರೆ ಕಡೆ ಭೂಮಿ ಖರೀದಿಸಲು ಮುಂದಾಗಿದ್ದಾರೆ. ಇನ್ನೊಂದೆಡೆ ಭೂಮಿಯ ಬೆಲೆಗಳು ಸಹ ಹೆಚ್ಚಾಗುತ್ತಿವೆ. ಇಲ್ಲಿ ಪರಿಹಾರ ವಿಳಂಬವಾದರೆ ನಾವು ಭೂಮಿ, ಮನೆ ಖರೀದಿಸುವುದಕ್ಕೆ ಸಮಸ್ಯೆಯಾಗುತ್ತದೆ ಎಂದರು.
ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಸ್ವಾಧೀನವಾದ ಭೂಮಿ ಮತ್ತು ಜೆಎಂಸಿಗೆ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡುವಂತೆಯೂ ಸಭೆಯಲ್ಲಿ ಸಲಹೆ ನೀಡಿದ್ದೇವೆ. ಬಿಡದಿ ಟೌನ್ ಶಿಪ್ ಯೋಜನೆ ಬೇಗ ಪೂರ್ಣಗೊಂಡು ಅಭಿವೃದ್ದಿಯಾದ ನಿವಶೇನಗಳನ್ನು ಕೊಟ್ಟರೆ, ನಮ್ಮ ಮಕ್ಕಳ ಜೀವನಕ್ಕೆ ಒಳಿತಾಗುತ್ತದೆ. ಸರ್ಕಾರ ಇದನ್ನು ಗಮನಿಸಬೇಕು ಎಂದು ತಿಳಿಸಿದರು.
ಭೂ ಮಾಲೀಕರಾದ ಸಿ.ಜಿ.ರಾಮಕೃಷ್ಣಪ್ಪ, ಬಸವರಾಜು, ಕೃಷ್ಣಮೂರ್ತಿ, ಎಸ್.ಕಿರಣ್ , ಎಚ್.ಜಿ.ನರಸಿಂಹ ಮೂರ್ತಿ, ಬೈರಾರೆಡ್ಡಿ, ಹೊಸೂರು ಶಿವರಾಂ ಮತ್ತಿತರರು ಹಾಜರಿದ್ದರು.