ಉಮಾಶಂಕರ ಕಾರ್ಯ
ಕನ್ನಡಪ್ರಭ ವಾರ್ತೆ ಬೆಂಗಳೂರುಬಿಬಿಎಂಪಿಯಿಂದ ಜಿಬಿಎ ಆಗಿ ಬದಲಾಗುತ್ತಿದ್ದಂತೆ ಸುಲಲಿತವಾಗಿ ಆರೋಗ್ಯ ಸೇವೆ ಪಡೆಯುತ್ತಿದ್ದ ಅಲ್ಲಿನ ನೌಕರರು ಇದೀಗ ಕನಿಷ್ಟ ಆರೋಗ್ಯ ಚಿಕಿತ್ಸೆಗೂ ಐದು ಪಾಲಿಕೆಗಳ ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ.
ಬೃಹತ್ ಬೆಂಗಳೂರು ನಗರಪಾಲಿಕೆ(ಬಿಬಿಎಂಪಿ) ವ್ಯವಸ್ಥೆಯಲ್ಲಿದ್ದಾಗ ನೌಕರರು ಟೌನ್ ಹಾಲ್ ಸಮೀಪ ಇರುವ ದಾಸಪ್ಪ ಆಸ್ಪತ್ರೆಯಿಂದ ಅಪ್ರೂವಲ್ ಪಡೆದುಕೊಂಡು ನಗರದ ಯಾವುದಾದರೂ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿತ್ತು. ಆದರೆ, ಈಗ ಜಿಬಿಎ ಆಗಿ ಬದಲಾಗಿ ಐದು ಪಾಲಿಕೆಗಳಾಗಿ ವಿಂಗಡಣೆಯಾದಾಗಿನಿಂದ ನೌಕರರಿಗೆ ನೀಡುವ ಆರೋಗ್ಯ ಸೇವೆಯ ಜವಾಬ್ದಾರಿಯನ್ನು ಆಯಾ ಪಾಲಿಕೆಗಳಿಗೆ ವಹಿಸಲಾಗಿದೆ.ಉತ್ತರ ಪಾಲಿಕೆ ವ್ಯಾಪ್ತಿಯ ನೌಕರರು ಬ್ಯಾಟರಾಯನಪುರದ ಮಿನಿ ವಿಧಾನಸೌಧದ ಬಳಿ ಆರೋಗ್ಯ ಕೇಂದ್ರ, ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಬೊಮ್ಮನಹಳ್ಳಿ ಪಾಲಿಕೆ ಆಸ್ಪತ್ರೆ ಹಾಗೂ ಜಯನಗರ ಆಸ್ಪತ್ರೆ, ಪಶ್ಚಿಮ ಪಾಲಿಕೆ ನೌಕರರು ಸ್ಯಾಂಕಿ ಟ್ಯಾಂಕ್ ಬಳಿ ಪಾಲಿಕೆ ಆಸ್ಪತ್ರೆ, ಕೇಂದ್ರ ಪಾಲಿಕೆ ನೌಕರರು ಮೆಯೋ ಹಾಲ್ ಸಮೀಪದ ಆಸ್ಪತ್ರೆ, ಪೂರ್ವ ಪಾಲಿಕೆ ನೌಕರರು ಮಹದೇವಪುರ ಪಾಲಿಕೆ ಆಸ್ಪತ್ರೆ ವೈದ್ಯರಿಂದ ಅಪ್ರೂವಲ್ ಪಡೆಯುವುದು ಕಡ್ಡಾಯ.
ಈಗ ಸಮಸ್ಯೆಯಾಗಿರುವುದೇ ಇಲ್ಲಿ. ದಕ್ಷಿಣ ಪಾಲಿಕೆ ವ್ಯಾಪ್ತಿಯ ಜಯನಗರದಲ್ಲಿ ಸೇವೆ ಸಲ್ಲಿಸುವ ನೌಕರ, ಉತ್ತರ ಪಾಲಿಕೆ ವ್ಯಾಪ್ತಿಯ ಯಲಹಂಕದಲ್ಲಿ ವಾಸವಿದ್ದು, ಆತನಿಗೆ ಅನಾರೋಗ್ಯ ಉಂಟಾದಲ್ಲಿ ಆತನ ಕುಟುಂಬದ ಸದಸ್ಯರು ಯಲಹಂಕದಿಂದ ಜಯನಗರದ ಆಸ್ಪತ್ರೆಗೆ ಬರಲೇಬೇಕಾಗಿದೆ. ಒಂದು ವೇಳೆ ಆತ ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಆತನ ಕುಟುಂಬದ ಸದಸ್ಯರು ಪೂರ್ವ ಪಾಲಿಕೆಯ ಮಹದೇವಪುರ ಆಸ್ಪತ್ರೆಗೆ ಹೋಗಲೇಬೇಕಾಗಿದೆ. ಅಲ್ಲಿ ಗುರುತಿಸಿರುವ ಆಸ್ಪತ್ರೆ ವೈದ್ಯರಿಂದಲೇ ಅಪ್ರೂವಲ್ ಪಡೆದುಕೊಳ್ಳಬೇಕು.
