ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಆವರಣ ಉದ್ಯಾನಗಿರಿಯಲ್ಲಿ ಡಿ.21ರಿಂದ 23ರವರೆಗೆ ಮೂರು ದಿನಗಳ ಕಾಲ ತೋಟಗಾರಿಕೆ ಮೇಳವನ್ನು ಮೌಲ್ಯವರ್ಧನೆ ಮತ್ತು ರಪ್ತು ಅವಕಾಶಗಳಿಗಾಗಿ ನಿಖರ ತೋಟಗಾರಿಕೆ ಎಂಬ ಧ್ಯೇಯ್ಯವಾಕ್ಯದೊಂದಿಗೆ ಆಯೋಜಿಸಲಾಗುತ್ತಿದೆ ಎಂದು ತೋವಿವಿ ಕುಲಪತಿ ಡಾ.ವಿಷ್ಣುವರ್ಧನ್ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಆವರಣ ಉದ್ಯಾನಗಿರಿಯಲ್ಲಿ ಡಿ.21ರಿಂದ 23ರವರೆಗೆ ಮೂರು ದಿನಗಳ ಕಾಲ ತೋಟಗಾರಿಕೆ ಮೇಳವನ್ನು ಮೌಲ್ಯವರ್ಧನೆ ಮತ್ತು ರಪ್ತು ಅವಕಾಶಗಳಿಗಾಗಿ ನಿಖರ ತೋಟಗಾರಿಕೆ ಎಂಬ ಧ್ಯೇಯ್ಯವಾಕ್ಯದೊಂದಿಗೆ ಆಯೋಜಿಸಲಾಗುತ್ತಿದೆ ಎಂದು ತೋವಿವಿ ಕುಲಪತಿ ಡಾ.ವಿಷ್ಣುವರ್ಧನ್ ಹೇಳಿದರು.ತೋವಿವಿಯ ಪ್ರೇಕ್ಷಾಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೇಳದಲ್ಲಿ ರಾಜ್ಯಾದ್ಯಂತ 5 ಲಕ್ಷಕ್ಕೂ ಅಧಿಕ ರೈತರು, ಉದ್ಯಮಿಗಳು, ಪಾಲುದಾರರು ಮತ್ತು ಗಣ್ಯರು ಭಾಗವಹಿಸಲಿದ್ದು, ತೋಟಗಾರಿಕೆಯಲ್ಲಿ ವ್ಯಾಪಾರ ಉತ್ತೇಜಿಸಲು ರಪ್ತುದಾರರ ಮತ್ತು ಮಾರಾಟಗಾರರ ನಡುವಿನ ಮಾರುಕಟ್ಟೆ ಸಂಪರ್ಕ ಬಲಪಡಿಸಲು ವಿನ್ಯಾಸಗೊಳಿಸಲಾದ ನಿಖರ ತೋಟಗಾರಿಕೆ ತಂತ್ರಜ್ಞಾನಗಳು, ಮೌಲ್ಯವರ್ಧನೆ, ರಫ್ತು ಸಮಾವೇಶ ಮತ್ತು ಖರೀದಿದಾರರ-ಮಾರಾಟಗಾರರ ಸಭೆ ಈ ಮೇಳದ ಪ್ರಮುಖ ಅಂಶಗಳಾಗಿದೆ. ಸಚಿವರು, ಸಂಸದರು, ಶಾಸಕರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆಂದರು.
ತೋಟಗಾರಿಕೆ ಮೇಳ ತಂತ್ರಜ್ಞಾನ ಪ್ರಸರಣದ ಅತ್ಯಂತ ಪರಿಣಾಮಕಾರಿ ಕಾರ್ಯಕ್ರಮವಾಗಿದ್ದು, ಒಂದೇ ಸೂರಿನಡಿ ಪ್ರತಿ ವರ್ಷ ರೈತ ಸಮುದಾಯಕ್ಕೆ ನವೀನ, ಸಮಯೋಜಿತ ತಂತ್ರಜ್ಞಾನಗಳನ್ನು ವರ್ಗಾವಣೆ ಮಾಡಲು ತೋಟಗಾರಿಕೆ ಮೇಳ ಆಯೋಜಿಸಲಾಗುತ್ತಿದೆ. ಮೇಳದ ಪ್ರತಿದಿನವೂ ಸಾಧಕ ರೈತರು ತಮ್ಮ ಅನುಭವಗಳನ್ನು ಇತರೇ ರೈತರೊಂದಿಗೆ ಹಂಚಿಕೊಳ್ಳಲಿದ್ದಾರೆ. ಹಿರಿಯ ವಿಜ್ಞಾನಿಗಳು ಮತ್ತು ಪ್ರಗತಿಪರ ರೈತರೊಂದಿಗೆ ಸಂವಾದ ಏರ್ಪಡಿಸಲಾಗುತ್ತದೆ. ವಿಶ್ವವಿದ್ಯಾಲಯ ವ್ಯಾಪ್ತಿಯ 24 ಜಿಲ್ಲೆಗಳಿಂದ ಗುರುತಿಸಲ್ಪಟ್ಟ ಫಲಶ್ರೇಷ್ಠರನ್ನು ತೋಟಗಾರಿಕೆ ಮೇಳದಲ್ಲಿ ಪ್ರತಿ ದಿನ 8 ಜನರಂತೆ ಮೂರು ದಿನಗಳಲ್ಲಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.