ಮುಡಾ ಪ್ರಕರಣ ಸಿಬಿಐಗೆ: ವಿಚಾರಣೆ ಜ. 27ಕ್ಕೆ ಮುಂದೂಡಿಕೆ

| Published : Jan 16 2025, 12:49 AM IST

ಮುಡಾ ಪ್ರಕರಣ ಸಿಬಿಐಗೆ: ವಿಚಾರಣೆ ಜ. 27ಕ್ಕೆ ಮುಂದೂಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ತನಿಖೆ ನಿಷ್ಪಕ್ಷಪಾತವಾಗಿರಬೇಕು. ಜನರಲ್ಲಿ ವಿಶ್ವಾಸ ಮೂಡಿಸುವಂತಿರಬೇಕು. ರಾಜಕಾರಣಿಗಳು ಈ ಪ್ರಕರಣದಲ್ಲಿರುವ ಕಾರಣ ನಿಷ್ಪಕ್ಷಪಾತ ತನಿಖೆ ಕಷ್ಟ. ಹೀಗಾಗಿ ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದೆ. ಮೂವರು ಸದಸ್ಯರ ಸಮಿತಿಯು ತನಿಖೆಯ ಉಸ್ತುವಾರಿ ತೆಗೆದುಕೊಂಡಿದೆ.

ಧಾರವಾಡ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡ ಇಲ್ಲಿಯ ಹೈಕೋರ್ಟ್ ಪೀಠವು ಸುದೀರ್ಘ ವಾದ-ಪ್ರತಿವಾದ ಆಲಿಸಿ ವಿಚಾರಣೆಯನ್ನು ಜ.27ಕ್ಕೆ ಮುಂದೂಡಿ ಆದೇಶ ನೀಡಿತು.

ಮುಡಾ ಹಗರಣದ ತನಿಖೆ ನಡೆಸುವ ಲೋಕಾಯುಕ್ತ ಸಂಸ್ಥೆ ಮೇಲೆ ಸರ್ಕಾರ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಪ್ರಕರಣ ಸಿಬಿಐಗೆ ವಹಿಸುವಂತೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ರಿಟ್ ಅರ್ಜಿ ಸಲ್ಲಿಸಿದ್ದರು.

ಮುಖ್ಯಮಂತ್ರಿಗಳ ಪರವಾಗಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಮತ್ತು ರಾಜ್ಯಸಭಾ ಸದಸ್ಯ, ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ, ರಾಜ್ಯ ಸರ್ಕಾರದ ಪರ‌ವಾಗಿ ಕಪಿಲ್‌ ಸಿಬಲ್, ಎಜಿ ಶಶಿಕಿರಣ್ ಶೆಟ್ಟಿ ಮತ್ತು ಹಿಂದಿನ ಭೂ ಮಾಲೀಕ ದೇವರಾಜು ಪರ ದುಷ್ಯಂತ್ ದವೆ ಮತ್ತು ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ಹಾಗೂ ವಸಂತಕುಮಾರ ಅವರು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಾದ-ಪ್ರತಿವಾದ ಮಂಡಿಸಿದರು.

ವಿಚಾರಣೆ ಆರಂಭದಲ್ಲಿ ನ್ಯಾಯಪೀಠವು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ವಾದವನ್ನು ಸೀಮಿತಗೊಳಿಸಿ ಎಂದು ಎರಡೂ ಕಡೆ ವಕೀಲರಿಗೆ ಸೂಚನೆ ನೀಡಿತು. ಅಲ್ಲದೇ, ಈವರೆಗಿನ ತನಿಖೆ ವರದಿ ಸಲ್ಲಿಸಿಲ್ಲವೇಕೆ? ಕೂಡಲೇ ಈವರೆಗಿನ ತನಿಖೆ ವರದಿ ಸಲ್ಲಿಸಿ ಎಂದು ಲೋಕಾಯುಕ್ತ ಪೊಲೀಸರ ಪರ ವಕೀಲರಿಗೆ ಸೂಚಿಸಿತು.

ವಾದ-ಪ್ರತಿವಾದ:

ತನಿಖೆ ನಿಷ್ಪಕ್ಷಪಾತವಾಗಿರಬೇಕು. ಜನರಲ್ಲಿ ವಿಶ್ವಾಸ ಮೂಡಿಸುವಂತಿರಬೇಕು. ರಾಜಕಾರಣಿಗಳು ಈ ಪ್ರಕರಣದಲ್ಲಿರುವ ಕಾರಣ ನಿಷ್ಪಕ್ಷಪಾತ ತನಿಖೆ ಕಷ್ಟ. ಹೀಗಾಗಿ ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದೆ. ಮೂವರು ಸದಸ್ಯರ ಸಮಿತಿಯು ತನಿಖೆಯ ಉಸ್ತುವಾರಿ ತೆಗೆದುಕೊಂಡಿದೆ. ರಾಜ್ಯ ಸರ್ಕಾರದಿಂದ ನೇಮಕವಾದ ಪೊಲೀಸರೇ ಇಲ್ಲಿ ತನಿಖೆ ನಡೆಸುತ್ತಾರೆ. ಲೋಕಾಯುಕ್ತ ಪೊಲೀಸರು ನಿಯೋಜನೆ ಮೇಲೆ ಬಂದಿರುತ್ತಾರೆ. ಹೀಗಾಗಿ, ನಿಷ್ಪಕ್ಷಪಾತ ತನಿಖೆ ಕಷ್ಟಸಾಧ್ಯ. ₹ 56 ಕೋಟಿ ಮೊತ್ತದ ನಿವೇಶನಗಳನ್ನು ಅಕ್ರಮವಾಗಿ ಪಡೆಯಲಾಗಿದೆ. ಮುಖ್ಯಮಂತ್ರಿ ಪತ್ನಿ ಈಗ 14 ಸೈಟ್‌ಗಳನ್ನು ಮಿಂಚಿನ ವೇಗದಲ್ಲಿ ಹಿಂತಿರುಗಿಸಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣದಿಂದ ಆರೋಪಿಗಳನ್ನು ರಕ್ಷಿಸಲು ಮುಂದಾಗಿದೆ ಎಂದು ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ವಾದ ಮಂಡಿಸಿದರು.

