ಸಾರಾಂಶ
ಬ್ಯಾಡಗಿ: ಆರ್ಥಿಕವಾಗಿ ನಿರ್ಗತಿಕ ಕುಟುಂಬಗಳಿಗೆ ಮನೆ ಕಟ್ಟಿಕೊಡುವ ಮೂಲಕ ಸಾಮಾಜಿಕ ನ್ಯಾಯದಡಿ ಸರ್ಕಾರದ ಹೊರೆಯನ್ನು ಇಳಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಂದಾಗಿದೆ ಎಂದು ಎಸ್‌ಡಿಎಂ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಾತ್ಸಲ್ಯ ಕಾರ್ಯಕ್ರಮದಡಿ ಬ್ಯಾಡಗಿ ಮತಕ್ಷೇತ್ರದ ವೆಂಕಟಾಪುರದ (ಕಾಕೋಳ ತಾಂಡಾ) ಚೆನ್ನಮ್ಮ ಲಮಾಣಿ ಅವರಿಗೆ 300 ಅಡಿ ಅಳತೆಯ ನಿರ್ಮಿಸಿದ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಿ ಅವರು ಮಾತನಾಡಿದರು.ಬದುಕಿನ ಅನಿರೀಕ್ಷಿತ ಘಟನೆಗಳು ಬಡ ಕುಟುಂಬಗಳನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಮನೆ ಯಜಮಾನಿ ಅನಕ್ಷರಸ್ಥರಾಗಿದ್ದಲ್ಲಿ ಈ ಕುಟುಂಬ ಜೀವನವಿಡಿ ಕೂಲಿನಾಲಿ ಮಾಡಿಕೊಂಡೇ ಬದುಕಬೇಕಾಗುತ್ತದೆ. ಈ ಎಲ್ಲ ಕಾರಣಗಳ ಹಿನ್ನೆಲೆಯನ್ನಿಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವಾತ್ಸಲ್ಯ ಕಾರ್ಯಕ್ರಮ ಪ್ರಕಟಿಸಿದ್ದು, ತನ್ಮೂಲಕ ನಿರ್ಗತಿಕ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಕೆಲಸಕ್ಕೆ ಮುಂದಾಗಿದೆ ಎಂದರು.
ಆರ್ಥಿಕ ಪರಿಸ್ಥಿತಿ ಕಠಿಣವಾದಾಗ ಸಹಾಯಕ್ಕಾಗಿ ಎಲ್ಲಿಗೆ ಹೋಗಬೇಕು ಎಂಬುದು ಬಡ ಕುಟುಂಬಗಳಿಗೆ ತಿಳಿಯದಂತಾಗುತ್ತದೆ. ಇಂತಹ ಕುಟುಂಬಗಳ ನೆರವಿಗೆ ಅಥವಾ ಅಗತ್ಯವಿರುವ ಜನರನ್ನು ಗುರ್ತಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಆರ್ಥಿಕ ನೆರವಿಗೆ ಧಾವಿಸಲಿದೆ ಎಂದರು.ಮುರಿಗೆಪ್ಪ ಶೆಟ್ಟರ ಮಾತನಾಡಿ, ಸರ್ಕಾರದ ಧನಸಹಾಯದ ಕೈಚಾಚದಂತೆ ಕುಟುಂಬಕ್ಕೆ ಸೂರನ್ನು ಒದಗಿಸಲಾಗಿದ್ದು, ಶ್ರೀ ಮಂಜುನಾಥನ ಆಶಿರ್ವಾದದಿಂದ ಈ ಕುಟುಂಬವು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಆರ್ಥಿಕವಾಗಿ ಸಬಲವಾಗಲಿ ಎಂದು ಶುಭ ಕೋರಿದರು.
ಕಾಕೋಳ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಜುಗೌಡ, ಎಸ್‌ಡಿಎಂ ಯೋಜನಾಧಿಕಾರಿ ಜಿ. ರಘುಪತಿ, ಜ್ಞಾನ ವಿಕಾಸ ಯೋಜನಾಧಿಕಾರಿ ಮಲ್ಲಿಕಾ ಪೂಜಾರಿ, ಸಮನ್ವಯಾಧಿಕಾರಿ ಶೀತಲ್ ಬೇಕಲ್, ಸೇವಾಲಾಲ್ ದೇವಸ್ಥಾನದ ಅಧ್ಯಕ್ಷರು, ಎಸ್‌ಡಿಎಂ ಸೇವಾ ಪ್ರತಿನಿಧಿ, ಗಣ್ಯರು, ಸ್ವಸಹಾಯ ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.