ಉತ್ಸವಗಳ ನೆಪದಲ್ಲಿ ನದಿ ನೀರು ಕಲುಷಿತ: ಯೋಗೇಂದ್ರ ಆತಂಕ

| Published : Mar 26 2024, 01:19 AM IST

ಸಾರಾಂಶ

ಭಾರತೀಯ ಪರಂಪರೆಯಲ್ಲಿ ಜನರು ನೈಸರ್ಗಿಕ ಸಂಪನ್ಮೂಲವನ್ನು ಉಳಿಸುವ ಉದ್ದೇಶದಿಂದ ನದಿ, ಬೆಟ್ಟ, ಗುಡ್ಡ ಇತ್ಯಾದಿಗಳನ್ನು ಆರಾಧಿಸುತ್ತಿದ್ದರು. ಇತ್ತೀಚೆಗೆ ಕುಂಭಮೇಳ, ಗಣೇಶ ಹಬ್ಬಗಳಲ್ಲಿ ಪೂಜಾ ವಸ್ತುಗಳು ಮತ್ತು ಗಣೇಶ ಮೂರ್ತಿಗಳನ್ನು ನದಿಗಳಲ್ಲಿ ವಿಸರ್ಜಿಸುವ ಮೂಲಕ ನದಿ ನೀರನ್ನು ಕಲುಷಿತಗೊಳಿಸುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಕುಂಭಮೇಳ, ಗಣೇಶ ಹಬ್ಬದ ವೇಳೆ ದೇವರನ್ನು ವಿಸರ್ಜಿಸುವ ನೆಪದಲ್ಲಿ ನದಿ ನೀರನ್ನು ಕಲುಷಿತಗೊಳಿಸಲಾಗುತ್ತಿದೆ ಎಂದು ಪ್ರಾದೇಶಿಕ ನೈಸರ್ಗಿಕ ಇತಿಹಾಸ ವಸ್ತು ಸಂಗ್ರಹಾಲಯದ ವಿಜ್ಞಾನಿ ಬಿ.ಎಸ್. ಯೋಗೇಂದ್ರ ಆತಂಕ ವ್ಯಕ್ತಪಡಿಸಿದರು.

ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕ ಹಾಗೂ ಆರ್.ಎಲ್.ಎಚ್.ಪಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

ಭಾರತೀಯ ಪರಂಪರೆಯಲ್ಲಿ ಜನರು ನೈಸರ್ಗಿಕ ಸಂಪನ್ಮೂಲವನ್ನು ಉಳಿಸುವ ಉದ್ದೇಶದಿಂದ ನದಿ, ಬೆಟ್ಟ, ಗುಡ್ಡ ಇತ್ಯಾದಿಗಳನ್ನು ಆರಾಧಿಸುತ್ತಿದ್ದರು. ಇತ್ತೀಚೆಗೆ ಕುಂಭಮೇಳ, ಗಣೇಶ ಹಬ್ಬಗಳಲ್ಲಿ ಪೂಜಾ ವಸ್ತುಗಳು ಮತ್ತು ಗಣೇಶ ಮೂರ್ತಿಗಳನ್ನು ನದಿಗಳಲ್ಲಿ ವಿಸರ್ಜಿಸುವ ಮೂಲಕ ನದಿ ನೀರನ್ನು ಕಲುಷಿತಗೊಳಿಸುತ್ತಿದ್ದಾರೆ ಎಂದರು.

ಒಂದು ಹನಿ ನೀರನ್ನು ನಮ್ಮಿಂದ ಸೃಷ್ಟಿಸಲು ಸಾಧ್ಯವಿಲ್ಲ. ಆದ್ದರಿಂದ ನೀರಿನ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಏಕೆಂದರೆ ನಾಗರೀಕತೆಯ ಸೃಷ್ಟಿ ನೀರಿನಿಂದ ಆಗಿದ್ದು, ನೀರಿಲ್ಲದಿದ್ದರೆ ನಾಗರೀಕತೆ ನಾಶವಾಗುತ್ತದೆ. ಪ್ರತಿಯೊಬ್ಬರಿಗೂ ನೀರನನು ಬಳಸುವ ಹಕ್ಕಿದೆ. ಆದರೆ ಅಪಮೌಲ್ಯ ಮಾಡುವ ಹಕ್ಕಿಲ್ಲ ಎಂದು ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಆರ್.ಎಲ್.ಎಚ್.ಪಿ ಕಾರ್ಯದರ್ಶಿ ಪ್ರೊ.ವಿ.ಕೆ. ಜೋಸ್ ಮಾತನಾಡಿ, ಮುಂದಿನ ಪೀಳಿಗೆಗೆ ನೀರನ್ನು ಉಳಿಸುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದರು.

ಶಾಂತಿಗಾಗಿ ನೀರು ಎಂಬುದು ವಿಶ್ವ ಜಲದಿನದ ಧ್ಯೇಯವಾಗಿದೆ. ಮುಂದೆ ವಿಶ್ವ ಯುದ್ಧವಾದರೆ ಅದು ನೀರಿಗಾಗಿ ನಡೆಯುತ್ತದೆ. ಆದ್ದರಿಂದ ನೀರನ್ನು ಉಳಿಸುವುದು ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯ ಹಾಗೂ ಶುದ್ಧ ನೀರನ್ನು ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಎಂದರು.

ಹವಾಮಾನ ಬದಲಾವಣೆಯಿಂದ ಹವಾಮಾನ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ನೀರನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಅಳಿಲು ಸೇವೆ ಸಲ್ಲಿಸಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಂ. ಮಹದೇವಸ್ವಾಮಿ ಮಾತನಾಡಿ, ನೀರಿಗೆ ಪರ್ಯಾಯವಿಲ್ಲ. ನೀರಿರುವ ಗ್ರಹ ಬೇರೆ ಇಲ್ಲ. ಈ ಭೂಮಿ ಮೇಲೆ ಮಾತ್ರ ಮನುಷ್ಯರು ಬದುಕಲು ಸಾಧ್ಯ. ನಾವು ಬದುಕಲು ನೀರು ಬೇಕು. ಆದ್ದರಿಂದ ಜೀವ ಜಲವನ್ನು ರಕ್ಷಿಸುವ ಹೊಣೆ ನಮ್ಮದು. ಈ ನಿಟ್ಟಿನಲ್ಲಿ ಯುವ ಜನಾಂಗ ನೀರನ್ನು ಉಳಿಸಿ ಮುಂದಿನ ಪೀಳಿಗೆ ರಕ್ಷಿಸಬೇಕು ಎಂದು ಅವರು ಕರೆ ನೀಡಿದರು.

ಆರ್.ಎಲ್.ಎಚ್.ಪಿ ಕಾರ್ಯಕ್ರಮ ಸಂಯೋಜಕಿ ಶಾಲಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಖುಷಿ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಎಸ್. ಮಂಜುಳಾ ವಂದಿಸಿದರು. ಡಾ.ಎಚ್.ಪಿ. ಭವ್ಯಾ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.