ಕಪಾಳಕ್ಕೆ ಹೊಡೆಯಿರಿ ಎನ್ನುವುದು ಯಾವ ಸಂಸ್ಕೃತಿ: ಬಸವರಾಜ ದಢೇಸ್ಗೂರು ಪ್ರಶ್ನೆ

| Published : Mar 26 2024, 01:19 AM IST

ಕಪಾಳಕ್ಕೆ ಹೊಡೆಯಿರಿ ಎನ್ನುವುದು ಯಾವ ಸಂಸ್ಕೃತಿ: ಬಸವರಾಜ ದಢೇಸ್ಗೂರು ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿ ಮೋದಿ ಎಂದು ಕೂಗುವವರ ಕಪಾಳಕ್ಕೆ ಹೊಡೆಯಬೇಕು ಎಂದು ಮಾತನಾಡಿದರೆ, ಇದಕ್ಕೆ ನಾವು ಹೇಗೆ ಕೈಕಟ್ಟಿಕೊಂಡು-ಬಾಯಿ ಮುಚ್ಚಿಕೊಂಡಿರಲು ಸಾಧ್ಯ.

೩೧೩ ನೌಕರರಿಂದ ತಲಾ 5 ಲಕ್ಷ ಲಂಚ ಪಡೆದ ಸಚಿವ ತಂಗಡಗಿ

ಕನ್ನಡಪ್ರಭ ವಾರ್ತೆಕಾರಟಗಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಹೇಳಿಕೆ ನೀಡುವ ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಚಿವ ಶಿವರಾಜ ತಂಗಡಗಿ, ಮೋದಿ ಮೋದಿ ಎಂದು ಕೂಗುವವರ ಕಪಾಳಕ್ಕೆ ಹೊಡೆಯಬೇಕು ಎಂದು ಮಾತನಾಡಿದರೆ, ಇದಕ್ಕೆ ನಾವು ಹೇಗೆ ಕೈಕಟ್ಟಿಕೊಂಡು-ಬಾಯಿ ಮುಚ್ಚಿಕೊಂಡಿರಲು ಸಾಧ್ಯ ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಮ್ಮ ಗೃಹಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಮೋದಿ ಎಂದು ಘೋಷಣೆ ಕೂಗುವ ಯುವಕರ, ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು ಎನ್ನುವ ಸಚಿವರದ್ದು ಎಂಥಾ ಸಂಸ್ಕೃತಿ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿ ದೊಡ್ಡ ಮಟ್ಟದ ಪ್ರಚಾರ ಸಿಗುತ್ತದೆ ಎನ್ನುವ ಭ್ರಮೆಯಲ್ಲಿ ಸಚಿವ ಶಿವರಾಜ ತಂಗಡಗಿ ಇದ್ದಾರೆ. ದೇಶದ ಪ್ರಧಾನಿಗಳ ಸಾಧನೆ ಕಂಡು ಯುವಕರು, ವಿದ್ಯಾರ್ಥಿಗಳು ಕೊಡುವ ಗೌರವವನ್ನು ಕಂಡು ಅಸೂಯೆ ಪಡುತ್ತಿದ್ದಾರೆ. ಅದಕ್ಕೆ ಈ ಮಾತುಗಳೇ ಸಾಕ್ಷಿ. ಪ್ರಧಾನಿಗಳ ಬಗ್ಗೆ ಇಂಥ ಇನ್ನೊಂದು ಹೇಳಿಕೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಮಾಜಿ ಶಾಸಕರು, ಇಂಥ ಸಂಸ್ಕೃತಿ ಉಳ್ಳ ವ್ಯಕ್ತಿಯನ್ನು ಕೂಡಲೇ ಮುಖ್ಯಮಂತ್ರಿಗಳು ತಮ್ಮ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಅಧಿಕಾರಕ್ಕೆ ಬಂದು ಒಂಬತ್ತು ತಿಂಗಳಾದರೂ ಅರೆಬರೆ ಗ್ಯಾರಂಟಿ ಸ್ಕೀಂ ಬಿಟ್ಟರೆ ಕ್ಷೇತ್ರದಲ್ಲಿ ಒಂದು ರು. ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಈಗ ಕ್ಷೇತ್ರದಲ್ಲಿ ತಿರುಗಾಡಿ ಭೂಮಿ ಪೂಜೆ ನೆರವೇರಿಸುತ್ತಿರುವ ಎಲ್ಲ ಕಾಮಗಾರಿಗಳು ನನ್ನ ಅವಧಿಯಲ್ಲಿಯೇ ಅನುಷ್ಠಾನಗೊಂಡಿವೆ. ಸಚಿವರು ಮತ್ತು ಕಾಂಗ್ರೆಸ್ ಸರ್ಕಾರದ ಸಾಧನೆ ಏನು?, ಈ ಮನುಷ್ಯ ಮೋದಿ ಬಗ್ಗೆ ಮಾತನಾಡುವಷ್ಟು ದೊಡ್ಡವನೇ ಎಂದು ಏಕವಚನದಲ್ಲಿಯೇ ಸಚಿವ ತಂಗಡಗಿಯವರನ್ನು ತರಾಟೆಗೆ ತೆಗೆದುಕೊಂಡರು.

