ಸಾರಾಂಶ
ಯಕ್ಷಗಾನ ಕರಾವಳಿಯ ಕಲೆಯಾದರೂ ಇದು ಬೆಳೆಯಲು ವಿಫುಲವಾದ ಅವಕಾಶಬೇಕು. ಯಕ್ಷ ಅಭಿಮಾನಿಗಳ ಸಂಖ್ಯೆ ಬೆಳೆಯಬೇಕು ಎಂದು ಗುಂಡ್ಮಿ ಅರವಿಂದ ಉಪಾಧ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಯಕ್ಷಗಾನ ಕರಾವಳಿಯ ಕಲೆಯಾದರೂ, ಇದು ಬೆಳೆಯಲು ವಿಪುಲವಾದ ಅವಕಾಶಬೇಕು. ಯಕ್ಷ ಅಭಿಮಾನಿಗಳ ಸಂಖ್ಯೆ ಬೆಳೆಯಬೇಕು ಎಂದು ಅಮೆರಿಕದ ಪಟ್ಲ ಫೌಂಡೇಶನ್ ಅಧ್ಯಕ್ಷರಾದ ಗುಂಡ್ಮಿ ಅರವಿಂದ ಉಪಾಧ್ಯ ತಿಳಿಸಿದರು.ಇತ್ತೀಚೆಗೆ ಅಗಲಿದ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಗುಂಡ್ಮಿ ರಾಮಕೃಷ್ಣ ಐತಾಳರ ‘ನುಡಿ-ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಮೆರಿಕದಲ್ಲಿ ಈ ಬಗ್ಗೆ ಪ್ರಯತ್ನಿಸುತ್ತಿದ್ದೇವೆ. ಸುಮಾರು 30ರಿಂದ 40 ಪ್ರದರ್ಶನಗಳು ನಡೆಯುತ್ತಿವೆ. ಇದೆಲ್ಲವುದಕ್ಕಿಂತಲೂ ಈ ಕಲೆಯ ಉಳಿವಿಗಾಗಿ ಹೋರಾಡುತ್ತಿರುವ ಇಂತಹ ಕಲಾಕೇಂದ್ರಗಳ ಉಳಿವು ಅತ್ಯಗತ್ಯ. ಈ ಬಗ್ಗೆ ತಮ್ಮ ಸಹಕಾರವನ್ನು ನೀಡುವುದಾಗಿ ತಿಳಿಸಿದರು.ಕುಂದಾಪುರದ ಕಲಾಕ್ಷೇತ್ರದ ಕಿಶೋರ ಕುಮಾರ ಅವರು ಮತ್ತು ನಿವೃತ್ತ ಅಧ್ಯಾಪಕರಾದ ಶ್ರೀನಿವಾಸ ಸೋಮಯಾಜಿ ಅವರು ನುಡಿ -ನಮನ ಸಲ್ಲಿಸಿದರು. ಕಲಾಕೇಂದ್ರದ ನಿರಖು ಠೇವಣಿ ಯೋಜನೆಗೆ ಆರ್ಥಿಕ ಸಹಾಯ ನೀಡಿದ ಸುಶೀಲಾ ಹೊಳ್ಳರನ್ನು ಗೌರವಿಸಲಾಯಿತು. ಸಾಲಿಗ್ರಾಮ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಅನಂತಪದ್ಮನಾಭ ಐತಾಳರು ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರು. ರಾಮಚಂದ್ರ ಐತಾಳರು ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಸೋಮಯಾಜಿ ಕೃತಜ್ಞತೆ ಸಲ್ಲಿಸಿದರು. ಸಭಾ ಕಾರ್ಯಕ್ರಮದ ನಂತರ ಹಿರಿಯ ಕಲಾವಿದರಿಂದ ಸಂಪ್ರದಾಯ ಬದ್ಧ ‘ಕರ್ಣಾರ್ಜುನ ಕಾಳಗ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.