ಹಿಂದಿ ಸರಳ ಸುಂದರ, ಅಭಿಮಾನದ ಭಾಷೆ: ರಾಠೋಡ

| Published : Sep 19 2025, 01:00 AM IST

ಸಾರಾಂಶ

ಹಿಂದಿ ಭಾಷೆ ದೇಶ ಮಾತೆಯ ಬಿಂದಿ (ಸಿಂಧೂರ)ಯಾಗಿದ್ದಾಳೆ, ಭಾರತವು ಅನೇಕ ಭಾಷೆಗಳ ತವರಾಗಿದ್ದರೂ ಹಿಂದಿ ಭಾಷೆ ಮಹತ್ವ ಪಡೆದುಕೊಂಡಿದೆ. ಅಟಲ್ ಬಿಹಾರಿ ವಾಜಪೇಯಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆದಿದ್ದಾರೆ. ಭಾರತದಲ್ಲಿ ಅನೇಕ ಭಾಷೆಗಳಿದ್ದರೂ ಹಿಂದಿ ಸರಳ, ಸುಂದರ ಭಾಷೆಯಾಗಿದೆ ಎಂದು ವಿ.ಡಿ.ಎಸ್.ಟಿ ಪಪೂ ಕಾಲೇಜಿನ ಪ್ರಾ. ಬಿ.ಎಸ್. ರಾಠೋಡ್ ಹೇಳಿದರು.

ಗದಗ:ಹಿಂದಿ ಭಾಷೆ ದೇಶ ಮಾತೆಯ ಬಿಂದಿ (ಸಿಂಧೂರ)ಯಾಗಿದ್ದಾಳೆ, ಭಾರತವು ಅನೇಕ ಭಾಷೆಗಳ ತವರಾಗಿದ್ದರೂ ಹಿಂದಿ ಭಾಷೆ ಮಹತ್ವ ಪಡೆದುಕೊಂಡಿದೆ. ಅಟಲ್ ಬಿಹಾರಿ ವಾಜಪೇಯಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆದಿದ್ದಾರೆ. ಭಾರತದಲ್ಲಿ ಅನೇಕ ಭಾಷೆಗಳಿದ್ದರೂ ಹಿಂದಿ ಸರಳ, ಸುಂದರ ಭಾಷೆಯಾಗಿದೆ ಎಂದು ವಿ.ಡಿ.ಎಸ್.ಟಿ ಪಪೂ ಕಾಲೇಜಿನ ಪ್ರಾ. ಬಿ.ಎಸ್. ರಾಠೋಡ್ ಹೇಳಿದರು.

ನಗರದ ಜೆ.ಟಿ. ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದಿ ಭಾಷೆಯು ಸರಳ ಸುಂದರ ಮತ್ತು ಅಭಿಮಾನದ ಭಾಷೆಯಾಗಿದ್ದು, ನಮ್ಮ ದೇಶದಲ್ಲಿ ಸೈನಿಕರು, ರೈತರು, ಶಿಕ್ಷಕರಿಗೆ ನೀಡಿದಷ್ಟೆ ಪ್ರಾಮುಖ್ಯತೆ ಹಿಂದಿ ಭಾಷೆಗೂ ಮಹತ್ವ ನೀಡಬೇಕು. ಭಾರತದಲ್ಲಿ ಬಹುಸಂಖ್ಯಾತ ಜನರು ಹಿಂದಿಯನ್ನು ಸಂವಹನ ಭಾಷೆಯಾಗಿ ಬಳಸುತ್ತಿದ್ದಾರೆ, ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಹಿಂದಿ ಭಾರತೀಯರನ್ನು ಒಟ್ಟುಗೂಡಿಸುವ ಸ್ಫೂರ್ತಿದಾಯಕ ಭಾಷೆಯಾಗಿ ಹೊರಹೊಮ್ಮಿತು. ಹಿಂದಿ ಭಾರತದ ಅತಿ ಪ್ರಾಚೀನ ಭಾಷೆಯಾಗಿದ್ದು, ಪ್ರಾಚೀನ ಕಾಲದಲ್ಲಿ ಕಬೀರದಾಸ, ಸೂರದಾಸ, ಜಾಯಸಿ ಇವರಿಂದ ಹಿಡಿದು ಆಧುನಿಕ ಕಾಲದಲ್ಲಿ ಪ್ರೇಮಚಂದ, ದಿನಕರ್ ಮುಂತಾದ ಶ್ರೇಷ್ಟ ಕವಿಗಳು ಹಿಂದಿ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿ ಹಿಂದಿ ಭಾಷೆ ಜಾಗತಿಕವಾಗಿ ಬೆಳೆಯಲು ಕಾರಣರಾಗಿದ್ದಾರೆ. ಹಿಂದಿಯನ್ನು ಮಾತೃ ಭಾಷೆಯಷ್ಟೆ ಗೌರವಿಸಬೇಕೆಂದರು.

ಪ್ರಾ. ಎಸ್.ಬಿ. ಹಾವೇರಿ ಮಾತನಾಡಿದರು. ಹಿಂದಿ ವಿಭಾಗದ ಗಂಗಾಧರ ಸೇರಿದಂತೆ ಇತರರು ಇದ್ದರು. ಶ್ರೇಯಾ ಹಿರೇಮಠ ಪ್ರಾರ್ಥಿಸಿದರು. ಷಹನಾಜ್ ಹಿರೇಮನಿ ನಿರೂಪಿಸಿದರು. ಸ್ನೇಹಾ ಕೊಂಡಗೂಳಿ ಸ್ವಾಗತಿಸಿದರು. ಶ್ವೇತಾ ಮೆರವಾಡೆ ವಂದಿಸಿದರು.