ಹುಬ್ಬಳ್ಳಿ ಜನ್ಮಭೂಮಿ, ಬೆಳಗಾವಿ ಕರ್ಮಭೂಮಿ: ಶೆಟ್ಟರ್‌

| Published : Mar 26 2024, 01:19 AM IST / Updated: Mar 27 2024, 02:50 PM IST

ಸಾರಾಂಶ

ಬೆಳಗಾವಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸೋಮವಾರ ನಗರದಲ್ಲಿ ಟೆಂಪಲ್‌ ರನ್‌ ಮಾಡಿದರು.

ಹುಬ್ಬಳ್ಳಿ:

ಬೆಳಗಾವಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸೋಮವಾರ ನಗರದಲ್ಲಿ ಟೆಂಪಲ್‌ ರನ್‌ ಮಾಡಿದರು. ಇಲ್ಲಿನ ಸಿದ್ಧಾರೂಢ ಮಠ ಸೇರಿದಂತೆ ಹಲವು ದೇವಸ್ಥಾನಗಳಿಗೆ, ಪಕ್ಷದ ಕಚೇರಿಗೆ ಭೇಟಿ ನೀಡಿದರು. ಇದೇ ವೇಳೆ ಹುಬ್ಬಳ್ಳಿ ಜನ್ಮಭೂಮಿಯಾದರೆ, ಬೆಳಗಾವಿ ಕರ್ಮಭೂಮಿಯಾಗಲಿದೆ. ಹೋಳಿ ಹುಣ್ಣಿಮೆ ಮುಗಿಸಿಕೊಂಡು ಬುಧವಾರ ಬೆಳಗಾವಿಗೆ ತೆರಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸೋಮವಾರ ಇಲ್ಲಿನ ಸಿದ್ಧಾರೂಢ ಮಠಕ್ಕೆ ತೆರಳಿದ ಶೆಟ್ಟರ್‌, ಅಲ್ಲಿ ಉಭಯ ಶ್ರೀಗಳ ದರ್ಶನಾಶೀರ್ವಾದ ಪಡೆದರು. ಅಲ್ಲಿಂದ ಪಕ್ಷದ ಕಚೇರಿಗೆ ತೆರಳಿದರು. ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವರು ಶೆಟ್ಟರ್‌ ಅವರನ್ನು ಅಭಿನಂದಿಸಿದರು. ಅಲ್ಲಿಂದ ಆರ್‌ಎಸ್‌ಎಸ್‌ ಕಚೇರಿಗೆ ತೆರಳಿ ಅಲ್ಲಿನ ಹಿರಿಯರ ಜತೆಗೆ ಕೆಲಕಾಲ ಚರ್ಚೆ ನಡೆಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ನನ್ನ ಜನ್ಮ ಭೂಮಿಯಾದರೆ, ಬೆಳಗಾವಿ ನನ್ನ ಕರ್ಮಭೂಮಿಯಾಗಲಿದೆ. ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತೇನೆ ಎಂದರು.

ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡಬೇಕು ಎನ್ನುವುದು ದೇಶದ ಎಲ್ಲ ಜನರ ಇಚ್ಛೆ. ಬೆಳಗಾವಿಯ ಎಲ್ಲ ನಾಯಕರ ಜತೆ ನಾನು ಈಗಾಗಲೇ ಮಾತನಾಡಿದ್ದೇನೆ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸೋಣ ಎಂದು ಸಲಹೆ ನೀಡಿದ್ದಾರೆ. ಬುಧವಾರದಿಂದಲೇ (ಮಾ.27) ಬೆಳಗಾವಿಗೆ ತೆರಳಿ ಪ್ರಚಾರ ಕಾರ್ಯ ಪ್ರಾರಂಭಿಸುತ್ತೇನೆ ಎಂದರು.

ಗೆಲ್ಲುವ ವಿಶ್ವಾಸ:

ನಾನು ಈ ಹಿಂದೆ ಮುಖ್ಯಮಂತ್ರಿ ಹಾಗೂ ಸಚಿವನಾಗಿದ್ದ ವೇಳೆ ನಾನು ಬೆಳಗಾವಿ ಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಯುವಕ ಅನ್ನುವ ಕಾರಣಕ್ಕೆ ನಾನು ನಿರ್ಲಕ್ಷ್ಯ ಮಾಡುವುದಿಲ್ಲ. ಈ ಚುನಾವಣೆಯಲ್ಲಿ ಜಾತಿ ರಾಜಕಾರಣ ಕೆಲಸ ಮಾಡುವುದಿಲ್ಲ. ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾನು ಗೆದ್ದು ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಟಿಕೆಟ್ ದೊರೆತಿರುವುದಕ್ಕೆ ಮಂಗಳಾ ಅಂಗಡಿ ಸೇರಿದಂತೆ ಅವರ ಕುಟುಂಬಸ್ಥರು ತುಂಬಾ ಸಂತಸ ವ್ಯಕ್ತಪಡಿಸಿದ್ದು, ಅವರ ಕುಟುಂಬ ನನ್ನ ಪರ ಪ್ರಚಾರ ಮಾಡಲಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರು ಸಹ ನನಗೆ ಬೆಂಬಲ ನೀಡುತ್ತಾರೆ. ಅಲ್ಲಿನ ಎಲ್ಲ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದರು.

ಸಂತಸ ತಂದ ರೆಡ್ಡಿ ಸೇರ್ಪಡೆ:

ಶಾಸಕ ಜನಾರ್ದನ ರೆಡ್ಡಿ ಈ ಹಿಂದೆ ಬಿಜೆಪಿ ಸಂಘಟನೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರು ಬಿಜೆಪಿಗೆ ಅಸ್ತಿತ್ವವೇ ಇಲ್ಲದಿದ್ದಾಗ ಪಕ್ಷ ಸಂಘಟನೆ ಮಾಡಿದ್ದಾರೆ. ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಸಂತಸದ ಸಂಗತಿ. ಜನಾರ್ದನ ರೆಡ್ಡಿ ಅವರ ಹಾಗೆ ಸಾಕಷ್ಟು ಜನರು ಸದ್ಯದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದರು.ಈ ವೇಳೆ ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಶೆಟ್ಟರ್‌ ಅವರ ಪತ್ನಿ ಶಿಲ್ಪಾ ಶೆಟ್ಟರ್‌, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕರ ಸೇರಿದಂತೆ ಹಲವರಿದ್ದರು.