ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ರಾಜ್ಯದ ಜನತೆಗೆ ಮೇಲಿಂದ ಮೇಲೆ ಬೆಲೆ ಏರಿಕೆ ಬರೆ ಕೊಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಶಿವಯೋಗಮಂದಿರ ಶಾಖಾ ಮಠದಿಂದ ನಗರದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ಹೊರಹಾಕಿದರು.
ನಂತರ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಸಭೆ ನಡೆಸಿ ವಿಧಾಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯವುದಕ್ಕೋಸ್ಕರ ಮುಂದಾಲೋಚನೆ ಇಲ್ಲದೆ ಬೇಕಾಬಿಟ್ಟಿ ಹೊಣಗೇಡಿತನದ ಗ್ಯಾರಂಟಿಗಳನ್ನು ಘೋಷಿಸಿ, ಈಗ ಸರಿಯಾಗಿ ಭಾಗ್ಯಗಳನ್ನು ಈಡೇರಿಸದೇ ಇರುವುದು, ಇನ್ನೊಂದು ಕಡೆ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೆ ಒಂದು ವರ್ಷದಿಂದ ಸತತ ಹಲವಾರು ಬೆಲೆ ಏರಿಕೆ ಭಾಗ್ಯ ನೀಡಿ ಕರ್ನಾಟಕವನ್ನು ಹಗಲು ದರೋಡೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ಮತ್ತೆ ತೈಲೋತ್ಪನ್ನ ಡೀಸೆಲ್ ಮೇಲೆ ಪೆಟ್ರೋಲ್ ದರ ₹ 3-50, ಡೀಸೆಲ್ ₹ 3 ಏರಿಸುವ ಮೂಲಕ ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿರುವುದನ್ನು ಖಚಿತ ಪಡಿಸಿದೆಯಲ್ಲದೆ, ದರ ಏರಿಕೆ ಮೂಲಕ ಜನಸಾಮಾನ್ಯರ ಬದುಕನ್ನು ದುರ್ಬಲಗೊಳಿಸಿದೆ. ದಿನಸಿ ವಸ್ತುಗಳು, ಗೃಹ ಬಳಕೆ ವಸ್ತುಗಳು, ತರಕಾರಿ, ಅಟೋ, ಸಾರಿಗೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿದೆ.ಅಧಿಕಾರಕ್ಕೆ ಬಂದು ಒಂದೇ ವರ್ಷದಲ್ಲಿ ಮುದ್ರಾಂಕ ನೋಂದಣಿ, ಸ್ತಿರಾಸ್ತಿಗಳ ಮಾರ್ಗಸೂಚಿ ದರ, ಮೋಟಾರು ವಾಹನಗಳ ನೋಂದಣಿ ಶುಲ್ಕ, ಒಡಂಬಡಿಕೆ ಪತ್ರಗಳ ಶುಲ್ಕ, ವಾಣಿಜ್ಯ, ವಿದ್ಯುತ್ ದರ, ಹಾಲಿನ ಬೆಲೆ, ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಮದ್ಯದ ಮೇಲಿನ ತೆರಿಯಂತೂ ಒಂದು ವರ್ಷದಲ್ಲಿ ಮೂರು ಬಾರಿ ಹೆಚ್ಚಳವಾಗಿದೆ. ಬರಗಾಲದಿಂದ ತತ್ತರಿಸಿರುವ ರೈತರಿಗೆ ಬಿತ್ತನೆ ಬೀಜದ ದರ ಏರಿಕೆ ಮಾಡಿ ರೈತರ ಶಾಪಕ್ಕೆ ಗುರಿಯಾಗಿದೆ.
