ಗೃಹ ಬಳಕೆ ಸಿಲಿಂಡರ್ ವಶ, ಹೋಟೆಲ್‌ ಸ್ವಚ್ಛತೆ ಪರಿಶೀಲನೆ

| Published : Jun 25 2024, 12:47 AM IST

ಗೃಹ ಬಳಕೆ ಸಿಲಿಂಡರ್ ವಶ, ಹೋಟೆಲ್‌ ಸ್ವಚ್ಛತೆ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಅಧಿಕಾರಿಗಳು, ನಗರಸಭೆ ಆರೋಗ್ಯ ಇಲಾಖೆ, ತಹಸೀಲ್ದಾರ್ ಸತೀಶ್ ಕೂಡಲಗಿ ನೇತೃತ್ವದಲ್ಲಿ ನಗರದ ವಿವಿಧ ಹೋಟೆಲ್ ಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಅಧಿಕಾರಿಗಳು, ನಗರಸಭೆ ಆರೋಗ್ಯ ಇಲಾಖೆ, ತಹಸೀಲ್ದಾರ್ ಸತೀಶ್ ಕೂಡಲಗಿ ನೇತೃತ್ವದಲ್ಲಿ ನಗರದ ವಿವಿಧ ಹೋಟೆಲ್ ಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದರು.

ವ್ಯಾಪಾರ ಮಳಿಗೆಗಳು ಹಾಗೂ ಆಹಾರ ಉದ್ಯಮಗಳಲ್ಲಿ ಆಹಾರ ಸುರಕ್ಷಿತ ಮತ್ತು ಗುಣಮಟ್ಟದ ಕಾಯ್ದೆ ೨೦೦೬ ಮತ್ತು ನಿಯಮಗಳು ೨೦೧೧ನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ಮಾಡಲು ೨೦೨೪ರ ಜೂನ್ ನಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ.

ಆ ನಿಟ್ಟಿನಲ್ಲಿ ಸೋಮವಾರ ಇಳಕಲ್ಲಿನ ತಹಸೀಲ್ದಾರ್‌ ನೇತೃತ್ವದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ನಗರದ ವಿವಿಧ ಹೋಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿದರು. ದಾಳಿ ವೇಳೆ ಹೋಟೆಲ್ ಗಳಲ್ಲಿ ಪರವಾನಗಿ, ಆಹಾರ ಗುಣಮಟ್ಟ, ಸ್ವಚ್ಛತೆ, ವಿವಿಧ ನಿಯಮ ಪಾಲಿಸಿದ್ದಾರೆಯೋ ಇಲ್ಲವೋ ಎಂಬುವುದನ್ನು ಅಧಿಕಾರಿಗಳ ತಂಡ ಪರಿಶೀಲಿಸಿದರು. ಹೋಟೆಲ್ ಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಟೆಸ್ಟಿಂಗ್ ಪೌಡರ್, ಬಣ್ಣ ಮಿಶ್ರಿತ ಚಹಾ ಪುಡಿ ಬಳಕೆ, ನಿಯಮ ಪಾಲಿಸದ ಹೋಟೆಲ್‌ಗಳಿಗೆ ತಿಳಿವಳಿಕೆ ಪತ್ರ ನೀಡಿ ಎಚ್ಚರಿಕೆ ನೀಡಿದರು.

ಅಲ್ಲದೆ, ಕೆಲವೊಂದು ಹೋಟೆಲ್‌ ಗಳಲ್ಲಿ ಗೃಹ ಬಳಕೆಯ ಸಿಲಿಂಡರ್ ವಶಪಡಿಸಿಕೊಂಡರು. ಅಲ್ಲದೆ, ಆಹಾರ ಇಲಾಖೆಯ ನಿಯಮ ಪಾಲಿಸದ ಹೋಟೆಲ್‌ಗಳಿಗೆ ಎಚ್ಚರಿಕೆಯ ನೋಟಿಸ್ ನೀಡಿದ್ದಾರೆ.

ಈ ಸಂದರ್ಭದಲ್ಲಿ ಆಹಾರ ಸುರಕ್ಷತೆ ಇಲಾಖೆ ತಾಲೂಕು ಅಧಿಕಾರಿ ಸಂದೀಪ ತಿಡಗುಂದಿ, ಆಹಾರ ನಿರಕ್ಷಕರಾದ ಎಂ.ಎಸ್‌. ಗೌಡರ, ಆಹಾರ ಇಲಾಖೆ ಶಿರಸ್ತೇದಾರ ಎಸ್.ಎಂ. ಬಡ್ಡಿ, ಕಂದಾಯ ನಿರೀಕ್ಷಕ ಎನ್. ಎಂ. ಬಲಕುಂದಿ, ನಗರಸಭೆ ಆರೋಗ್ಯ ನಿರೀಕ್ಷಕ ಮನೋಹರ ದೊಡಮನಿ, ಬಸವರಾಜ ಕಿರಗಿ, ಗುರುರಾಜ ದೇಸಾಯಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.