ಕನ್ನಡಪ್ರಭ ವಾರ್ತೆ ಮಡಿಕೇರಿ

ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಅಹವಾಲುಗಳನ್ನು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಆಲಿಸಿ, ಮನವಿ ಸ್ವೀಕರಿಸಿದರು. ಜಿಲ್ಲೆಯಲ್ಲಿ ಮಾಜಿ ಸೈನಿಕರಿಗಾಗಿ ಕ್ಯಾಂಟೀನ್, ಸಮುದಾಯ ಭವನ, ಆಸ್ಪತ್ರೆ ಸೇರಿದಂತೆ ಹಲವು ಮೂಲ ಸೌಲಭ್ಯಕ್ಕೆ ಆದ್ಯತೆ ಮೇಲೆ ಜಾಗ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಮಡಿಕೇರಿ ಮತ್ತು ಪೊನ್ನಂಪೇಟೆಯಲ್ಲಿ ಮಾಜಿ ಸೈನಿಕರ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಲಾಗುವುದು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಜನ್ಮ ದಿನ ಕಾರ್ಯಕ್ರಮಕ್ಕೆ ಮಾಜಿ ಸೈನಿಕರನ್ನು ಆಹ್ವಾನಿಸಲಾಗುವುದು ಎಂದು ಸೋಮಶೇಖರ್ ತಿಳಿಸಿದರು. ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಕುಂದುಕೊರತೆ ಆಲಿಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಉಪ ವಿಭಾಗಾಧಿಕಾರಿ ಅವರ ಉಪಸ್ಥಿತಿಯಲ್ಲಿ ಕುಂದುಕೊರತೆ ಆಲಿಸಲಾಗುವುದು. ಅದರಂತೆ ಪ್ರತಿ ಎರಡು ತಿಂಗಳಿಗೊಮ್ಮೆ ಮಾಜಿ ಸೈನಿಕರ ಅದಾಲತ್ ನಡೆಸುವಂತೆ ತಹಸೀಲ್ದಾರರಿಗೆ ನಿರ್ದೇಶನ ನೀಡಿದರು. ಮಾಜಿ ಸೈನಿಕರಿಗೆ ಪೈಸಾರಿ ಜಾಗದಲ್ಲಿರುವ ಒಂದೆರಡು ಎಕರೆ ಭೂಮಿಯನ್ನು ಅವರ ಹೆಸರಿಗೆ ಆರ್‌ಟಿಸಿ ಮಾಡುವ ಸಂಬಂಧ ಪರಿಶೀಲಿಸಲಾಗುವುದು. ಈ ಸಂಬಂಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಮಾಜಿ ಸೈನಿಕರಿಗೆ ಭೂಮಿ ಒದಗಿಸುವ ಸಂಬಂಧ ನಿಯಮಗಳನ್ನು ಸಡಿಲಿಕೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು. ಮಾಜಿ ಸೈನಿಕರ ಹಲವು ಕುಂದುಕೊರತೆ ಪರಿಹರಿಸಲು ಸಾಧ್ಯವಾದಷ್ಟು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಭೂಮಿ ದಾಖಲೆ ಸಂಬಂಧ ವೈಯಕ್ತಿಕ ಕಡತಗಳನ್ನು ಹಂತ ಹಂತವಾಗಿ ನಿಯಮಾನುಸಾರ ಪರಿಶೀಲಿಸಿ ನ್ಯಾಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ನುಡಿದರು.

ನಿವೇಶನ ಹಾಗೂ ಮನೆ ಇಲ್ಲದ ಮಾಜಿ ಸೈನಿಕರಿಗೆ ನಿವೇಶನ ಹಾಗೂ ಮನೆ ಕಲ್ಪಿಸುವ ಸಂಬಂಧ ಪರಿಶೀಲಿಸಲಾಗುವುದು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು. ಜಿಲ್ಲೆಯ ವಿವಿಧ ಕಡೆಗಳಲ್ಲಿ ಖಾಸಗಿ ಬಡಾವಣೆ ನಿರ್ಮಾಣ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ ನಿವೇಶನ ಮೀಸಲಿಡಲು ಸಂಬಂಧಪಟ್ಟವರ ಜೊತೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಸೋಮಶೇಖರ್ ಭರವಸೆ ನೀಡಿದರು.


