ಹಿಂದುಸ್ತಾನದಲ್ಲಿ ಹಿಂದುಗಳಿಗೆ ರಕ್ಷಣೆಯಿಲ್ಲ

| Published : May 05 2025, 12:51 AM IST

ಹಿಂದುಸ್ತಾನದಲ್ಲಿ ಹಿಂದುಗಳಿಗೆ ರಕ್ಷಣೆಯಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಹಿಂದುಸ್ತಾನದಲ್ಲಿ ಹಿಂದುಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಧರ್ಮ ಉಳಿವಿಗಾಗಿ ಹಿಂದು ಧರ್ಮಿಗಳು ಒಗ್ಗಟ್ಟಾಗುವುದು ಅನಿವಾರ್ಯ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರು ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಹಿಂದುಸ್ತಾನದಲ್ಲಿ ಹಿಂದುಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಧರ್ಮ ಉಳಿವಿಗಾಗಿ ಹಿಂದು ಧರ್ಮಿಗಳು ಒಗ್ಗಟ್ಟಾಗುವುದು ಅನಿವಾರ್ಯ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರು ಹೇಳಿದರು.

ನಗರದ ಕೃಷ್ಣ ವಾದಿರಾಜ ಮಠಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಕಾಶ್ಮೀರದಲ್ಲಿ ನಡೆದ ಘಟನೆ ಪ್ರಸ್ತಾಪಿಸಿ, ಪ್ರಧಾನ ಮಂತ್ರಿಗಳು ಪ್ರತೀಕಾರ ತೀರಿಸಿಕೊಳ್ಳಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಬಡ, ದೀನ-ದಲಿತರರಿಗೆ ನ್ಯಾಯ ಕೊಡಿಸುವ ಮೂಲಕ ಪತ್ರಿಕಾರಂಗ ಸೇರಿ ನಾಲ್ಕು ಅಂಗಗಳು ಜನರ ವಿಶ್ವಾಸ ಉಳಿಸಿಕೊಳ್ಳಬೇಕು. ಮತ ಬ್ಯಾಂಕ್‌ಗಾಗಿ ರಾಜಕೀಯ ಮುಖಂಡರು ಜಾತಿ, ಜಾತಿಗಳ ನಡುವೆ ಕಲಹ ಹಚ್ಚುತ್ತಿದ್ದಾರೆ. ರಾಜ್ಯದಲ್ಲಿ ರಾಜಕೀಯ ಅರಾಜಕತೆ ಉಂಟಾಗಿದೆ. ರಾಜ್ಯದಲ್ಲಿ ಹಿಂದು ಧರ್ಮದ ಮೇಲೆ ಆಕ್ರಮಣ ನಡೆಯುತ್ತಿದೆ. ಹಿಂದು ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಆಳುವ ಸರ್ಕಾರಗಳು ಎಲ್ಲ ಧರ್ಮಗಳ ರಕ್ಷಣೆ ಮಾಡಬೇಕು. ಆದರೆ ರಾಜ್ಯದಲ್ಲಿ ಒಂದು ಕೋಮಿಗೆ ತುಷ್ಟಿಕರಣ ಮಾಡುತ್ತಿದೆ. ಹಿಂದು ಧರ್ಮವನ್ನು ತುಳಿಯುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.

ಎಷ್ಟು ಧರ್ಮಗಳು ಹುಟ್ಟಿ ನಾಶ ಹೊಂದಿವೆ. ಆದರೆ ಸನಾತನ ಧರ್ಮ ಮಾತ್ರ ತನ್ನ ಅಸ್ತಿತ್ವ ಕಳೆದುಕೊಂಡಿಲ್ಲ. ಸಹಸ್ರಾರು ವರ್ಷಗಳಿಂದಲೂ ಹಿಂದು ಧರ್ಮದ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇದೆ. ಆದರೂ ಹಿಂದು ಧರ್ಮಕ್ಕೆ ಧಕ್ಕೆಯುಂಟಾಗಿಲ್ಲ. ಜಾತಿ ಗಣತಿ ಸರಿಯಾದ ರೀತಿಯಲ್ಲಿ ನಡೆದು ಎಲ್ಲ ಜಾತಿ ಜನಾಂಗದವರಿಗೆ ಅನುಕೂಲವಾಗುವಂತಾಗಲಿ. ಹಿಂದು ಧರ್ಮದ ರಕ್ಷಣೆಗಾಗಿ ಪೇಜಾವರ ಮಠ ನಿರಂತರ ಶ್ರಮಿಸುತ್ತಿದೆ. ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ ಎಂದು ತಿಳಿಸಿದರು.

ಶ್ರೀ ಕೃಷ್ಣನಿಗೆ ಪೂಜೆ ಸಲ್ಲಿಸಿದ ಶ್ರೀಗಳು ಭಕ್ತರಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವಚನ ನೀಡಿದರು. ಅಖಿಲ ಭಾರತ ಮಧ್ವ ಮಹಾ ಮಂಡಳದ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಬಿಜೆಪಿ ಮುಖಂಡ ಉಮೇಶ್ ಕಾರಜೋಳ, ಸುರೇಶ್ ಬಿರಾದರ್, ವಿಕಾಸ ಪದಕಿ, ಪಂ.ವಾಸುದೇವಾಚಾರ್ಯ ಅಗ್ನಿಹೋತ್ರಿ, ಅಶೋಕರಾವ, ಗೋವಿಂದ ಜೋಶಿ, ವೆಂಕಟೇಶ ಗುಡಿ, ಆರ್.ಬಿ.ಕುಲಜರ್ಣಿ, ವಿ.ಬಿ.ಕುಲಜರ್ಣಿ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ಅರ್ಚಕ ಸಮೀರಾಚಾರ್ಯ ಹಾಗೂ ಭಕ್ತರು ಇದ್ದರು.