ದಲಿತರ ಪರಿಶಿಷ್ಟರ ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಚುನಾವಣೆ, ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಲಜ್ಜಗೇಡಿಯಾಗಿ ಜನಸಾಮಾನ್ಯರ ತೆರಿಗೆ ಹಣವನ್ನ ಎಐಸಿಸಿಗೆ ಸಂದಾಯ ಮಾಡುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ₹ 95 ಕೋಟಿಯನ್ನೇ ನೇರವಾಗಿ ಸರ್ಕಾರವೇ ತೆಲಂಗಾಣ ರಾಜ್ಯದ ಹಲವಾರು ಖಾಸಗಿ ಖಾತೆಗಳಿಗೆ ವರ್ಗಾವಣೆ ಮಾಡಿ ಹಗಲು ದರೋಡೆ ಮಾಡಿದೆ. ಈ ವಿಚಾರದಲ್ಲಿ ಹಣಕಾಸು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದು ಅವರು ರಾಜೀನಾಮೆ ನೀಡುವವರೆಗೂ ಬಿಜೆಪಿ ವಿರಮಿಸುವುದಿಲ್ಲ,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದ್ದು ಮತಾಂಧರು, ಸಮಾಜ ದ್ರೋಹಿಗಳು, ಹೆಚ್ಚಾಗಿದ್ದಾರೆ. ಸರ್ಕಾರ ರಾಜಕೀಯವಾಗಿ ಬಿಜೆಪಿ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ದ್ವೇಷ ರಾಜಕಾರಣ ಮಾಡುತ್ತಿದೆ, ಗೃಹ ಸಚಿವರ ವೈಫಲ್ಯ ಸ್ಪಷ್ಟವಾಗಿದ್ದು,ಉತ್ಸವ ಮೂರ್ತಿ ಗೃಹ ಸಚಿವರಾಗಿದ್ದಾರೆ. ಕಿಂಚಿತ್ತಾದರೂ ಗೌರವವಿದ್ದರೆ ತಕ್ಷಣ ರಾಜಿನಾಮೆ ನೀಡಬೇಕು. ಬೆಲೆ ಏರಿಕೆ ಭ್ರಷ್ಟಾಚಾರಗಳಲ್ಲಿ ಮುಳುಗಿರುವ ರಾಜ್ಯ ಸರ್ಕಾರ ಬೆಲೆ ಏರಿಕೆ ಹಿಂಪಡೆಯಬೇಕು, ಬೆಲೆ ಏರಿಕೆ ಹಿಂಪಡೆಯುವವರೆಗೂ ಬಿಜೆಪಿ ಹೋರಾಟ ಮಾಡಲಿದ್ದು, ಪಕ್ಷ, ಸರ್ಕಾರ ಭಂಡತನದಿಂದ ವರ್ತಿಸಿದಲ್ಲಿ ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಿ ದುಷ್ಟ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕೆಂದು ಉಪ ತಹಸೀಲ್ದಾರ್‌ಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ತಾಲೂಕಾಧ್ಯಕ್ಷ ನಾಗರಾಜ ಕಾಚಟ್ಟಿ, ಬಿ.ಪಿ. ಹಳ್ಳೂರ, ಶೇಖರಗೌಡ ಪಾಟೀಲ, ನಾಗರಾಜ ಕಡಗದ, ಭಾಗ್ಯ ಉದ್ನೂರ, ಪ್ರಕಾಶ ರಾಠೋಡ, ಹೊನ್ನಯ್ಯ ಹಿರೇಮಠ, ಬಸವರಾಜ ಭೂತಾಳಿ, ಶರಣಪ್ಪ ಹೂಗಾರ, ಭೀಮನಗೌಡ ಪಾಟೀಲ, ಬಸವರಾಜ ಪಾತ್ರೋಟಿ, ಬೇಲೂರಪ್ಪ ವಡ್ಡರ, ಮಹಾಂತೇಶ ತಳವಾರ, ಶಂಕ್ರಪ್ಪ ಅವರಾದಿ, ಸಂಜು ಜಗದಾಳೆ, ಶಹಾಜಿ ಪವಾರ, ಸಾತನ್ನವರ, ಹುಚ್ಚಪ್ಪ ಬೆಳ್ಳಿಗುಂಡಿ, ರಾಘು ದಾಯಪುಲೆ, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು.