ಸಾರಾಂಶ
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾನಮತ್ತರಾಗಿ ವೇಗವಾಗಿ ಕಾರು ಚಾಲನೆ ಮಾಡಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಚಾಲಕ ಮತ್ತು ಐವರು ಪ್ರಯಾಣಿಕರಿಗೆ ಪಟ್ಟಣದ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಲಯ 69 ಸಾವಿರ ರು. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಕನ್ನಡಪ್ರಭ ವಾರ್ತೆ ಮದ್ದೂರುಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾನಮತ್ತರಾಗಿ ವೇಗವಾಗಿ ಕಾರು ಚಾಲನೆ ಮಾಡಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಚಾಲಕ ಮತ್ತು ಐವರು ಪ್ರಯಾಣಿಕರಿಗೆ ಪಟ್ಟಣದ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಲಯ 69 ಸಾವಿರ ರು. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ವರದಪುರ ಗ್ರಾಮದ ಶಾಸಕರ ಬೆಂಬಲಿಗರೆನ್ನಲಾದ ಕಾರ್ ಚಾಲಕ ಧನಂಜಯ, ಕಾರಿನಲ್ಲಿದ್ದ ವಿ.ಎನ್. ಉಮೇಶ್, ನಾರಾಯಣಸ್ವಾಮಿ, ರಾಜೇಶ್, ಎಚ್.ಎಸ್. ಗಿರೀಶ್ ಹಾಗೂ ನವೀನ್ ಅವರಿಗೆ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ. ಪ್ರಿಯಾಂಕ ಅವರು ತಲಾ 10,000 ಹಾಗೂ ಅತಿ ವೇಗ ದಿಂದ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಕರ್ತವ್ಯ ನಿರತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ 9 ಸಾವಿರ ದಂಡ ಸೇರಿದಂತೆ ಒಟ್ಟು 69 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.ಕಾರುಚಾಲಕ ಸೇರಿದಂತೆ 5 ಮಂದಿ ಪ್ರಯಾಣಿಕರು ಬುಧವಾರ ಸಂಜೆ ತಮ್ಮ ಎರರ್ಟಿಗಾ ಕಾರಿನಲ್ಲಿ ಪಾನಮತ್ತರಾಗಿ ಅತಿ ವೇಗ ಮತ್ತು ಅಡ್ಡಾದಿಡ್ಡಿಯಾಗಿ ಚಲನೆ ಮಾಡಿಕೊಂಡು ಮಾಡಿಕೊಂಡು ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು.ಈ ವೇಳೆ ಹೆದ್ದಾರಿಯಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಠಾಣೆಯ ಮಹಿಳಾ ಪಿಎಸ್ಐ ಸರೋಜಾ ಬಾಯಿ ಹಾಗೂ ಸಿಬ್ಬಂದಿ ಕಾರನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಕಾರಿನಲ್ಲಿದ್ದವರು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇದರಿಂದ ಪೊಲೀಸರು ಮತ್ತು ಕಾರಿನಲ್ಲಿ ಇದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ.
ನಂತರ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪಿಎಸ್ಐ ಜ.ಇ .ಮಹೇಶ ಹೆಚ್ಚಿನ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದ ಎಲ್ಲರನ್ನು ತಪಾಸಣೆಗೆ ಒಳಪಡಿಸಿದಾಗ ಪಾನಮತ್ತರಾಗಿರುವುದು ದೃಢಪಟ್ಟಿದೆ.ನಂತರ ಕಾರನ್ನು ವಶಕ್ಕೆ ತೆಗೆದುಕೊಂಡ ಸಂಚಾರಿ ಠಾಣೆ ಪೊಲೀಸರು ಚಾಲಕ ಹಾಗೂ ಐವರ ವಿರುದ್ಧ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಕಲಂ 185. 188. 184. 1 79 ಹಾಗೂ 177ರ ಅನ್ವಯ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಸಿದ್ದರು. ಅಂತಿಮವಾಗಿ ಪ್ರಕರಣ ಸಂಬಂಧಪಟ್ಟ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ .ಪ್ರಿಯಾಂಕ ದಂಡ ವಿಧಿಸಿ ತೀರ್ಪು ನೀಡಿದರು.