ಸಾರಾಂಶ
ಇನಾಂ ದತ್ತಾತ್ರೇಯ ಪೀಠದ ಮಾರ್ಗದಲ್ಲಿರುವ ಹೋಂ ಸ್ಟೇ, ರೇಸಾರ್ಟ್‌ಗಳಿಗೆ ಭೇಟಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಸಹಾಯಕ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ , ಗ್ರಾಮ ಪಂಚಾಯಿತಿ ಅಧಿಕಾರಿಗಳ ತಂಡ ಇನಾಂ ದತ್ತಪೀಠ ಭಾಗದ ಹೋಟೆಲ್ ರೆಸಾರ್ಟ್ ಹಾಗೂ ಹೋಂಸ್ಟೇಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.ಅತ್ತಿಗುಂಡಿಯ ಹೊಯ್ಸಳ ಹೋಂಸ್ಟೇಗೆ ಭೇಟಿ ವೇಳೆ ಹೋಂಸ್ಟೇ ಅನಧಿಕೃತವಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಪರಿಶೀಲಿಸಿ ಹೋಂಸ್ಟೇಗೆ ಬೀಗ ಹಾಕಲಾಯಿತು. ಹಾಲಿಡೇ ಹೋಂ ರೆಸಾರ್ಟ್ ನಲ್ಲಿ ಪ್ರವಾಸಿಗರಿಗೆ ಸುರಕ್ಷತೆ ಹೊಂದಿಲ್ಲದೇ ಟೆಂಟ್ ಗಳನ್ನು ನಿರ್ಮಿಸಿರುವ ಕಾರಣ ಸದರಿ ಟೆಂಟ್ ಗಳನ್ನು ತೆರವುಗೊಳಿಸಿ ಸೂಕ್ತ ಕಟ್ಟಡ ನಿರ್ಮಿಸಿ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪಡೆದು ನಡೆಸಲು ಮಾಲೀಕರಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚಿಸಿದರು.ಸ್ಟ್ಯಾನ್ಲಿ ಹೋಂ ಸ್ಟೇ ಹಾಗೂ ಗ್ರೀನ್ ವುಡ್ ರೆಸಾರ್ಟ್ ಗಳಿಗೆ ಭೇಟಿ ನೀಡಿ ಬಿಲ್ ಬುಕ್ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಹಾಗೂ ಕಸವನ್ನು ಸಮರ್ಪಕ ವಿಲೇವಾರಿ ಮಾಡುವ ಸಂಬಂಧ ಮಾಲೀಕರಿಗೆ ಸೂಚಿಸಲಾಗಿದೆ. ರಸ್ತೆಗಳಲ್ಲಿ ಇಲಾಖೆಯಿಂದ ಅನುಮತಿ ಪಡೆಯದೇ ರೆಸಾರ್ಟ್ ಹೋಂಸ್ಟೇಗಳಿಗೆ ಸಂಬಂಧಿಸಿದ ಅನಧೀಕೃತವಾಗಿ ಅಳವಡಿಸಿರುವ ನಾಮಫಲಕಗಳನ್ನು ಸ್ಥಳದಲ್ಲಿಯೇ ಅಧಿಕಾರಿಗಳ ತಂಡ ತೆರವುಗೊಳಿಸಿತು. ಗಿರಿಭಾಗದ ಇತರೆ ಅನಧಿಕೃತ ನಾಮಫಲಕಗಳನ್ನು ತುರ್ತಾಗಿ ತೆರವುಗೊಳಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.ಗಿರಿ ಭಾಗದ ಕೆಲವು ಅಂಗಡಿಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಪ್ಲಾಸ್ಟಿಕ್ ವಸ್ತುಗಳು ಕಂಡುಬಂದಿದ್ದು ಅದನ್ನು ಇಲಾಖೆ ವಶಕ್ಕೆ ಪಡೆದು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಅಂಗಡಿಗಳಲ್ಲಿ ಉಪಯೋಗಿಸದಂತೆ ಎಚ್ಚರಿಸಿದರು. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಅನಧೀಕೃತವಾಗಿ ನಡೆಸುತ್ತಿರುವ ಹೋಂಸ್ಟೇಗಳು ಹಾಗೂ ರೆಸಾರ್ಟ್‌ಗಳಿಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲಿಸುವ ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಸಂಬಂಧವಾಗಿ ಅನುಮೋದನೆ ಪಡೆಯದೇ ಇರುವಂತಹ ಹೋಟೆಲ್ /ಹೋಂಸ್ಟೇ/ರೆಸಾರ್ಟ್ ಗಳು ಪ್ರವಾಸೋದ್ಯಮ ಇಲಾಖೆಯಿಂದ ಹಾಗೂ ಸಕ್ಷಮ ಪ್ರಾಧಿಕಾರಗಳಿಂದಲೂ ಅನುಮೋದನೆ ಪಡೆದು ನಡೆಸಲು ತಿಳಿಸಲಾಯಿತು.ಅಲ್ಲದೇ ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪಡೆದಿರುವಂತಹ ರೆಸಾರ್ಟ್ ಮತ್ತು ಹೋಂಸ್ಟೇ ಗಳು ಇಲಾಖೆ ನಿಯಮಗಳನ್ನು ಅನುಸರಿಸದೇ ಇರುವುದು ಕಂಡುಬಂದಲ್ಲಿ ಅಂತಹ ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ಸಹ ರದ್ದುಪಡಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಲೋಹಿತ್ ಇದ್ದರು. 21 ಕೆಸಿಕೆಎಂ 1ಇನಾಂ ದತ್ತಪೀಠ ಭಾಗದ ಹೋಟೆಲ್ ರೆಸಾರ್ಟ್ ಹಾಗೂ ಹೋಂಸ್ಟೇಗಳಿಗೆ ಹಿರಿಯ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.