ಸುಲ್ತಾನಪುರ ಉಪವಿದ್ಯುತ್ ವಿತರಣಾ ಕೇಂದ್ರ ಲೋಕಾರ್ಪಣೆ ಇಂದು

| Published : Jan 18 2024, 02:01 AM IST

ಸಾರಾಂಶ

ತಾಲೂಕಿನ ಸುಲ್ತಾನಪುರದಲ್ಲಿ ಹೊಸದಾಗಿ ಸ್ಥಾಪಿಸಿದ 110 ಕೆವಿ ಉಪವಿದ್ಯುತ್ ವಿತರಣಾ ಕೇಂದ್ರವು ಜ.18 ರಂದು ಉದ್ಘಾಟನೆಯಾಗಲಿದೆ. ಈ ಹೊಸ ಕೇಂದ್ರ ಕಾರ್ಯಾರಂಭ ಮೂಲಕ ಸಂಸ್ಥೆಯ ವಿತರಣಾ ಕೇಂದ್ರಗಳ ಸಂಖ್ಯೆ 11ಕ್ಕೆ ಏರಿಕೆಯಾಗಲಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸಹಕಾರಿ ತತ್ವದಡಿ ವಿದ್ಯುತ್ ಪೂರೈಸುವ ರಾಜ್ಯದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಈಗ ಮತ್ತೊಂದು ಹೆಮ್ಮೆಪಡುವ ಸಾಧನೆಯ ಮೈಲುಗಲ್ಲು ನೆಟ್ಟಿದೆ.

ತಾಲೂಕಿನ ಸುಲ್ತಾನಪುರದಲ್ಲಿ ಹೊಸದಾಗಿ ಸ್ಥಾಪಿಸಿದ 110 ಕೆವಿ ಉಪವಿದ್ಯುತ್ ವಿತರಣಾ ಕೇಂದ್ರವು ಜ.18 ರಂದು ಉದ್ಘಾಟನೆಯಾಗಲಿದೆ. ಈ ಹೊಸ ಕೇಂದ್ರ ಕಾರ್ಯಾರಂಭ ಮೂಲಕ ಸಂಸ್ಥೆಯ ವಿತರಣಾ ಕೇಂದ್ರಗಳ ಸಂಖ್ಯೆ 11ಕ್ಕೆ ಏರಿಕೆಯಾಗಲಿದೆ. ಇದರೊಂದಿಗೆ ಈಗಾಗಲೇ ಹಲವು ಯೋಜನೆಗಳ ಮೂಲಕ ತಾಲೂಕಿನ ರೈತರ ಜೀವನಾಡಿ, ಗ್ರಾಹಕ ಸ್ನೇಹಿ ಎನಿಸಿಕೊಂಡಿರುವ ಈ ವಿದ್ಯುತ್ ಸಹಕಾರಿ ಸಂಘದ ಹಿರಿಮೆ ಮತ್ತಷ್ಟು ಹೆಚ್ಚಿದೆ.

ಸುಲ್ತಾನಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಗಮ ಮತ್ತು ಅಡೆತಡೆ ರಹಿತ ವಿದ್ಯುತ್ ಪೂರೈಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್)ವು ಈ ಹೊಸ ಉಪವಿದ್ಯುತ್ ವಿತರಣಾ ಕೇಂದ್ರ ನಿರ್ಮಿಸಿದೆ. ತನ್ಮೂಲಕ ದೂರದೃಷ್ಟಿ ಇಟ್ಟುಕೊಂಡು ಈ ಯೋಜನೆಗೆ ಶ್ರಮಿಸಿದ್ದ ದಿ.ಉಮೇಶ ಕತ್ತಿ ಕಂಡ ಕನಸು ಸಾಕಾರಗೊಂಡಂತಾಗಿದೆ. ಅಲ್ಲದೇ ಸುಲ್ತಾನಪುರ, ಘೋಡಗೇರಿ, ಹುನ್ನೂರ, ನೊಗನಿಹಾಳ, ಅವರಗೋಳ, ಮದಿಹಳ್ಳಿ, ಬೆಣಿವಾಡ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ.

5 ದಶಕಗಳಿಗೂ ಹೆಚ್ಚು ಕಾಲ ತಾಲೂಕಿನಲ್ಲಿ ಸೇವಾನಿರತ ಈ ಸಂಸ್ಥೆಯು ತನ್ನ ಕಾರ್ಯಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಕಂಡಿದೆ. ಅಂದಾಜು ₹12.28 ಕೋಟಿ ವೆಚ್ಚದಲ್ಲಿ 3 ಎಕರೆ ಪ್ರದೇಶದಲ್ಲಿ ಸಿದ್ಧಗೊಂಡ ಈ ಉಪ ವಿದ್ಯುತ್ ವಿತರಣಾ ಕೇಂದ್ರವನ್ನು ಬೆಳಗಾವಿಯ ಹೈ-ಟೆಕ್ ಇಲೆಕ್ಟ್ರಿಕಲ್ಸ್ ಕಂಪನಿ ಅಚ್ಚುಕಟ್ಟಾಗಿ ನಿರ್ಮಿಸಿದೆ.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವು ಸರ್ಕಾರಿ ಸ್ವಾಮ್ಯದ ಬೆಸ್ಕಾಂ, ಸೆಸ್ಕ್‌, ಗೆಸ್ಕಾಂ, ಮೆಸ್ಕಾಂ ಹಾಗೂ ಹೆಸ್ಕಾಂಗಳಿಗೆ ಮಾದರಿಯಾಗುವಂಥ ಆಸ್ತಿ ಸೃಜಿಸಿದೆ. ಹೊಸ ವಿದ್ಯುತ್ ಕೇಂದ್ರ ಸ್ಥಾಪನೆಯಿಂದ ಹುಕ್ಕೇರಿ, ಶಿರಗಾಂವ, ಹಿಡಕಲ್ ಡ್ಯಾಂ ಕೇಂದ್ರಗಳ ಮೇಲಿನ ವಿದ್ಯುತ್ ಭಾರ ಹಾಗೂ ವಾರ್ಷಿಕ ವಿದ್ಯುತ್ ನಷ್ಟ 7.6 ಮಿಲಿಯನ್ ಯುನಿಟ್‌ಗಳಿಂದ 1.66 ಮಿಲಿಯನ್ ಯುನಿಟ್‌ಗೆ ತಗ್ಗಲಿದೆ. ಜತೆಗೆ ಉದ್ಯೋಗ ಸೃಷ್ಟಿ, ಗುಣಮಟ್ಟದ ನಿರಂತರ ವಿದ್ಯುತ್ ಸರಬರಾಜು ಆಗಲಿದೆ.

ಸಹಕಾರಿ ಮಹರ್ಷಿ ದಿ.ಅಪ್ಪಣಗೌಡ ಪಾಟೀಲ ನೇತೃತ್ವದಲ್ಲಿ ಸಹಕಾರ ವಲಯದಡಿ ಪೈಲಟ್ ಪ್ರೊಜೆಕ್ಟ್ ಯೋಜನೆಯಡಿ 1969 ರಲ್ಲಿ ಸ್ಥಾಪನೆಯಾಗಿದೆ. ಸದ್ಯ ಗೃಹ ಬಳಕೆ, ವಾಣಿಜ್ಯ ಹೀಗೆ ವಿವಿಧ ರೀತಿಯ 1.10 ಲಕ್ಷ ಗ್ರಾಹಕರು ಹೊಂದಿದೆ. ಸಂಸ್ಥೆಯ ಸುದೀರ್ಘ ಪಯಣ ಮತ್ತು ಹೊಸ ಹೊಸ ಯೋಜನಗಳ ಅನುಷ್ಠಾನದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ಕಾಲ ಕಾಲಕ್ಕೆ ಸೂಕ್ತ ಮಾರ್ಗದರ್ಶನ ಮಾಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

ಬೆಳವಿ, ನಿಡಸೋಸಿಯಲ್ಲಿ ಈಗಾಗಲೇ 110 ಕೆವಿ ಉಪವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಮಂಜೂರಾತಿ ದೊರೆತಿದೆ. ಪಾಶ್ವಾಪೂರ ಹಾಗೂ ಶೇಕಿನ ಹೊಸುರದಲ್ಲಿಯೂ ಕೇಂದ್ರಗಳ ಸ್ಥಾಪನೆ ಪ್ರಕ್ರಿಯೆ ಮಂಜೂರಾತಿ ಹಂತದಲ್ಲಿದೆ. ಈ 4 ಉಪ ವಿದ್ಯುತ್ ವಿತರಣಾ ಕೇಂದ್ರಗಳು ಕಾರ್ಯ ರೂಪಕ್ಕೆ ಬಂದರೆ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಮುಂದಿನ 20 ವರ್ಷಗಳವರೆಗೆ ಗುಣಮಟ್ಟ ಹಾಗೂ ಸಮರ್ಪಕ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಲ್.ಶ್ರೀನಿವಾಸ, ಸ್ಥಾನಿಕ ಅಭಿಯಂತರ ನೇಮಿನಾಥ ಖೆಮಲಾಪುರೆ ತಿಳಿಸಿದ್ದಾರೆ.

----------

ಕೋಟ್.....

ರೈತರು, ಗ್ರಾಹಕರಿಗೆ ಗುಣಮಟ್ಟ ಹಾಗೂ ನಿರಂತರ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಹೊಸ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲಾಗಿದೆ. ಮೊದಲಿನಿಂದಲೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘ ಗ್ರಾಹಕ ಸ್ನೇಹಿಯಾಗಿ ಸೇವೆ ಸಲ್ಲಿಸುತ್ತಿದೆ.

-ರಮೇಶ ಕತ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರು.