ಆಸ್ತಿ ಪರಭಾರೆ ಪ್ರಕರಣದಲ್ಲಿ ಹಣ ದುರುಪಯೋಗ

| Published : Jun 17 2024, 01:40 AM IST

ಆಸ್ತಿ ಪರಭಾರೆ ಪ್ರಕರಣದಲ್ಲಿ ಹಣ ದುರುಪಯೋಗ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಪತ್ರಕರ್ತರ ಭವನದಲ್ಲಿ ಅಯ್ಯನಪುರ ಶಿವಕುಮಾರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ತಾಲೂಕು ಆದಿಕರ್ನಾಟಕ ಅಭಿವೃದ್ದಿ ಸಂಘದ ಆಸ್ತಿ ಅಕ್ರಮ ಪರಭಾರೆ ಹಾಗೂ ಲೆಕ್ಕಪತ್ರಗಳಲ್ಲಿ ಲೋಪ ಮತ್ತು ಹಣ ದುರುಪಯೋಗ ಪ್ರಕರಣದಲ್ಲಿ ಉಳಿದ ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಚಾಮರಾಜನಗರ ತಾಲೂಕು ಆದಿಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿಯ ಮುಖಂಡ ಅಯ್ಯನಪುರ ಶಿವಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಆಸ್ತಿ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಗಳನ್ನು ಶೀಘ್ರದಲ್ಲಿಯೇ ಬಂಧಿಸಬೇಕು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಪ್ರಕರಣ ದಾಖಲು ಮಾಡಬೇಕು. ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣವನ್ನು ಇವರ ವಿರುದ್ಧ ದಾಖಲು ಮಾಡಬೇಕು ಎಂದು ಆಗ್ರಹಿಸಿದರು.

ಇನ್ನುಳಿದ ಆರೋಪಿಗಳಾದ ಸರಗೂರು ಇಶಾಕ್ ಷರೀಪ್, ಶ್ರೀರಂಗಪಟ್ಟಣದ ಶಿವಣ್ಣ, ಚಿಕ್ಕಂಕಹಳ್ಳಿಯ ರಮೇಶ್ ಅವರನ್ನು ಬಂಧಿಸಬೇಕು. ಡಿವೈಎಸ್ಪಿ ಅವರು ಈ ಪ್ರಕರಣದಲ್ಲಿ ವಿಳಂಬ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿಂದಲು ಅವರ ಬಂಧನವಾಗಿಲ್ಲ. ಸಮಿತಿ ವರದಿಯಂತೆ ಅಕ್ರಮದಲ್ಲಿ ಭಾಗಿಯಾಗಿರುವ ಆರ್‌ಐ ಮತ್ತು ವಿಎ ವಿರುದ್ಧ ಶಿಸ್ತು ಕ್ರಮವಾಗಬೇಕು. ಇಲ್ಲದಿದ್ದರೆ ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ. ಜಿಲ್ಲಾಡಳಿತದ ಭವನದ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದರು.

ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದ ಸಮಿತಿಯು ಸಮರ್ಪಕ ವರದಿಯನ್ನು ನೀಡಿದ್ದು, ಸಂಘದ ಆಸ್ತಿ ಅಕ್ರಮವಾಗಿ ಪರಭಾರೆಯಾಗಿರುವುದು ಮೇಲ್ನೂಟಕ್ಕೆ ಸಾಬೀತಾಗಿದೆ. ಅಲ್ಲದೇ ಅಧ್ಯಕ್ಷರು ಮತ್ತು ಆಡಳಿತ ಮಂಡಲಿಯು ಯಾವುದೇ ರೀತಿಯ ಲೆಕ್ಕಪತ್ರಗಳನ್ನು ನೀಡದೇ ಕಾಲಾವಕಾಶವನ್ನು ಪಡೆದುಕೊಂಡು ವಿಳಂಬ ಮಾಡಿದೆ. ಇಂಥ ಸಂಘವನ್ನು ಸೂಪರ್‌ ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಸಮಿತಿ ಹಾಗೂ ಸಹಕಾರ ಸಂಘಗಳ ನಿಬಂಧಕರು ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಂಪೂರ್ಣ ವರದಿಯನ್ನು ನೀಡಿದೆ. ನ್ಯಾಯಾಲಯದಲ್ಲಿಯ ಸಹ ನಮ್ಮ ಪರವಾದ ತೀರ್ಪು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದು ಜಾರಿಯಾಗದಂತೆ ಹಾಲಿ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಕಾರ್ಯದರ್ಶಿ ರಾಜಗೋಪಾಲ್ ಅವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಒಂದು ಕಡೆ ಸರಿಯಾಗಿ ಲೆಕ್ಕಪತ್ರಗಳನ್ನು ನೀಡದೆ. ಅಕ್ರಮದಲ್ಲಿ ಭಾಗಿಯಾಗಿರುವ ಆಡಳಿತ ಮಂಡಲಿಯೇ ಸಭೆ ಮಾಡಿ, ನ್ಯಾಯಾಲಯದಲ್ಲಿ ದಾವೆ ಹಾಕಿ ಸಂಘದ ಆಡಳಿತ ಮಂಡಳಿಯ ಪರವಾಗಿ ಹೋರಾಟ ಮಾಡಲು ನಿರ್ಣಯ ಮಾಡಿ, ಕಾರ್ಯದರ್ಶಿಗೆ ಜವಾಬ್ದಾರಿ ನೀಡಿರುವುದು ಸರಿಯಾದ ಕ್ರಮವಲ್ಲ. ಇದರ ಹಿಂದಿನ ಎಲ್ಲಾ ನಡಾವಳಿಗಳಲ್ಲಿ ಎಸ್.ಮಹದೇವಯ್ಯ ಅವರ ಕೈವಾಡ ಇದೆ. ಅವರು ಸರಿಯಾಗಿ ಎರಡು ಕಡೆಯವರಿಗೆ ಮಾಹಿತಿ ರವಾನೆ ಮಾಡಿ, ಸಂಧಾನ ಮಾಡಿದ್ದರೆ, ಇಷ್ಟೊಂದು ದೊಡ್ಡ ಮಟ್ಟಕ್ಕೆ ಪ್ರಕರಣ ಹೋಗುತ್ತಿರಲಿಲ್ಲ. ಅಧ್ಯಕ್ಷರು ಮತ್ತು ನಿರ್ದೇಶಕರನ್ನು ದಾರಿ ತಪ್ಪಿಸುತ್ತಿರುವವರೇ ಎಸ್. ಮಹದೇವಯ್ಯ ಎಂದು ಅಯ್ಯನಪುರ ಶಿವಕುಮಾರ್, ಆರ್. ಮಹದೇವ್ ಕಿಡಿ ಕಾರಿದರು.

ಸಂಘದ ನಿರ್ದೇಶಕ, ಜಿಪಂ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಪ್ರಕರಣದಲ್ಲಿ ಮುಖ್ಯವಾಗಿದ್ದು ಇಡೀ ಪ್ರಕರಣದಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಸರ್ಕಾರ ಆದೇಶದ ವಿರುದ್ಧ ನ್ಯಾಯಾಲಯದ ತಡೆಯಾಜ್ಞೆ ತರುವ ಮೂಲಕ ಸಮುದಾಯವನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದು ದೂರಿದರು.ಸಂಘದ ನಿರ್ದೇಶಕ ಎಸ್.ಮಹದೇವಯ್ಯ, ಕಾರ್ಯದರ್ಶಿ ರಾಜಗೋಪಾಲ್ ಮುಖಾಂತರ 7 ಲಕ್ಷ ರು. ತೆಗೆದುಕೊಂಡು ಇನ್ನು ವಾಪಸ್ ಮಾಡಿಲ್ಲ ಎಂದು ಕಾರ್ಯದರ್ಶಿ ಆರೋಪ ಮಾಡಿದ್ದಾರೆ. ಇವರು ಆರ್ಥಿಕವಾಗಿ ಬಲಿಷ್ಟವಾಗಲು ಸಂಘದ ಹಣವನ್ನು ತಮ್ಮ ಇಷ್ಟಾನುಸಾರ ಬಳಸಿಕೊಂಡಿರುವ ವ್ಯಕ್ತಿ ನಮ್ಮನ್ನು ದೊಡ್ಡ ವ್ಯಕ್ತಿಗಳು ಎಂದು ಹೀಯಾಳಿಸಿದ್ದಾರೆ. ಸಂಘದ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಿರುವ ಇವರು ದೊಡ್ಡವರು ನಾವಲ್ಲ? ಎಸ್.ಮಹದೇವಯ್ಯ ಅವರಿಗೆ ನೈತಿಕತೆ ಇದ್ದರೆ ನಮ್ಮ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಿ, ಸಮಾಜ ಆಸ್ತಿ ಹಾಗು ಹಣ ಪೋಲಾಗುವುದನ್ನು ತಪ್ಪಿಸಲಿ ಎಂದು ಸವಾಲು ಹಾಕಿದರು. ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಇವರಿಬ್ಬರು ಸೇರಿಕೊಂಡು ಹರಿಜನ ಹಾಸ್ಟೆಲ್ ಜಾಗವನ್ನು ಜೈ ಭೀಮ್ ಸೌಹಾರ್ದ ಸಹಕಾರ ನಿಯಮಿತಕ್ಕೆ ಅಕ್ರಮವಾಗಿ 29 ವರ್ಷ 11 ತಿಂಗಳಿಗೆ ಭೋಗ್ಯ ಮಾಡಿದ್ದಾರೆ. ವಾಸ್ತವವಾಗಿ ಈ ಜಾಗ ಹರಿಜನ ಹಾಸ್ಟೆಲ್‌ಗೆ ಸೇರಿದ್ದಾಗಿದ್ದು, ಸಂಘಕ್ಕೂ ಈ ಜಾಗಕ್ಕು ಸಂಬಂಧವಿಲ್ಲ. ಅಲ್ಲದೇ ಇವರಿಬ್ಬರು ಸೇರಿ ಆ ಸಹಕಾರ ಸಂಘದ ಅಧ್ಯಕ್ಷರು- ಕಾರ್ಯದರ್ಶಿಗೆ ರಿಜಿಸ್ಟಾರ್ ಭೋಗ್ಯ ಮಾಡಬೇಕಾಗಿತ್ತು. ಆದರೆ, ಅಲ್ಲಿನ ಸಹಕಾರ ಸಂಘ ಅಧ್ಯಕ್ಷ ಮಲ್ಲಿಕ್ ಹಾಗೂ ಉಪಾಧ್ಯಕ್ಷ ಉಮೇಶ್ ಕುದರ್ ಆಗಿದ್ದಾರೆ. ಈ ಕಾರಣಕ್ಕೆ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಈ ಆಸ್ತಿಯು ಸಹ ತಮ್ಮ ಕುಟುಂಬಕ್ಕೆ ಬರಲಿ ಎಂಬ ಕಾರಣಕ್ಕೆ ಕಾರ್ಯದರ್ಶಿಯನ್ನು ಬಿಟ್ಟು ತನ್ನ ಮಗ ಉಪಾಧ್ಯಕ್ಷ ಉಮೇಶ್ ಕುದರ್‌ಗೆ ಭೋಗ್ಯ ಮಾಡಿರುವುದು ಸ್ಪಷ್ಪವಾಗಿದೆ. ನೋಂದಾವಣಿ ಅಧಿಕಾರಿಗಳು, ಪತ್ರ ಬರಹಗಾರರು, ಸಾಕ್ಷಿದಾರರು ಸಹ ಶಾಮೀಲಾಗಿದ್ದು, ಬರೆಸಿಕೊಂಡಿರುವ ಅಧ್ಯಕ್ಷ, ಉಪಾದ್ಯಕ್ಷರ ಮೇಲೆ ಕ್ರಮ ವಾಗಬೇಕು ಎಂದರು.

ಈ ಆಸ್ತಿಯನ್ನು 30 ವರ್ಷಗಳಿಗೆ ಲೀಜ್ ನೀಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಯಾವುದೇ ಸಹಕಾರ ಸಂಘಗಳ ಬೈಲ್ ಪ್ರಕಾರ ಸರ್ವ ಸದಸ್ಯರ ಸಭೆಗಳಲ್ಲಿ ತೀರ್ಮಾನವಾದ ಬಳಿಕ ಆಡಳಿತ ಮಂಡಲಿ ಕ್ರಮವಹಿಸುತ್ತದೆ. ಅಲ್ಲದೇ 30 ವರ್ಷಕ್ಕೆ ಲೀಸ್ ನೀಡುವ ಯಾವುದೇ ಅಧಿಕಾರ ಸಹಕಾರಿ ಬೈಲ್‌ದಲ್ಲಿ ಇಲ್ಲ. ಹೀಗಾಗಿ ನೋಂದಾವಣಿಯಾಗಿರುವುದು ಅಕ್ರಮವಾಗಿದ್ದು, ಇದರ ವಿರುದ್ದ ಸಹ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಮತ್ತೋರ್ವ ಮುಖಂಡ ನಲ್ಲೂರು ಸೋಮೇಶ್ವರ್ ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮಿತಿಯ ಚನ್ನಂಜಯ್ಯ, ಸಿದ್ದಯ್ಯನ ಗೋವಿಂದರಾಜು ಇತರರರು ಇದ್ದರು.