ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ೭೫ರ ಅಗಲೀಕರಣ ಕಾಮಗಾರಿಯ ಸರ್ವಿಸ್ ರಸ್ತೆ ನಿರ್ಮಾಣದಲ್ಲಿ ಎದುರಾಗಿರುವ ಅಡೆತಡೆಗಳನ್ನು ಸಕಾಲದಲ್ಲಿ ನಿವಾರಿಸದ ಪರಿಣಾಮ ಅಲ್ಲಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಉಪ್ಪಿನಂಗಡಿಯ ಹಿರೇಬಂಡಾಡಿ ಕ್ರಾಸ್ ಪಾದಚಾರಿಗಳ ಪಾಲಿಗೆ ಸಂಚಾರಕ್ಕೆ ಸವಾಲು ಎಂಬಂತಿದೆ. ಗಾಂಧಿ ಪಾರ್ಕ್ ಬಳಿಯ ಅಂಡರ್ ಪಾಸ್ ಜಲ ಕ್ರೀಡೆಗೆ ಸೂಕ್ತವೆನಿಸುವ ಮಟ್ಟಿಗೆ ಬಾಧಕವೆನಿಸಿದೆ. ಇಲ್ಲಿನ ಗಾಂಧಿ ಪಾರ್ಕ್‌ ನಿಂದ ಹಿರೇಬಂಡಾಡಿ ಸಂಪರ್ಕ ರಸ್ತೆಯ ಪಾರ್ಶ್ವದಲ್ಲಿನ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಒಳಗೊಂಡ ಭೂಮಿಯಲ್ಲಿ ಕಾಮಗಾರಿ ನಡೆಸಲು ಮುಂದಾದರೆ ಮೇಲ್ಭಾಗದಲ್ಲಿನ ಉದ್ಯಮಕ್ಕೆ ಸಂಬಂಧಿಸಿ ಸಮಸ್ಯೆಗಳು ಎದುರಾಗಲಿದೆ ಎಂದು ಆಕ್ಷೇಪ ವ್ಯಕ್ತವಾಗಿತ್ತೆನ್ನಲಾಗಿದೆ.

ಇದರಿಂದಾಗಿ ಈ ಭಾಗದಲ್ಲಿ ಸಮರ್ಪಕವೆನಿಸಿದ ಸರ್ವಿಸ್ ರಸ್ತೆ ನಿರ್ಮಾಣವಾಗದಿರುವ ಕಾರಣ ಮಳೆಗಾಲದ ಈ ದಿನದಲ್ಲಿ ಮಳೆ ನೀರು ನಿಂತು ಕೆಸರು ತುಂಬಿ ಜನರಿಗೆ ನಡೆದಾಡಲೂ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಮುಂದುವರಿದು ಉಪ್ಪಿನಂಗಡಿ ಪೇಟೆಯನ್ನು ಸಂಪರ್ಕಿಸುವ ಗಾಂಧಿ ಪಾರ್ಕ್ ಬಳಿಯ ಅಂಡರ್ ಪಾಸ್ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೂ ಸಮಸ್ಯಾತ್ಮಕವಾಗಿದೆ.

ಮಳೆಗಾಲದ ಮುನ್ನ ಈ ಬಗ್ಗೆ ಕಾಮಗಾರಿ ನಿರತ ಗುತ್ತಿಗೆದಾರ ಸಂಸ್ಥೆ ಗಮನ ಹರಿಸುತ್ತಿದ್ದರೆ ಈ ಮಟ್ಟದ ಸಮಸ್ಯೆಗಳು ಎದುರಾಗುತ್ತಿರಲಿಲ್ಲ.

ಪ್ರತಿಭಟನೆಗೆ ಸಿದ್ದ:

ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ವಹಿಸಿದ ಗುತ್ತಿಗೆದಾರರಿಗೆ ಎಲ್ಲ ಬಗೆಯ ಸಹಕಾರ ನೀಡಿದ್ದರೂ, ಮಳೆಗಾಲದಲ್ಲಿ ಈ ಪರಿಯ ಸಮಸ್ಯೆ ಉಂಟಾಗುವಂತೆ ಮಂದಗತಿಯನ್ನು ಪ್ರದರ್ಶಿಸಿರುವುದು ಬೇಸರ ತಂದಿದೆ. ತ್ವರಿತ ಕಾಮಗಾರಿಗೆ ಪ್ರತಿಭಟನೆಯೇ ಅನಿವಾರ್ಯವೆಂದಾದರೆ ಅದಕ್ಕೂ ಸಿದ್ದ ಎಂದು ತಿಳಿಸಿದ್ದಾರೆ. ಸಮಸ್ಯೆ ಬಗ್ಗೆ ಮೌನವೇಕೆ ?: ದಿನ ನಿತ್ಯ ನೂರಾರು ಜನರು ಸಂಚರಿಸುವ ರಸ್ತೆಯು ಈ ಮಟ್ಟದಲ್ಲಿ ಕುಲಗೆಟ್ಟು ಜನ ದಿನ ನಿತ್ಯ ಸಂಕಷ್ಠಕ್ಕೆ ತುತ್ತಾದರೂ ಬುದ್ದಿವಂತರ ನಾಡಿನಲ್ಲಿ ದ್ವನಿ ಎತ್ತದಿರುವ ನಿಗೂಢತೆ ಏನು ? ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಖ್ಯಾತ ಚಲನ ಚಿತ್ರ ನಟ ನಿರ್ದೇಶಕ ಎಂ.ಕೆ. ಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತ್ವರಿತ ಗಮನ ಹರಿಸಲಾಗುತ್ತಿದೆ: ರಘುನಾಥ್ ರೆಡ್ಡಿ


ಕೆಲವೊಂದು ಅಡೆತಡೆಗಳನ್ನು ಸೌಮ್ಯವಾಗಿ ಬಗೆಹರಿಸಲು ಮುಂದಾದ ಕಾರಣಕ್ಕೆ ಸಕಾಲದಲ್ಲಿ ನಡೆಯಬೇಕಾದ ಕಾಮಗಾರಿ ಒಂದಷ್ಟು ವಿಳಂಬವಾಗಿ ಸಮಸ್ಯೆಗಳು ಎದುರಾಗಿರುವುದು ನಿಜ. ಅಡೆತಡೆಗಳನ್ನು ನಿವಾರಿಸಲಾಗಿದೆ. ನೆಲ್ಯಾಡಿಯಲ್ಲಿ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು, ಇಂದಿನಿಂದಲೇ ಉಪ್ಪಿನಂಗಡಿಯ ಬಾಕಿ ಉಳಿದಿರುವ ಕಾಮಗಾರಿಗೆ ವೇಗ ತರಲಾಗುವುದು. ಎಲ್ಲೆಡೆಯ ಸಮಸ್ಯೆಗಳನ್ನು ಆದ್ಯತೆಯಲ್ಲಿ ನಿವಾರಿಸಲಾಗುವುದು ಎಂದು ಹೆದ್ದಾರಿ ಕಾಮಗಾರಿ ನಿರತ ಇಂಜಿನಿಯರ್ ರಘುನಾಥ್ ರೆಡ್ಡಿ ತಿಳಿಸಿದ್ದಾರೆ.