ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವ ಕಾವೇರಿ ನೀರು ನಿಯಂತ್ರಣ ಮಂಡಳಿ, ನಿರ್ವಹಣಾ ಪ್ರಾಧಿಕಾರದ ವಿರುದ್ಧ ಪಟ್ಟಣದಲ್ಲಿ ರೈತಸಂಘದ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಸೇರಿದ ರೈತರು ಮೆರವಣಿಗೆ ಮೂಲಕ ಪಟ್ಟಣದ ಪ್ರವಾಸಿ ಮಂದಿರ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ರಚಿಸಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ರಸ್ತೆ ತಡೆ ನಡೆಸಿದರು.

ರೈತ ಮುಖಂಡ ಪುಟ್ಟೇಗೌಡ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಕೆರೆ- ಕಟ್ಟೆಗಳು ಒಣಗಿವೆ. ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದರೆ, ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುವ ಮೂಲಕ ರೈತ ಸಮುದಾಯಕ್ಕೆ ವಂಚನೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಕಷ್ಟದ ಸನ್ನಿವೇಶದಲ್ಲಿ ನೀರು ಹಂಚಿಕೆ ಕುರಿತು ರಾಜ್ಯ ಸರ್ಕಾರ ಪ್ರಬಲವಾಗಿ ಧ್ವನಿಯೆತ್ತುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಸಂಸದರೂ ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕುತ್ತಿಲ್ಲ. ಕೇಂದ್ರ ಸರ್ಕಾರ ತಕ್ಷಣವೇ ಕಾವೇರಿ ನೀರು ಹಂಚಿಕೆ ಪ್ರಾಧಿಕಾರವನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.


ಕಾವೇರಿ ಜಲ ವಿವಾದ ಉಂಟಾದಾಗ ಹೇಮಾವತಿ ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ಬಸಿದು ಹೇಮೆಯ ರೈತರಿಗೆ ದ್ರೋಹ ಮಾಡಲಾಗುತ್ತಿದೆ. ಕಬಿನಿ, ಹಾರಂಗಿ ಮತ್ತು ಹೇಮಾವತಿ ಅಣೆಕಟ್ಟೆಗಳು ತಮಿಳುನಾಡಿನ ನೀರು ಸಂಗ್ರಹಾಗಾರಗಳಾಗಿವೆ ಎಂದು ಕಿಡಿಕಾರಿದರು.

ಅಣೆಕಟ್ಟೆಗಳ ಜಲ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ನೀತಿ ಬದಲಾಗಬೇಕು. ಬರದ ಸನ್ನಿವೇಶದಲ್ಲಿ ಎರಡೂ ರಾಜ್ಯಗಳ ಜಲಾನಯನ ಪ್ರದೇಶದಲ್ಲಿ ಸಂಚರಿಸಿ ಎರಡೂ ರಾಜ್ಯಗಳ ರೈತರಿಗೂ ಅನ್ಯಾಯವಾಗದಂತೆ ಸಂಕಷ್ಟದ ನೀರು ಹಂಚಿಕೆ ಸೂತ್ರವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಮುದ್ದುಕುಮಾರ್, ಬೂಕನಕೆರೆ ನಾಗರಾಜು, ಮುದ್ದುಕುಮಾರ್, ಕರೋಟಿ ತಮ್ಮಯ್ಯ, ಕೃಷ್ಣಾಪುರ ರಾಜಣ್ಣ, ಹಿರೀಕಳಲೆ ಬಸವರಾಜು, ಅರುಣಕುಮಾರ್, ಕಾಗೇಪುರ ಮಹೇಶ್, ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್ ಸೇರಿ ಹಲವರು ಭಾಗವಹಿಸಿದ್ದರು.