ಹಿರಿಯ ರಂಗಕರ್ಮಿ, ನಟ ವಿ.ಜಿ. ಪಾಲ್‌ ಇನ್ನಿಲ್ಲ

| Published : Mar 22 2024, 01:04 AM IST

ಸಾರಾಂಶ

ತುಳು ರಂಗಭೂಮಿಯಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದ ವಿಜಿ ಪಾಲ್‌, ಹತ್ತಾರು ನಾಟಕಗಳಲ್ಲಿ ಹಾಗೂ ತುಳು ಮತ್ತು ಕನ್ನಡ ಭಾಷೆಯ ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ‘ಕಲ್ಲಿಗದ ಕುರುಕ್ಷೇತ್ರ’ ತುಳು ನಾಟಕದ ಮೂಲಕ 1961ರಲ್ಲಿ ರಂಗಪ್ರವೇಶ ಮಾಡಿದ ಅವರು ಹಾಸ್ಯ ಪಾತ್ರಕ್ಕೊಂದು ಮಾದರಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿರಿಯ ರಂಗಕರ್ಮಿ, ನಟ, ನಿರ್ದೇಶಕ, ಸಂಘಟಕ, ವಿ.ಜಿ. ಪಾಲ್ ಎಂದೇ ಖ್ಯಾತರಾಗಿದ್ದ ವೇಣುಗೋಪಾಲ ಟಿ. ಕೋಟ್ಯಾನ್ (82) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ.

ತುಳು ರಂಗಭೂಮಿಯಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದ ವಿಜಿ ಪಾಲ್‌, ಹತ್ತಾರು ನಾಟಕಗಳಲ್ಲಿ ಹಾಗೂ ತುಳು ಮತ್ತು ಕನ್ನಡ ಭಾಷೆಯ ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ‘ಕಲ್ಲಿಗದ ಕುರುಕ್ಷೇತ್ರ’ ತುಳು ನಾಟಕದ ಮೂಲಕ 1961ರಲ್ಲಿ ರಂಗಪ್ರವೇಶ ಮಾಡಿದ ಅವರು ಹಾಸ್ಯ ಪಾತ್ರಕ್ಕೊಂದು ಮಾದರಿಯಾಗಿದ್ದರು. ಚಲನಚಿತ್ರಗಳು, ಕಿರುತೆರೆ, ಧ್ವನಿ ಸುರುಳಿಗಳಿಗೆ ಕಂಠದಾನ ಮಾಡಿದ್ದರು. ತುಳು ನಾಟಕಗಳನ್ನು ಪಥಮ ಬಾರಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿದ್ದರು.ಕನ್ನಡದಲ್ಲೂ ನಟನೆ: ಕನ್ನಡದ ಜೀವನ್ಮುಖಿ, ಮಹಾನದಿ ಸಿನಿಮಾಗಳಲ್ಲೂ ವಿಜಿ ಪಾಲ್‌ ನಟಿಸಿದ್ದಾರೆ. ಬಯ್ಯಮಲ್ಲಿಗೆ, ಭಾಗ್ಯವಂತೆದಿ, ಸತ್ಯ ಓಲುಂಡು, ಬಂಗಾರ್ ಪಟ್ಲೇರ್, ಮಾರಿಬಲೆ, ತುಡರ್ ಅವರು ನಟಿಸಿದ ಪ್ರಮುಖ ತುಳು ಸಿನೆಮಾಗಳು. ತನಿಯಪ್ಪ ಕೋಟ್ಯಾನ್- ಸೀತಮ್ಮ ದಂಪತಿಯ ಮಗನಾಗಿ ಜನಿಸಿದ್ದ ವಿಜಿ ಪಾಲ್‌ ಸುಶೀಲಾ ಅವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.ವಿ.ಜಿ. ಪಾಲ್ ಅಂತ್ಯಕ್ರಿಯೆ ಗುರುವಾರ ಬೋಳೂರಿನಲ್ಲಿ ನಡೆಯಿತು. ಇದಕ್ಕೂ ಮೊದಲು ಮೃತದೇಹವನ್ನು ಮಠದಕಣಿಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಶಾಸಕ ಡಿ. ವೇದವ್ಯಾಸ ಕಾಮತ್, ಹಿರಿಯ ಸಾಹಿತಿ ಪ್ರೊ.ಬಿ.ಎ. ವಿವೇಕ ರೈ, ವಿದ್ವಾಂಸ ಪ್ರಭಾಕರ ಜೋಶಿ, ತುಳು ರಂಗಭೂಮಿಯ ಹಿರಿಯ ಕಲಾವಿದರು, ಮೊಗವೀರ ಸಮಾಜದ ಬಂಧುಗಳು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಅಂತಿಮ ನಮನ ಸಲ್ಲಿಸಿದರು.