ಕೊಪ್ಪಳ: ಪ್ರತಿ ವರ್ಷ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಏ.7ರಂದು ಆಚರಿಸಲಾಗುತ್ತದೆ.ಆರೋಗ್ಯಕ್ಕಾಗಿ ಒಟ್ಟಿಗೆ ವಿಜ್ಞಾನದೊಂದಿಗೆ ನಿಲ್ಲೋಣ ಎಂಬುದು ಈ ವರ್ಷದ ಘೋಷ್ಯ ವಾಕ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್‌ಕ್ರಾಸ್‌ ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ವಿಶ್ವ ಆರೋಗ್ಯ ದಿನಾಚರಣೆಯ ಉದ್ದೇಶ ಜಾಗತಿಕ ಆರೋಗ್ಯ ಸಮಸ್ಯೆ ಬೆಳಕಿಗೆ ತರುವುದು, ಆರೋಗ್ಯ ಜಾಗೃತಿ ಮೂಡಿಸುವುದು ಮತ್ತು ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಸಿಗುವಂತೆ ಮಾಡುವುದು. ತಾಯಿ ಮತ್ತು ಶಿಶು ಮರಣ ದರ ಕಡಿಮೆ ಮಾಡುವುದು ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಜಿಲ್ಲಾ ಶಾಖೆ ಉಪಸಭಾಪತಿ ಡಾ.ಮಂಜುನಾಥ ಸಜ್ಜನ್‌ ಮಾತನಾಡಿ, ಆಧುನಿಕ ಯುಗವಾದ ಇಂದಿನ ದಿನಗಳಲ್ಲಿ ಅನೇಕರು ಫಾಸ್ಟ್ ಪುಡ್ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.ಇದರಿಂದ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ರಸ್ತೆ ಬದಿಯಲ್ಲಿನ ತಿನಿಸುಗಳಿಗೆ ಆಕರ್ಷಿತರಾಗದೇ ಆರೋಗ್ಯದ ಕಡೆ ಗಮನಹರಿಸಬೇಕು. ವ್ಯಾಯಾಮ, ಯೋಗ, ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡಗಳಿಗೆ ಒಳಗಾಗದೇ ಆರೋಗ್ಯವಾಗಿ ಇರಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವೈ.ಬಿ. ಅಂಗಡಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಉತ್ತಮ ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿದೆ.ಇಂದಿನ ಯುವಕರು ದುಡುಕು ನಿರ್ಧಾರದಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಕಾರಣ ಯುವಕರು ದುಶ್ಚಟಗಳಿಗೆ ಒಳಗಾಗದೇ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಕಾಲೇಜು ಯುವ ರೆಡ್‌ ಕ್ರಾಸ್‌ ಘಟಕದ ಸಂಯೋಜಕ ಶಿವನಾಥ ಇ.ಜಿ.ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಯುವ ರೆಡ್‌ಕ್ರಾಸ್‌ ಸಂಯೋಜಕ ಗುದ್ನೇಶ್‌ ಸೇರಿದಂತೆ ವಿದ್ಯಾರ್ಥಿಗಳು,ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು. ಉಪನ್ಯಾಸಕ ಸೋಮೇಶ ನಿರೂಪಿಸಿದರು, ತುಕಾರಾಮ ನಾಯ್ಕ್ ಸ್ವಾಗತಿಸಿದರು, ಡಾ. ಬಾಲಾಜಿ ಎಸ್. ವಂದಿಸಿದರು.