ಸಂಭ್ರಮದ ಬಕ್ರೀದ್ ಹಬ್ಬಕ್ಕೆ ಸಜ್ಜಾದ ಹುಬ್ಬಳ್ಳಿ

| Published : Jun 17 2024, 01:40 AM IST

ಸಂಭ್ರಮದ ಬಕ್ರೀದ್ ಹಬ್ಬಕ್ಕೆ ಸಜ್ಜಾದ ಹುಬ್ಬಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಸಲ್ಮಾನ್‌ ಬಾಂಧವರು ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ, ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ (ಈದ್- ಅಲ್-ಅಧಾ)ನ್ನು ಸೋಮವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲು ಹುಬ್ಬಳ್ಳಿ ನಗರ ಸಜ್ಜಾಗಿದ್ದಾರೆ.

ಹುಬ್ಬಳ್ಳಿ: ಮುಸಲ್ಮಾನ್‌ ಬಾಂಧವರು ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ, ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ (ಈದ್- ಅಲ್-ಅಧಾ)ನ್ನು ಸೋಮವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲು ಸಜ್ಜಾಗಿದ್ದಾರೆ.

ಶಾಂತಿ ಮತ್ತು ಸುವ್ಯವಸ್ಥೆಯಿಂದ ಹಬ್ಬ ಆಚರಣೆಗೆ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಈದ್ಗಾ ಮೈದಾನ, ಮಸೀದಿಗಳ ಸುತ್ತಮುತ್ತ ಹಾಗೂ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಕಳೆದ 2-3 ದಿನಗಳಿಂದ ಇಲ್ಲಿನ ಶಾಹ ಬಜಾರ್, ಕೊಪ್ಪೀಕರ್ ರಸ್ತೆ, ದುರ್ಗದ ಬೈಲ್, ಜನತಾ ಬಜಾರ್ ಸೇರಿದಂತೆ ಪ್ರಮುಖ ಮಾಲ್‌ಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿತು.

ವರುಣನ ಕಿರಿಕಿರಿ: ಹಬ್ಬದ ಮುನ್ನಾದಿನವಾದ ಭಾನುವಾರ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿತು. ಆದರೆ, ಬೆಳಗ್ಗೆಯಿಂದ ಸಂಜೆಯ ವರೆಗೂ ವರುಣನ ಸಿಂಚನದಿಂದಾಗಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. ಬೆಳಗ್ಗೆಯಿಂದ ಸಂಜೆಯ ವರೆಗೂ ಮಳೆಯ ಚೆಲ್ಲಾಟದಿಂದಾಗಿ ವ್ಯಾಪಾರಸ್ಥರು ಹೈರಾಣಾಗಿ ಹೋದರು. ಸುರಿಯುವ ಮಳೆಯಲ್ಲಿಯೇ ಜನತೆ ವ್ಯಾಪಾರ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.

ಸೋಮವಾರ ಬೆಳಗ್ಗೆ ಕಾರವಾರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಹಾಗೂ ಕಿತ್ತೂರು ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಮುಸಲ್ಮಾನ್‌ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಹಿನ್ನೆಲೆಯಲ್ಲಿ ಅಂಜುಮನ್‌ ಇಸ್ಲಾಂ ಸಂಸ್ಥೆಯ ವತಿಯಿಂದ ಎರಡೂ ಈದ್ಗಾ ಮೈದಾನವನ್ನು ಭಾನುವಾರ ಬೆಳಗ್ಗೆ ಸ್ವಚ್ಛಗೊಳಿಸಿದರು. ಪಾಲಿಕೆಯಿಂದಲೂ ಈದ್ಗಾ ಆವರಣದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಕುರಿಗಳ ಭರ್ಜರಿ ಮಾರಾಟ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಗರದ ಹಲವು ಕಡೆಗಳಲ್ಲಿ ಕಳೆದ ಒಂದು ವಾರದಿಂದ ಕೋಳಿ, ಕುರಿಗಳ ಭರ್ಜರಿ ವ್ಯಾಪಾರ ನಡೆಯಿತು. ಹುಬ್ಬಳ್ಳಿ ಸೇರಿದಂತೆ ನವಲಗುಂದ, ನರಗುಂದ, ಗದಗ, ಅಣ್ಣಿಗೇರಿ, ಕಲಘಟಗಿ ತಾಲೂಕುಗಳಿಂದ ಹಲವು ಕುರಿಗಾರರು ನೂರಾರು ಕುರಿಗಳನ್ನು ನಗರಕ್ಕೆ ತಂದು ಮಾರಾಟ ಮಾಡಿದರು. ಸುಮಾರ ₹12 ಸಾವಿರದಿಂದ ಹಿಡಿದು ₹70 ಸಾವಿರದ ವರೆಗೂ ಕುರಿಗಳು ಮಾರಾಟವಾದವು.