ತಂಗಡಗಿ ಸಚಿವರಾಗಿ ಒಂಬತ್ತು ತಿಂಗಳುಗಳು ಕಳೆದಿವೆ. ಆಗಲೇ ಹಿಂದುಳಿದ ವರ್ಗದ ಖಾತೆ ವ್ಯಾಪ್ತಿಯಲ್ಲಿ ೩೧೩ ನೌಕರರಿಗೆ ಪದೋನ್ನತಿ ನೀಡುವುದಾಗಿ ಪ್ರತಿಯೊಬ್ಬರಿಂದಲೂ 5 ಲಕ್ಷ ಲಂಚ ಸ್ವೀಕರಿಸಿದ್ದಾರೆ ಎಂದು ಬಸವರಾಜ ದಢೇಸೂಗೂರು ಗಂಭೀರವಾಗಿ ಆರೋಪಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಚ್. ಗಿರೇಗೌಡ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ್ ದಢೇಸೂಗೂರು, ಮಂಡಲ ಅಧ್ಯಕ್ಷರಾದ ಜಡೆಪ್ಪ ನವಲಿ ಮತ್ತು ಮಂಜುನಾಥ್ ಮಸ್ಕಿ, ಉಮೇಶ ಭಂಗಿ, ಬಸವರಾಜ ಎತ್ತಿನಮನಿ, ಎಸ್.ಬಿ ಗೌಡ, ಶರಣೇಗೌಡ ಬೇವಿನಾಳ, ಹೊನ್ನೂರಪ್ಪ ಮಡಿವಾಳ, ಶಶಿ ಮ್ಯಾದಾರ್ ಇನ್ನಿತರರು ಇದ್ದರು.ಕನಕಗಿರಿ ಕ್ಷೇತ್ರದಲ್ಲಿ ತಂಗಡಗಿಯವರಿಂದ ಎಫ್‌ಐಆರ್ ಗ್ಯಾರಂಟಿ:

ಸಚಿವ ಶಿವರಾಜ ತಂಗಡಗಿ ಚಿಲ್ಲರೆ ಹೇಳಿಕೆ ನೀಡುವುದನ್ನು ಬಿಟ್ಟು ಘನತೆಗೆ ತಕ್ಕಂತೆ ಮಾತನಾಡಬೇಕು ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರು ತಿರುಗೇಟು ನೀಡಿದ್ದಾರೆ.

ಸೋಮವಾರ ಕನಕಗಿರಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಜಗತ್ತು ಮೆಚ್ಚಿದ ನಾಯಕ ಎಂಬುದನ್ನು ಮರೆತು ವಿನಾಕಾರಣ ಹೀಗೆ ಶಬ್ದಗಳನ್ನು ಪ್ರಯೋಗಿಸಿ ಮಾತನಾಡುತ್ತಿದ್ದಾರೆ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ತಂಗಡಗಿ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಲೋಕಸಭಾ ಚುನಾವಣೆಯಲ್ಲಿ ಮತದಾರರು ಸರಿಯಾದ ಪಾಠ ಕಲಿಸುತ್ತಾರೆ. ಕನಕಗಿರಿ ಕ್ಷೇತ್ರದಲ್ಲಿ ತಂಗಡಗಿಯವರಿಂದ ಎಫ್‌ಐಆರ್ ಗ್ಯಾರಂಟಿ ಶುರುವಾಗಿದೆ. ಮಟ್ಕಾ, ಇಸ್ಪೀಟ್ ಕ್ಲಬ್, ಜೂಜಾಟ, ಮರುಳು ದಂಧೆ ಎಗ್ಗಿಲ್ಲದೆ ನಡೆಯುತ್ತಿರುವ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ್ದೇವೆ ಎಂದರು.

ಮುಖಂಡರಾದ ಸುರೇಶ ಗುಗ್ಗಳಶೆಟ್ರ, ಪ್ರಕಾಶ ಹಾದಿಮನಿ, ಗ್ಯಾನಪ್ಪ ಗಾಣದಾಳ, ಹರೀಶ ಪೂಜಾರಿ, ಸುಭಾಸ ಕೆ., ರಂಗಪ್ಪ ಕೊರಗಟಗಿ, ನಿಂಗಪ್ಪ ನಾಯಕ ಸೇರಿದಂತೆ ಇತರರು ಇದ್ದರು.