ಸರ್ಕಾರಿ ಕಚೇರಿಗೆ ಬರುವ ಮಾಜಿ ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಮಾಜಿ ಸೈನಿಕರ ಜಿಲ್ಲಾ ಅಧ್ಯಕ್ಷರಾದ ಮೇಜರ್ ಜನರಲ್ (ನಿವೃತ್ತ) ಬಿ.ಎ.ಕಾರ್ಯಪ್ಪ ಅವರು ಮಾತನಾಡಿ ಮಾಜಿ ಸೈನಿಕರು ಜಮ್ಮು ಮತ್ತು ಕಾಶ್ಮೀರದಂತಹ ಎತ್ತರ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿ ಬಂದಿದ್ದಾರೆ. ಇಂತಹ ಮಾಜಿ ಸೈನಿಕರಿಗೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸುವಂತಾಗಬೇಕು ಎಂದು ಮನವಿ ಮಾಡಿದರು.

ಮಾಜಿ ಸೈನಿಕರಿಗಾಗಿ ಜಿಲ್ಲಾ ಕೇಂದ್ರ ಮಡಿಕೇರಿ ಮತ್ತು ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಬೇಕು. ಆಸ್ಪತ್ರೆ, ಕ್ಯಾಂಟಿನ್ ಮತ್ತಿತರ ಸೌಲಭ್ಯಕ್ಕೆ ಕನಿಷ್ಠ 20 ಸೆಂಟ್ ಜಾಗವನ್ನಾದರೂ ನೀಡುವಂತಾಗಬೇಕು ಎಂದು ಕೋರಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಹುಟ್ಟು ಹಬ್ಬಕ್ಕೆ ಆಹ್ವಾನಿಸಬೇಕು ಎಂದು ಬಿ.ಎ.ಕಾರ್ಯಪ್ಪ ಅವರು ಸಲಹೆ ಮಾಡಿದರು.

ಜಿಲ್ಲೆಯ ಹಲವು ಕಡೆಗಳಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದು, ಇಂತಹ ಒತ್ತುವರಿ ಭೂಮಿಯನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳು ಹಾಗೂ ಮಾಜಿ ಸೈನಿಕರಿಗೆ ಕನಿಷ್ಠವನ್ನಾದರೂ ಒದಗಿಸಬೇಕು ಎಂದು ಬಿ.ಎ.ಕಾರ್ಯಪ್ಪ ಅವರು ಹೇಳಿದರು. ನಿವೃತ್ತ ಮೇಜರ್‌ ಚಿಂಗಪ್ಪ ಅವರು ಮಾತನಾಡಿ ಮಾಜಿ ಸೈನಿಕರು ಅವರ ಊರಿನ ಬಳಿ ಒಂದೆರಡು ಎಕರೆಯಲ್ಲಿ ತೋಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂತವರಿಗೆ ಆದ್ಯತೆ ಮೇಲೆ ಆರ್‌ಟಿಸಿ ಮಾಡಿಕೊಡುವಂತಾಗಬೇಕು ಎಂದು ಕೋರಿದರು. ಶೇ.50 ರಷ್ಟು ಮಾಜಿ ಸೈನಿಕರಿಗೆ ಮತ್ತು ಅವರ ಅವಲಂಬಿತರಿಗೆ ಮನೆ ಇಲ್ಲ. ಹಾಗಾಗಿ ಅಂತವರನ್ನು ಗುರುತಿಸಿ ಕನಿಷ್ಠ ಮೂಲ ಸೌಲಭ್ಯ ನಿವೇಶನ/ ಮನೆ ನಿರ್ಮಿಸಿಕೊಡುವಂತಾಗಬೇಕು ಎಂದು ಚಿಂಗಪ್ಪ ಅವರು ಸಲಹೆ ಮಾಡಿದರು.

ಮಾಜಿ ಸೈನಿಕರಾದ ವೀರೇಶ್ ಅವರು ಮಾತನಾಡಿ ಕೆಲವು ಮಾಜಿ ಸೈನಿಕರು ಹಾಗೂ ಅವಲಂಬಿತ ಕುಟುಂಬಗಳು ಇಂದಿಗೂ ಸಹ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ ಆದಷ್ಟು ಆದ್ಯತೆ ಮೇಲೆ ನಿವೇಶನ ಒದಗಿಸಬೇಕು ಎಂದರು.

ಕುಟುಂಬದವರೇ ಪಿತ್ರಾರ್ಜಿತ ಪಾಲು ನೀಡಿಲ್ಲ: ಮಾಜಿ ಸೈನಿಕರೊಬ್ಬರು ಮಾತನಾಡಿ ಮಾಜಿ ಸೈನಿಕರಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕುಟುಂಬದವರೇ ನನಗೆ ಪಾಲು ನೀಡದೆ ಸತಾಯಿಸುತ್ತಿದ್ದು, ಈ ಸಂಬಂಧ ನನಗೆ ಪಾಲು ದೊರೆಯುವಂತಾಗಬೇಕು ಎಂದು ಕೋರಿದರು.

ಸೈನಿಕನಾಗಿ ಮೈಸೂರು, ಬೆಂಗಳೂರಿನಲ್ಲಿ ಸೆಕ್ಯುರಿಟಿ ಕೆಲಸಮಾಡಿ ಜೀವನ ದೂಡುತ್ತಿದ್ದೇನೆ. ಪಿತ್ರಾರ್ಜಿ ಆಸ್ತಿ ಸಂಬಂಧ ಸಹೋದರರನ್ನು ಕರೆಸಿ ಮಾತನಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರಲ್ಲಿ ಅವಲತ್ತುಕೊಂಡರು.ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಾ.ಬಿ.ಸಿ.ಸತೀಶ ಅವರು ಈ ಸಂಬಂಧ ನ್ಯಾಯ ಒದಗಿಸಲು ಶ್ರಮಿಸಿದ್ದರು ಎಂದು ಅವರು ಗುಣಗಾನ ಮಾಡಿದರು. ಮಾಜಿ ಸೈನಿಕರಾದ ಐ.ಕೆ.ಮಂದಣ್ಣ ಅವರು ಮಾತನಾಡಿ ಮಾಜಿ ಸೈನಿಕರ ಮತ್ತು ಅವಲಂಬಿತರ ಅದಾಲತನ್ನು ಕಾಲ ಕಾಲಕ್ಕೆ ಆಹ್ವಾನಿಸಬೇಕು. ಮಾಜಿ ಸೈನಿಕರಿಗಾಗಿ ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಏಪ್ರಿಲ್, 15 ರವರೆಗೆ ಮನೆ ಮನೆ ಸಮೀಕ್ಷೆ ಕಾರ್ಯ ನಡೆಯಲಿದ್ದು, ಈ ಕಾರ್ಯದಲ್ಲಿ ಸ್ವಯಂ ಗಣತಿ ಮಾಡುವಂತಾಗಬೇಕು 16 ರಿಂದ ಮನೆ ಮನೆ ಸಮೀಕ್ಷೆ ನಡೆಯಲಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಮಾತನಾಡಿ ಏಪ್ರಿಲ್, 1 ರಿಂದ 15 ರವರೆಗೆ ಮನೆ ಮನೆ ಸಮೀಕ್ಷೆ ನಡೆಯಲಿದ್ದು, ಸಮೀಕ್ಷೆಯನ್ನು ಸ್ವಯಂ ದಾಖಲಿಸುವಂತಾಗಬೇಕು. ಹಾಗೆಯೇ, ಏಪ್ರಿಲ್, 16 ರಿಂದ ಮನೆ ಮನೆ ಸಮೀಕ್ಷೆ ಕಾರ್ಯ ನಡೆಯಲಿದ್ದು, ಗಣತಿದಾರರು ಮನೆಗೆ ಭೇಟಿ ನೀಡಲಿದ್ದಾರೆ ಎಂದರು. ಎಲ್ಲ ಮಾಜಿ ಸೈನಿಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡು ಸಮೀಕ್ಷೆ ಕಾರ್ಯದಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುವಂತೆ ಆರ್.ಐಶ್ವರ್ಯ ಅವರು ಕೋರಿದರು. ಮಂಗಳವಾರ ನಡೆದ ಮಾಜಿ ಸೈನಿಕರ ಮತ್ತು ಅವಲಂಬಿತರ ಕುಂದುಕೊರತೆ ಸಭೆಯಲ್ಲಿ 50 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಆರ್.ಶೆಟ್ಟಿ, ತಹಸೀಲ್ದಾರ್‌ ಪ್ರವೀಣ್ ಕುಮಾರ್, ಕೃಷ್ಣಮೂರ್ತಿ, ಸಂಜನಾ, ಮಾಜಿ ಸೈನಿಕರು ಇತರರು ಇದ್ದರು.