ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಕ್ಕಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಶಾಲೆಗಳ ಅಭಿವೃದ್ಧಿ, ಕಾಲೇಜು ವಿದ್ಯಾರ್ಥಿಗಳ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಹಮ್ಮಿಕೊಂಡಿದೆ ಎಂದು ಬೆಂಗಳೂರು ವಿಜಯನಗರ ರೋಟರಿ ಸಂಸ್ಥೆಯ ಸಿಎಸ್‌ಆರ್ ಅಧ್ಯಕ್ಷ ಶಶಿಮೌಳಿ ತಿಳಿಸಿದರು.ರೋಟರಿ ಸಂಸ್ಥೆ ವಿಜಯನಗರ ಶಾಖೆಯಿಂದ ತಾಲೂಕಿನ ಹೊಸಬೂದನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳು ಯಾವ ರೀತಿ ಇವೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಕಳೆದ ಮೂರು ವರ್ಷಗಳಿಂದ ಜಿಲ್ಲೆಯ 25ಕ್ಕೂ ಹೆಚ್ಚು ಶಾಲೆಗಳಿಗೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಶಾಲೆಯಲ್ಲಿ ಈಗಾಗಲೇ ಮೂರು ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಈಗಾಗಲೇ ಶಾಲಾ ಕೊಠಡಿಗಳು, ಶೌಚಾಲಯಗಳು, ಸ್ಮಾರ್ಟ್ ಕ್ಲಾಸ್, ಪುಸ್ತಕ, ಬ್ಯಾಗ್, ವಿಜ್ಞಾನ ಕಿಟ್‌ಗಳು ಸೇರಿದಂತೆ ಶೈಕ್ಷಣಿಕವಾಗಿ ಏನೆಲ್ಲಾ ಮಾಡಬಹುದು ಅದೆಲ್ಲವನ್ನೂ ನೀಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಮುಂದಾಗಿದೆ ಎಂದು ವಿವರಿಸಿದರು.ಗ್ರಾಮೀಣ ಮಕ್ಕಳಲ್ಲಿ ಆಂಗ್ಲ ಭಾಷಾ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಪ್ರಾರಂಭಿಸಲಾಗುವುದು. ಹಿರಿಯರ ಕಲಿಕಾ ಕೇಂದ್ರ, ಸಂಕಲ್ಪ ಹೆಸರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ಕೆಸಿಇಟಿ ತರಬೇತಿ ನೀಡಲಾಗುವುದು. ಪಿಯುಸಿ ಮಕ್ಕಳು ಇಂಟಿಗ್ರೇಟಿವ್ ತರಬೇತಿ ಪಡೆಯಲು 30 ರಿಂದ 40 ಸಾವಿರ ಖರ್ಚು ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಉಚಿತವಾಗಿ ತರಬೇತಿ ನೀಡಲು ನಿರ್ಧರಿಸಿದ್ದೇವೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎನ್.ರಘು, ವಿಜಯನಗರ ರೋಟರಿ ಸಂಸ್ಥೆಯ ನಂದಗೋಪಾಲ್, ಸುದರ್ಶನ್ ರೆಡ್ಡಿ, ರಮೇಶ್, ಉಮ್ಮಡಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನಾಗರಾಜು, ಕಟ್ಟಡದ ದಾನಿ ವಿಜಯಮ್ಮ, ಮುಖ್ಯ ಶಿಕ್ಷಕಿ ಲಕ್ಷ್ಮಮ್ಮ, ಎಸ್‌ಡಿಎಂಸಿ ಸದಸ್ಯರಾದ ಲೋಕೇಶ್, ಮಹೇಶ್, ಯೋಗೇಶ್, ಮಾಜಿ ಸದಸ್ಯ ಶಿವಲಿಂಗು, ಗ್ರಾಪಂ ಸದಸ್ಯರಾದ ಅರುಣ ಕುಮಾರ್, ಶಿಲ್ಪ, ಸೊಸೈಟಿ ಸದಸ್ಯ ವಿದೀಪ, ಮುಖಂಡ ಜಯರಾಮು, ಮನು ಇತರರಿದ್ದರು.