ಮೇಳದಲ್ಲಿ 400ಕ್ಕೂ ಹೆಚ್ಚು ಸರ್ಕಾರಿ, ಖಾಸಗಿ ಸಂಘ-ಸಂಸ್ಥೆಗಳ ಮಳಿಗೆಗಳು ಮತ್ತು ಯಾಂತ್ರೀಕರಣ ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಮಳಿಗೆಗಳಲ್ಲಿ 150 ಹೈಟೆಕ್, 150 ಸಾಧಾ ಮಳಿಗೆ, 40 ಇತರೆ 20 ಯಂತ್ರೋಪಕರಣಗಳ ಮಳಿಗೆ, 10 ನರ್ಸರಿ ಮಳಿಗೆ, 10 ಜಾನುವಾರು ಪ್ರದರ್ಶನ ಮಳಿಗೆ ಹಾಗೂ 20 ಆಹಾರ ಮಳಿಗೆ ಹಾಕಲಾಗುತ್ತಿದೆ. ಒಳಾಂಗಣ ಪ್ರದರ್ಶನದಲ್ಲಿ ವಿವಿಧ ದೇಶಿ, ವಿದೇಶಿ ಜಾತಿಯ ಹಣ್ಣು, ತರಕಾರಿ, ಹೂವಿನ ಬೆಳೆಗಳ ತಳಿಗಳು, ಬೀಜಗಳು ಮತ್ತು ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ, ವಿಶ್ವವಿದ್ಯಾಲಯದಲ್ಲಿ ಉತ್ಪಾದಿಸಿದ ವಿವಿಧ ಸಸಿಗಳು, ಬೀಜಗಳು, ಜೈವಿಕ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳು, ಪರಿಕರ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಸಾರ್ವಜನಿಕ ಮತ್ತು ಖಾಸಗಿ ಸಹಭಾಗೀತ್ವದಲ್ಲಿ ನಿಖರ ತೋಟಗಾರಿಕೆ ಮೌಲ್ಯವರ್ಧನೆ ಹಾಗೂ ರಪ್ತು ಅವಕಾಶಗಳಿಗಾಗಿ ವಿವಿಧ ವಿಷಯಾಧಾರಿತ ಸಮುಚ್ಛಯ ಏರ್ಪಡಿಸಿ, ಸಮಗ್ಯ ಮಾಹಿತಿ ನೀಡಲು ನುರಿತ ವಿಜ್ಞಾನಿ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳನ್ನು ಸಹ ಏರ್ಪಡಿಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ರೈತರು ಮೇಳದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳುವಂತೆ ತೋವಿವಿಯ ಕುಲಪತಿಗಳು ಕೋರಿದರು.
ಸುದ್ದಿಗೋಷ್ಠಿಯಲ್ಲಿ ತೋವಿವಿಯ ವಿಸ್ತರಣೆ ನಿರ್ದೇಶಕ ಹಾಗೂ ತೋಟಗಾರಿಕೆ ಮೇಳದ ಅಧ್ಯಕ್ಷ ಡಾ.ವೆಂಕಟೇಶಲು, ಸಂಶೋಧನ ನಿರ್ದೇಶಕ ಹಾಗೂ ಮೇಳದ ಉಪಾಧ್ಯಕ್ಷ ಡಾ.ಬಿ.ಫಕೃದ್ದೀನ್, ಪ್ರಚಾರ ಸಮಿತಿಯ ಶಾಂತಪ್ಪ ತಿರಕನ್ನನವರ, ಡಾ.ಶಶಿಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.ವಿಶೇಷ ಕ್ಷೇತ್ರ ಪ್ರಾತ್ಯಕ್ಷಿಕೆ:
ವಿಶೇಷ ಕ್ಷೇತ್ರ ಪ್ರಾತ್ಯಕ್ಷಿಕೆ ಸಹ ಪ್ರದರ್ಶಿಸಲಾಗುತ್ತಿದೆ. 32 ಬೆಳೆಗಳ 52 ತರಕಾರಿ ತಳಿಗಳ ಪ್ರಾತ್ಯಕ್ಷಿಕೆ, ಕೈತೋಟ, ಪೌಷ್ಟಿಕ ತೋಟ, 82 ಹೂವಿನ ತಳಿಗಳ ಪ್ರಾತ್ಯಕ್ಷಿಕೆ, ಔಷಧಿ, ಸುಗಂಧಿ ದ್ರವ್ಯ ಬೆಳೆಗಳಿಗೆ ಸಂಬಂಧಿಸಿದ 50 ಬೆಳೆಗಳ ಪ್ರಾತ್ಯಕ್ಷಿಕೆ, ಖುಷ್ಕಿ ತೋಟಗಾರಿಕೆ, ನೀರು ಸಂರಕ್ಷಣೆ ಹಾಗೂ ಬೇರು ಸಸಿ ಅಭಿವೃದ್ಧಿಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆ, ಮಾವು, ದ್ರಾಕ್ಷಿ, ದಾಳಿಂಬೆ, ಪಪ್ಪಾಯ ಮತ್ತು ಡ್ರ್ಯಾಗನ್ ಫ್ರುಟ್‌ನ ವಿವಿಧ ತಳಿಗಳ ಪ್ರದರ್ಶನ ಹಾಗೂ 70ನೇ ಸೆಕ್ಟರ್‌ನಲ್ಲಿ 22 ದ್ರಾಕ್ಷಿ ತಳಿಗಳನ್ನೊಳಗೊಂಡ ತಾಕುಗಳ ಪ್ರದರ್ಶನ ಸಿದ್ಧಪಡಿಸಲಾಗಿದೆ. ಮೇಳದಲ್ಲಿ ತೋಟಗಾರಿಕೆ ಬೆಳೆಗಳ ಉತ್ಪಾದನೆ ಬಗ್ಗೆ ಮಾಹಿತಿ ದೊರಕಿಸುವ ನಿಟ್ಟಿನಲ್ಲಿ ಹಾರ್ಟ್ ಗೈಡ್ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ.