ಲಿಂಗಾಯತ ಧರ್ಮಕ್ಕಾಗಿ ನ.11ರಂದು ಸಮಾವೇಶ

| N/A | Published : Nov 03 2025, 02:03 AM IST / Updated: Nov 03 2025, 07:26 AM IST

Gangadevi

ಸಾರಾಂಶ

ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆಯುವ ವಿಚಾರ ಈಗ ಮತ್ತೆ ಮುನ್ನೆಲೆ ಬಂದಿದೆ. ಪ್ರತ್ಯೇಕ ಧರ್ಮ ಮಾನ್ಯತೆ ಪಡೆಯುವ ಸಂಬಂಧ ಹೋರಾಟದ ರೂಪರೇಷೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಇದರ ಅಂಗವಾಗಿ ಬಾಗಲಕೋಟೆಯ ಕೂಡಲ ಸಂಗಮದಲ್ಲಿ ನ.11ರಂದು ಸಮಾವೇಶ ನಡೆಸಲು ತಯಾರಿ ಆರಂಭಿಸಲಾಗಿದೆ.

  ದಾವಣಗೆರೆ :  ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆಯುವ ವಿಚಾರ ಈಗ ಮತ್ತೆ ಮುನ್ನೆಲೆ ಬಂದಿದೆ. ಪ್ರತ್ಯೇಕ ಧರ್ಮ ಮಾನ್ಯತೆ ಪಡೆಯುವ ಸಂಬಂಧ ಹೋರಾಟದ ರೂಪರೇಷೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಇದರ ಅಂಗವಾಗಿ ಬಾಗಲಕೋಟೆಯ ಕೂಡಲ ಸಂಗಮದಲ್ಲಿ ನ.11ರಂದು ಸಮಾವೇಶ ನಡೆಸಲು ತಯಾರಿ ಆರಂಭಿಸಲಾಗಿದೆ.

ಈ ಬಾರಿ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಲಿಂಗಾಯತ ಧರ್ಮ ಪಡೆದೇ ತೀರಬೇಕು. ದಶಕಗಳ ಹೋರಾಟವನ್ನು ಈ ಬಾರಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಿರ್ಧಾರದೊಂದಿಗೆ ಹೋರಾಟ ನಡೆಸಲು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ವೀರಶೈವ ಲಿಂಗಾಯತ ಎಂದು ಹೋಗದೆ, ಒಂದೇ ಧ್ವನಿಯಲ್ಲಿ ಲಿಂಗಾಯತ ಧರ್ಮ ಎಂದು ಹೋದರೆ ಮಾತ್ರ ಧರ್ಮದ ಮಾನ್ಯತೆ ಸಿಗುತ್ತದೆ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಕೂಡಲ ಸಂಗಮದ ಶ್ರೀ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೆಲ್ಲಾ ಸಾಂಸ್ಕೃತಿಕವಾಗಿ ನಾವೆಲ್ಲರೂ ಹಿಂದೂಗಳು. ಆದರೆ, ಧಾರ್ಮಿಕವಾಗಿ ಅಲ್ಲ. ಹಿಂದೂ ಎನ್ನುವುದು ಧರ್ಮವಲ್ಲ, ಅದೊಂದು ಜೀವನ ಪದ್ಧತಿ. ನಮಗೆ ಧರ್ಮ ಕೊಟ್ಟಿರುವ ಧರ್ಮಗುರು ಬಸವಣ್ಣನವರು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವನ್ನು ನಾವು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

ಕೂಡಲ ಸಂಗಮದಲ್ಲಿ ನ.11ರಂದು ಮತ್ತೊಂದು ಸಮಾವೇಶ

ಕೂಡಲ ಸಂಗಮದಲ್ಲಿ ನ.11ರಂದು ಮತ್ತೊಂದು ಸಮಾವೇಶ ಮಾಡುತ್ತೇವೆ. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವು ಇಲ್ಲಿಗೆ ನಿಲ್ಲುವುದಿಲ್ಲ. ಮುಂದೆ ಇಟ್ಟಿರುವ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದೆ ತೆಗೆಯಬಾರದೆಂಬ ನಿರ್ಣಯವನ್ನು ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಬಸವ ಧರ್ಮದ ಅನುಯಾಯಿಗಳಿಗೆ ಕೂಡಲ ಸಂಗಮವೇ ಧರ್ಮಕ್ಷೇತ್ರವಾಗಿದೆ. ವೀರಶೈವ ಲಿಂಗಾಯತವೆಂದುಕೊಂಡು ಹೋದರೆ ಇನ್ನೂ ಒಂದು ಶತಮಾನ ಕಳೆದರೂ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವುದಿಲ್ಲ. ಲಿಂಗಾಯತ ಧರ್ಮವೆಂದು ಹೋದರೆ ಮಾತ್ರವೇ ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುತ್ತದೆ ಎಂದು ಅವರು ಹೇಳಿದರು.ಮಾತೆ ಮಹಾದೇವಿಯವರೆ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿಗೆ ಮುನ್ನುಡಿ ಬರೆದಿದ್ದರು. ದಶಕಗಳಿಂದಲೂ ಈ ಹೋರಾಟ ನಡೆಯುತ್ತಲೇ ಇದೆ. ವೀರಶೈವ ಲಿಂಗಾಯತವೆಂದಾದರೆ ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆಯೆಂಬುದು ಮರೀಚಿಕೆಯಾಗುತ್ತದೆ. ಹಾಗಾಗಿಯೇ ಲಿಂಗಾಯತ ಧರ್ಮದ ಮಾನ್ಯತೆಗಾಗಿಯೇ ನಾವೆಲ್ಲರೂ ಹೋರಾಟ ನಡೆಸಬೇಕು ಎಂದು ಅವರು ಕರೆ ನೀಡಿದರು.

ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆಯುವ ಛಲದಿಂದಲೇ ಮುನ್ನುಗ್ಗಿದ್ದೇವೆ

ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆಯುವ ಛಲದಿಂದಲೇ ಮುನ್ನುಗ್ಗಿದ್ದೇವೆ. ಇದು ಇಂದು ನಿನ್ನೆಯದಲ್ಲ, ದಶಕಗಳ ಹಿಂದಿನ ಕನಸಾಗಿದೆ. ಈಗ ನನಸಾಗುವ ಕಾಲವು ಸಮೀಪಿಸುತ್ತಿದೆ. ಬಾಳೆಹೊನ್ನೂರಿನ ರಂಭಾಪುರಿ ಸ್ವಾಮೀಜಿಗಳು ಎಲ್ಲರೂ ಒಂದಾಗೋಣವೆಂದು ಕರೆ ನೀಡಿದ್ದಾರೆ. ಬಸವಣ್ಣನವರೇ ಧರ್ಮಗುರು, ಬಸವಣ್ಣನವರ ವಚನಗಳೇ ಧರ್ಮಗ್ರಂಥ, ಕೂಡಲ ಸಂಗಮವೇ ಧರ್ಮಕ್ಷೇತ್ರವೆಂದು ರಂಭಾಪುರಿ ಶ್ರೀಗಳು ನಂಬಿದಾಗ ನಾವು ಶ್ರೀಗಳ ಹೇಳಿಕೆ ಬಗ್ಗೆ ಯೋಚಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಬಸವಾದಿ ಶರಣರು ಬೀದರ್‌ನಿಂದ ಹಿಂದೂ ಸಮಾವೇಶ‍ವನ್ನು ಮಾಡುತ್ತೇವೆಂದಿದ್ದಾರೆ. ಶರಣರೆಲ್ಲರೂ ಬರಲಿ ಎಂಬ ಉದ್ದೇಶದಿಂದ ಅಂತಹವರೆಲ್ಲಾ ಮುಖವಾಡವನ್ನು ಹಾಕಿಕೊಂಡಿದ್ದಾರೆ. ಆದರೆ, ಈಚೆಗೆ ಎಲ್ಲಾ ಶರಣರೂ ಎಚ್ಚೆತ್ತಿದ್ದಾರೆ. 30 ವರ್ಷಗಳ ಹಿಂದೆ ಇದ್ದಂತಹ ಪರಿಸ್ಥಿತಿ ಈಗ ಇಲ್ಲ. ಗುರು-ವಿರಕ್ತರು, ಶರಣರು ಲಿಂಗಾಯತದ ಪರಂಪರೆ ಒಂದಾಗಲು ಬಸವಣ್ಣನವರನ್ನು ಧರ್ಮಗುರುವೆಂದು ಒಪ್ಪಿಕೊಂಡಾಗ ಮಾತ್ರ ಒಂದಾಗುತ್ತೇವೆಂದು ಮಾತೆ ಗಂಗಾದೇವಿ ಪುನರುಚ್ಛರಿಸಿದರು.

ಕನೇರಿ ಶ್ರೀಗಳ ಹೇಳಿಕೆಗೆ ಮಾತೆ ಗಂಗಾದೇವಿ ಆಕ್ಷೇಪ 

ದಾವಣಗೆರೆ :  ಕಾವಿ ಧರಿಸಿದ ನಂತರ ನಾವು ಅಶ್ಲೀಲ ಪದಗಳು, ಶಬ್ಧಗಳನ್ನು ಬಳಸಬಾರದು. ವೈಚಾರಿಕ ಭಿನ್ನಾಭಿಪ್ರಾಯವಿದ್ದರೆ ಮಾತನಾಡೋಣ. ಅದನ್ನು ಬಿಟ್ಟು ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ ಎಂದು ಕೂಡಲ ಸಂಗಮದ ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಸಲಹೆ ನೀಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವ ಸಂಸ್ಕೃತಿ ಅಭಿಯಾನದ ಕುರಿತಂತೆ ಕನೇರಿ ಮಠದ ಶ್ರೀಗಳು ವೈಯಕ್ತಿಕವಾಗಿ ಮಾತನಾಡಿದ್ದು ಸರಿಯಲ್ಲ. ಅಭಿಯಾನದ ಯಶಸ್ಸಿನ ಬಗ್ಗೆ ಕನೇರಿ ಶ್ರೀಗಳು ಸಂತೋಷಪಡಬೇಕಿತ್ತು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಧರ್ಮ ಒಡೆಯುತ್ತಿದ್ದಾರೆಂಬ ಆರೋಪ ಮಾಡಲಾಗುತ್ತಿದೆ. ಧರ್ಮ ಎನ್ನುವುದು ಮಡಿಕೆಯಲ್ಲ ಯಾರೋ ಒಡೆದು ಹಾಕುವುದಕ್ಕೆ. ಬಸವಣ್ಣನವರ ಬಗ್ಗೆ ಸಿದ್ದರಾಮಯ್ಯಗೆ ಅಭಿಮಾನವಿದೆ. ಹಾಗಾಗಿಯೇ ಅಭಿಮಾನದಿಂದ ಮಾತನಾಡುತ್ತಾರೆ ಎಂದು ಅವರು ಹೇಳಿದರು. 

Read more Articles on