ಯತೀಂದ್ರಗೆ ಹೈಕಮಾಂಡ್‌ ಉತ್ತರ ಕೊಡುತ್ತದೆ: ಲಕ್ಷ್ಮೀ ಹೆಬ್ಬಾಳ್ಕರ್‌

| Published : Jan 18 2024, 02:01 AM IST / Updated: Jan 18 2024, 02:02 AM IST

ಸಾರಾಂಶ

ಯತೀಂದ್ರ ಹೇಳಿಕೆಗೆ ಉತ್ತರ ಹೈಕಮಾಂಡ್ ಕೊಡುತ್ತದೆ. ಈ ಬಗ್ಗೆ ನಾನು ಪ್ರತಿಕ್ರಿಯಿಸಿ ಇನ್ನೂ ಗೊಂದಲ ಹೆಚ್ಚು ಮಾಡುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಉಡುಪಿಯಲ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

''''''''ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸೀಟು ಗಳಿಸುವುದೇ ನಮ್ಮ ಗುರಿ. ಆದರೆ ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ'''''''' ಎಂದು ಯತೀಂದ್ರ ಯಾವ ಕಾರಣಕ್ಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ, ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಯತೀಂದ್ರ ಹೇಳಿಕೆಗೆ ಉತ್ತರ ಹೈಕಮಾಂಡ್ ಕೊಡುತ್ತದೆ. ಈ ಬಗ್ಗೆ ನಾನು ಪ್ರತಿಕ್ರಿಯಿಸಿ ಇನ್ನೂ ಗೊಂದಲ ಹೆಚ್ಚು ಮಾಡುವುದಿಲ್ಲ ಎಂದರು.

ಲೋಕಸಭೆಯಲ್ಲಿ ಎಷ್ಟು ಸ್ಥಾನ ಗೆಲ್ಲಬೇಕು ಎಂದು ಹೈಕಮಾಂಡ್ ನಮಗೆ ಟಾರ್ಗೆಟ್ ಕೊಡುವ ಅವಶ್ಯಕತೆ ಇಲ್ಲ, ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ನಮ್ಮ ಜವಾಬ್ದಾರಿಯಾಗಿದೆ. ರಾಜ್ಯದಲ್ಲಿ 130 ಸ್ಥಾನ ಗೆದ್ದು, ಐದು ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ. ಆದ್ದರಿಂದ ಮತದಾರರು ಅತ್ಯಂತ ಹೆಚ್ಚು ಸೀಟುಗಳನ್ನು ಗೆಲ್ಲಿಸಿ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರ ಪರಿಹಾರ ತರುವಲ್ಲಿ ರಾಜ್ಯದ ಬಿಜೆಪಿ ಯಾವ ಸಂಸದರು ಸಹಾಯಕ್ಕೆ ಬರುತ್ತಿಲ್ಲ. ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೋ ಕೂಡ ಇಲ್ಲ, ಆದ್ದರಿಂದ ರಾಜ್ಯದ ಜನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಏನು ಮಾಡಬೇಕು ಎಂದು ಈಗಾಗಲೇ ನಿರ್ಧಾರ ಮಾಡಿದ್ದಾರೆ ಎಂದವರು ಭರವಸೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ, ರೋಡ್ ಶೋಗಳು ರಾಜಕೀಯದಲ್ಲಿ ಸಹಜ, ಅವರೂ ಮಾಡುತ್ತಾರೆ ನಾವೂ ಮಾಡುತ್ತೇವೆ ಎಂದಷ್ಟೇ ಹೇಳಿದರು.ಸಂಸದ ಅನಂತಕುಮಾರ್‌ ಹೆಗಡೆ ಅವರು ಮುಖ್ಯಮಂತ್ರಿ ಅವರನ್ನು ಏಕವಚನದಲ್ಲಿ ಸಂಬೋಧಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸಿಎಂ ಬಗ್ಗೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲಿಕ್ಕೆ ಈ ರೀತಿ ಮಾತನಾಡುವುದನ್ನು ಜನರು ಸಹಿಸುವುದಿಲ್ಲ, ಕ್ಷಮಿಸುವುದಿಲ್ಲ. ಇಂತಹ ಮಾತುಗಳಿಂದ ತಮಗೆ ರಾಜಕೀಯ ಲಾಭ ಆಗುತ್ತದೆ ಎಂದುಕೊಂಡಿದ್ದರೇ ಅದು ಬಾಲಿಶ ಎಂದರು.ಅವರು 5 ವರ್ಷ ಸಂಸದರಾಗಿದ್ದಾಗ ಖಾನಪುರ ಕಿತ್ತೂರು ಗಡಿಗೆ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುತ್ತಾರೆ, ಅವರು ಮುಂಚಿನಿಂದಲೂ ಹೀಗೆ ಮಾತನಾಡುತ್ತಾರೆ, ಆದರೆ ಈ ಬಾರಿ ಅದರಿಂದ ಅವರಿಗೆ ಲಾಭ ಆಗುವುದಿಲ್ಲ ಎಂದರು.