ಸಾರಾಂಶ
ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ತ್ವರಿತಗತಿಯಲ್ಲಿ ತಲುಪಿಸುವುದು ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದೊಂದಿಗೆ ಹುಕ್ಕೇರಿ ತಾಲೂಕು ಆಡಳಿತ ಸೌಧದಲ್ಲಿ ಮಹತ್ವಾಕಾಂಕ್ಷಿ ಇ-ಆಫೀಸ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ತಾಲೂಕಿನ ಹೊಸದಾಗಿ ಪರಿಚಯಿಸಿದ ಈ ಇ-ಆಫೀಸ್ ವ್ಯವಸ್ಥೆಯಿಂದ ಕಂದಾಯ ಇಲಾಖೆಯ ಸೇವೆಗಳು ಇದೀಗ ಪೂರ್ಣ ಪ್ರಮಾಣದಲ್ಲಿ ಪೇಪರ್ ರಹಿತ ಕಚೇರಿಯಾಗಿ ಬದಲಾಗಿದೆ. ಇಲ್ಲಿನ ತಾಲೂಕು ಕಚೇರಿಯ ಕಾರ್ಯಗಳೆಲ್ಲವೂ ಕಾಗದ ರಹಿತ ಮತ್ತು ಪಾರದರ್ಶಕತೆಗೆ ತೆರೆದುಕೊಂಡಿದ್ದು ಈ ಹೊಸ ವ್ಯವಸ್ಥೆ ಅನುಷ್ಠಾನದಿಂದ ಕಂದಾಯ ಇಲಾಖೆಯ ಕಡತಗಳ ವಿಲೇವಾರಿಯಲ್ಲಿ ವಿಳಂಬ ತಪ್ಪಿದಂತಾಗಿದೆ.ಇ-ಆಫೀಸ್ ವ್ಯವಸ್ಥೆ ಜಾರಿಯಿಂದ ಸಾರ್ವಜನಿಕರ ಪರದಾಟ ತಪ್ಪಲಿದೆ. ಜೊತೆಗೆ ಸಮಯದ ಉಳಿತಾಯವೂ ಆಗಲಿದೆ. ಇ-ಆಫೀಸ್‌ನಲ್ಲಿ ಕಂದಾಯ ಸೇವೆಗಳೆಲ್ಲವೂ ಇದೀಗ ಸುಗಮವಾಗುತ್ತಿದ್ದು ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಹಾಕಿದಂತಾಗಿದೆ. ಹುಕ್ಕೇರಿ, ಸಂಕೇಶ್ವರ ಮತ್ತು ಯಮಕನಮರಡಿ ಹೋಬಳಿಗಳ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಇ-ಆಫೀಸ್ ವ್ಯವಸ್ಥೆಯನ್ನು ಸಮರ್ಪಕ ಮತ್ತು ಸುಗಮವಾಗಿ ಜಾರಿಗೊಳಿಸಲು ಕಂದಾಯ ಇಲಾಖೆ ಎಲ್ಲ ಅಧಿಕಾರಿ-ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ ಪರಿಣಿತಿಗೊಳಿಸಲಾಗಿದೆ. ಸಾರ್ವಜನಿಕರು ಅರ್ಜಿಯನ್ನು ಹತ್ತಿರದ ಕಂದಾಯ ಇಲಾಖೆಯ ಇ-ಆಫೀಸ್‌ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯಾದ ಕೂಡಲೇ ಅದು ಸಂಬಂಧಿಸಿದ ಅಧಿಕಾರಿಗಳಿಗೆ ರವಾನೆಯಾಗುತ್ತದೆ. ಇಲ್ಲಿ ಸಲ್ಲಿಕೆಯಾದ ಎಲ್ಲ ದಾಖಲೆ ಸ್ಕ್ಯಾನ್ ಆಗಿ ಸಂಬಂಧಿತ ಶಾಖೆಗೆ ರವಾನೆಯಾಗುತ್ತದೆ. ಅಲ್ಲಿ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ನಡೆಯುತ್ತವೆ.
ಜನರು ಕೆಲವು ದಾಖಲೆ ಪಡೆಯಬೇಕಾದರೆ ತಾಲೂಕು ಕಚೇರಿ ಅಥವಾ ನಾಡ ಕಚೇರಿಯಲ್ಲಿ ಅರ್ಜಿ ನೀಡಿ, ಅದು ಅರ್ಜಿದಾರರಿಗೆ ಸಿಗಲು ಸಮಯ ತೆಗೆದುಕೊಳ್ಳುತ್ತಿತ್ತು. ಇ-ಆಫೀಸ್ ಅನುಷ್ಠಾನದಿಂದ ಕಾಯುವಿಕೆ ತಪ್ಪಲಿದೆ. ಅರ್ಜಿ ಹಾಕಿದವರಿಗೆ ಇ-ಆಫೀಸ್ ಸಂಖ್ಯೆ ಸಿಗಲಿದ್ದು ಈ ಸಂಖ್ಯೆಯ ಮೂಲಕ ಅರ್ಜಿ ಸ್ಥಿತಿಯನ್ನೂ ಪರಿಶೀಲಿಸಬಹುದು.ಪಹಣಿ ತಿದ್ದುಪಡಿ, ಕಂದಾಯ ಗ್ರಾಮ, ಬರ ಪರಿಹಾರ, ದಾರಿ ಬಿಡಿಸುವಿಕೆ, ಭೂಮಿ ಖಾತೆ ಬಗ್ಗೆ, ಬಗರ್ ಹುಕುಂ ಮತ್ತಿತರ ಅರ್ಜಿಗಳನ್ನು ಇ-ಆಫೀಸ್‌ನಲ್ಲೇ ಸಲ್ಲಿಸಬಹುದು. ಅರ್ಜಿಯ ಸ್ಥಿತಿ, ಎಷ್ಟು ದಿನದಲ್ಲಿ ವಿಲೇವಾರಿಯಾಗಲಿದೆ ಎಂಬ ವಿವರ ದೊರೆಯುತ್ತದೆ. ವಿಳಂಬವಾದರೆ ಕಾರಣವೇನು, ಅರ್ಜಿ ಈಗ ಯಾರ ಬಳಿಯಿದೆ ಎಂಬ ವಿವರವೂ ಲಭ್ಯವಾಗುತ್ತಿದೆ.
ಇದುವರೆಗೆ ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ನಾಡ ಕಚೇರಿಗೆ ಅರ್ಜಿ ಸಲ್ಲಿಸಬೇಕಿತ್ತು. ಸಂಬಂಧಿತ ಅಧಿಕಾರಿ ಅರ್ಜಿಗಳನ್ನು ತಾಲೂಕು ಕಚೇರಿಗೆ ತಲುಪಿಸಿ ಅಲ್ಲಿ ಮುಂದಿನ ಪ್ರಕ್ರಿಯೆ ನಡೆಯುತ್ತಿತ್ತು. ಅರ್ಜಿಗಳನ್ನು ಟಪಾಲು ಮೂಲಕ ಕಳುಹಿಸಿ ಮುಂದಿನ ಹಂತದ ಪ್ರಕ್ರಿಯೆಯಗಳನ್ನು ನಡೆಸಲಾಗುತ್ತಿತ್ತು. ಅರ್ಜಿದಾರರು ತಮ್ಮ ಅರ್ಜಿಯ ಪ್ರಗತಿ ಸ್ಥಿತಿ ತಿಳಿಯಲು ಪರದಾಡಬೇಕಿತ್ತು. ಈ ಎಲ್ಲ ಸಮಸ್ಯೆಗಳು ಇದೀಗ ಅನುಷ್ಠಾನವಾದ ಇ-ಆಫೀಸ್ ವ್ಯವಸ್ಥೆ ತಪ್ಪಿಸಿದೆ.ಇ-ಆಫೀಸ್ ವ್ಯವಸ್ಥೆ ಜಾರಿಯಿಂದ ಪಾರದರ್ಶಕ ಆಡಳಿತ, ತ್ವರಿತ ಸೇವೆಗೆ ಅನುಕೂಲವಾಗಿದೆ. ಇದರಿಂದ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳು ಸುಲಭವಾಗಿ ತಲುಪಲಿವೆ. ಹಾಗಾಗಿ ಈ ಯೋಜನೆಯನ್ನು ಸಮರ್ಪಕ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ.- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ ಬೆಳಗಾವಿ
ಸರ್ಕಾರದ ಆದೇಶದಂತೆ ಹುಕ್ಕೇರಿ ತಾಲೂಕಿನ ಕಂದಾಯ ಇಲಾಖೆಯಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದೆ. ಹೋಬಳಿಗಳಲ್ಲಿ ಸಲ್ಲಿಕೆಯಾದ ಅರ್ಜಿಗಳ ಅನಗತ್ಯ ವಿಳಂಬ ಇದರಿಂದ ದೂರವಾಗುತ್ತದೆ. ಇಡೀ ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ.
- ಮಂಜುಳಾ ನಾಯಕ, ತಹಶೀಲ್ದಾರ ಹುಕ್ಕೇರಿ