ಆಗ, 14 ಸೈಟ್ ಹಂಚಿಕೆಗಳಿಗೂ ಇದಕ್ಕೂ ಸಂಬಂಧವಿದೆಯೇ? ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರವಾಗಿ ಮಣೀಂದರ್ ಸಿಂಗ್, ಈ ಫೈಲ್‌ಗಳು ಯಾವುದೆಂದು ಲೋಕಾಯುಕ್ತ ಡಿವೈಎಸ್‌ಪಿ ಹೇಳಿಲ್ಲ. ಹೀಗಾಗಿ, ಈ ಫೈಲ್‌ಗಳೂ ಇದರಲ್ಲಿ ಸೇರಿರಬಹುದು. 145 ಫೈಲ್‌ಗಳ ಕಥೆ ಏನಾಗಿದೆ ಎಂಬುದು ಈವರೆಗೂ ತಿಳಿದಿಲ್ಲ. ಲೋಕಾಯುಕ್ತ ಕಚೇರಿಯೂ ಈ ಫೈಲ್ ಪಡೆಯಲು ಪ್ರಯತ್ನಿಸಿಲ್ಲ ಎಂದು ಉತ್ತರಿಸಿದರು.

ಮುಖ್ಯಮಂತ್ರಿಗಳ ಪರ ಹಿರಿಯ ವಕೀಲ ರವಿವರ್ಮ ಕುಮಾರ್, ಸಂಬಂಧವಿಲ್ಲದ ವಾದಮಂಡನೆ ಮಾಡುತ್ತಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ರಿಟ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮುಖ್ಯಮಂತ್ರಿ ಪರ ವಕೀಲ ಕಪಿಲ್ ಸಿಬಲ್ ಸಮಯ ಕೋರಿದರು. ಜ.27ಕ್ಕೆ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದರು. ಮನವಿ ಪರಿಗಣಿಸಿ ಹೈಕೋರ್ಟ್ ವಿಚಾರಣೆಯನ್ನು ಜ.27ಕ್ಕೆ ಮುಂದೂಡಿತು.

ಹಾಗೆಯೇ, ಲೋಕಾಯುಕ್ತ ಎಡಿಜಿಪಿ ಈ ವರೆಗಿನ ತನಿಖಾ ವರದಿಯನ್ನು ಮುಂದಿನ ವಿಚಾರಣೆಗೆ ಒಂದು ದಿನ ಮುನ್ನ ಸಲ್ಲಿಸಬೇಕು. ಅಲ್ಲಿಯ ವರೆಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬಹುದು ಎಂದು ನ್ಯಾಯಪೀಠ ಹೇಳಿತು.

ಮುಡಾ ಹಗರಣ ಕುರಿತು ಲೋಕಾಯುಕ್ತ ಸಂಸ್ಥೆಯಲ್ಲಿ ಎಫ್‌ಐಆರ್ ದಾಖಲು ಆಗಿದೆ. ಈ ವರೆಗೂ ಲೋಕಾ ಪೊಲೀಸರು ದೂರುದಾರರ ಹೇಳಿಕೆ ಪಡೆದಿಲ್ಲ. ಲೋಕಾಯುಕ್ತ ತನಿಖೆಯಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಪ್ರಾಮಾಣಿಕ ತನಿಖೆಗೆ ಮುಡಾ ಪ್ರಕರಣ ಸಿಬಿಐಗೆ ವಹಿಸಲು ನಮ್ಮ ವಕೀಲರಾದ ಮಣಿಂದರ್ ಸಿಂಗ್, ವಸಂತಕುಮಾರ ಸಮರ್ಥ ವಾದ ಮಂಡಿಸಿದ್ದಾರೆ. ನ್ಯಾಯಾಲಯವು ಈ ಪ್ರಕರಣವನ್ನು ಸಿಬಿಐಗೆ ವಹಿಸುವ ವಿಶ್ವಾಸವಿದೆ ಎಂದು ಅರ್ಜಿದಾರ ಸ್ನೇಹಮಯಿ ಕೃಷ್ಣ ಹೇಳಿದರು.