ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮೇ 20ರಂದು ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದು, ಚಿತ್ರದುರ್ಗ ಜಿಲ್ಲೆಯ 10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಭರದ ಸಿದ್ಧತೆಗಳು ನಡೆದಿವೆ. ಜಿಲ್ಲಾಧಿಕಾರಿ ವೆಂಕಟೇಶ್ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ರಜಾ ದಿನವಾದ ಭಾನುವಾರ ಈ ಸಂಬಂಧ ಹಕ್ಕು ಪತ್ರ ತಯಾರಿಸುವ ಕಾರ್ಯ ಪರಿಶೀಲಿಸಿದರು.ಜಿಲ್ಲೆಯಲ್ಲಿನ ಹಟ್ಟಿ, ತಾಂಡಾ ಸೇರಿದಂತೆ ಒಟ್ಟು 299 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಸರ್ಕಾರದ ಸೂಚನೆಯಂತೆ ಈ ಗ್ರಾಮಗಳ ಜನರ ಆಸ್ತಿಗಳನ್ನು ನೋಂದಣಿ ಮಾಡಿಸಿ, ಹಕ್ಕುಪತ್ರ ಹಾಗೂ ಇ-ಸ್ವತ್ತುಗಳನ್ನು ನೀಡಲಾಗುತ್ತಿದೆ. ಹಲವು ದಶಕಗಳಿಂದ ಆಸ್ತಿಗಳಿಗೆ ಹಕ್ಕುಪತ್ರವಿಲ್ಲದೆ ಪರಿತಪಿಸುತ್ತಿದ್ದ ಬಡ ಜನರ ಶ್ರೇಯೋಭಿವೃದ್ಧಿಗಾಗಿ ಹಟ್ಟಿ, ತಾಂಡಾ ಮುಂತಾದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿ, ಆ ಜನವಸತಿ ಪ್ರದೇಶಗಳ ಜನರಿಗೆ ಆಸ್ತಿಗಳನ್ನು ನೊಂದಣಿ ಮಾಡಿಸಿ, ಹಕ್ಕುಪತ್ರ ಹಾಗೂ ಇ-ಸ್ವತ್ತು ಕೂಡ ವಿತರಿಸುವಂತೆ ಸರ್ಕಾರ ಸೂಚನೆ ನೀಡಿದೆ.
20ರಂದು ಹೊಸಪೇಟೆಯಲ್ಲಿ ನಡೆಯಲಿರುವ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ಆಶಯದಂತೆ ಎಲ್ಲ ಕಂದಾಯ ಗ್ರಾಮಗಳ ಜನರಿಗೆ ಹಕ್ಕುಪತ್ರ ವಿತರಿಸುವ ಸಮಾರಂಭ ಆಯೋಜಿಸಲಾಗಿದೆ.ಉಳುವವನೇ ಭೂಮಿಯ ಒಡೆಯ ಎನ್ನುವಂತೆ, ವಾಸಿಸುವವನೇ ಮನೆಯ ಒಡೆಯ ಎನ್ನುವ ರೀತಿ, ಹಟ್ಟಿ, ಹಾಡಿ, ತಾಂಡಾಗಳಲ್ಲಿ ವಾಸಿಸುತ್ತಿರುವ ಜನರಿಗೆ ಅವರ ಮನೆಯ ಆಸ್ತಿಯ ಹಕ್ಕುಪತ್ರಗಳನ್ನು ವಿತರಿಸಿ, ಬಡವರಿಗೆ ಆಸ್ತಿ ದಾಖಲೆಗಳನ್ನು ಒಪ್ಪಿಸಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ.
ಮೇ 20ರಂದು ಜರುಗುವ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆಯ 299 ಕಂದಾಯ ಗ್ರಾಮಗಳ ಸುಮಾರು 10 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ. ಈಗಾಗಲೆ ಜಿಲ್ಲೆಯಲ್ಲಿ ಸುಮಾರು 6,500ಕ್ಕೂ ಹೆಚ್ಚು ಹಕ್ಕುಪತ್ರಗಳು ಸಿದ್ಧಗೊಂಡಿವೆ. ಭಾನುವಾರ ಕೂಡ ಆಸ್ತಿಗಳ ನೋಂದಣಿ ಮತ್ತು ಹಕ್ಕುಪತ್ರ ತಯಾರಿಸುವ ಕಾರ್ಯ ನಡೆದಿದೆ.ಜಿಲ್ಲೆಯ ಉಪ ನೋಂದಣಾಧಿಕಾರಿಗಳ ಕಚೇರಿ, ತಹಸೀಲ್ದಾರರ ಕಚೇರಿ ಹಾಗೂ ಗ್ರಾಮ ಪಂಚಾಯತಿಗಳು ಕಾರ್ಯ ನಿರ್ವಹಿಸಿದ್ದು, ರಾಜ್ಯದಲ್ಲಿಯೇ ಹೆಚ್ಚು ಹಕ್ಕುಪತ್ರ, ನೊಂದಣಿ ಹಾಗೂ ಇ-ಸ್ವತ್ತು ತಯಾರಿಕೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ.
ನಿಗದಿತ ಅವಧಿಯೊಳಗೆ ಜಿಲ್ಲೆಯ ಎಲ್ಲ 299 ಕಂದಾಯ ಗ್ರಾಮಗಳ ಫಲಾನುಭವಿಗಳ ಹಕ್ಕುಪತ್ರ, ಇ-ಸ್ವತ್ತುಗಳನ್ನು ಸಿದ್ಧಪಡಿಸಿ, ಮೇ 20ರಂದು ಹೊಸಪೇಟೆಯಲ್ಲಿ ಜರುಗುವ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶದಲ್ಲಿ ಜಿಲ್ಲೆಯ ಎಲ್ಲ ಅರ್ಹ ಫಲಾನುಭವಿಗಳಿಗೆ ಆಸ್ತಿ ದಾಖಲೆಗಳನ್ನು ವಿತರಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.