ಅಪ್ರೂವಲ್ ಬಳಿಕವೇ ದಾಖಲು:
ಪಾಲಿಕೆಯ ವೈದ್ಯರು ಅಪ್ರೂವಲ್ ಕೊಟ್ಟ ನಂತರವೇ ನಗರದ ಇತರೆ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಅಲ್ಲಿಯವರೆಗೂ ಯಾವುದೇ ಶಿಫಾರಸು, ನಂಬಿಕೆ, ಗುರುತಿನ ಪತ್ರ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಈ ಸಮಸ್ಯೆಯಿಂದಾಗಿ ತೀವ್ರ ಅನಾರೋಗ್ಯಕ್ಕೆ ಈಡಾಗಿರುವ ಕೆಲ ನೌಕರರ ಕುಟುಂಬದವರು ಜಿಬಿಎ ವ್ಯವಸ್ಥೆಯಿಂದ ನೊಂದುಹೋಗಿದ್ದಾರೆ. ಈ ಸಮಸ್ಯೆ ಕುರಿತು ಜಿಬಿಎ ಆಯುಕ್ತ ಮಹೇಶ್ವರರಾವ್ ಅವರಿಗೆ ತಿಳಿಸಿ ಮನವಿ ಸಲ್ಲಿಸಿದಾಗ ಇದು ಜಿಬಿಎ ನಿಯಮ, ಯಾವುದೇ ಬದಲಾವಣೆ ಮಾಡಲು ಆಯುಕ್ತರ ಮಟ್ಟದಲ್ಲಿ ಸಾಧ್ಯವಿಲ್ಲ. ಅದೇನಿದ್ದರೂ ಸರ್ಕಾರವೇ ಬದಲಾಯಿಸಬೇಕು ಎಂದು ಕೈ ಚಲ್ಲಿದ್ದಾರೆ.ಬಿಬಿಎಂಪಿ ಆಡಳಿತ ವ್ಯವಸ್ಥೆಯಲ್ಲಿದ್ದ ತೋಟಗಾರಿಕೆ ಇಲಾಖೆ, ಸಾರ್ವಜನಿಕ ಆರೋಗ್ಯ, ಅರಣ್ಯ ಇಲಾಖೆ ಈ ಮೂರನ್ನು ಜಿಬಿಎ ವ್ಯವಸ್ಥೆಯಲ್ಲಿಯೂ ಮುಂದುವರಿಸಲಾಗಿದೆ. ಆದರೆ, ನೌಕರರ ಆರೋಗ್ಯ ಸೇವೆಯನ್ನು ಮಾತ್ರ ಆಯಾ ಪಾಲಿಕೆಗಳ ವ್ಯಾಪ್ತಿಗೆ ನೀಡಲಾಗಿದೆ.
ಆಗಸ್ಟ್‌ನಲ್ಲಿ ಸಭೆ ನಡೆಸಿಪರಿಹಾರ: ಸಿಎಂ ಭರವಸೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಅವರನ್ನು ಈ ಕುರಿತು ಕನ್ನಡಪ್ರಭ ಮಾತನಾಡಿಸಿದಾಗ, ಬಿಬಿಎಂಪಿ ವ್ಯವಸ್ಥೆ ಇದ್ದಾಗ ಟೌನ್ ಹಾಲ್ ಬಳಿ ಇರುವ ದಾಸಪ್ಪ ಆಸ್ಪತ್ರೆಗೆ ಹೋಗಿ ಅಪ್ರೂವಲ್ ಪಡೆಯುತ್ತಿದ್ದೆವು. ಈ ಆಸ್ಪತ್ರೆಗೆ ಎಲ್ಲಿಂದಾದರೂ ಬಂದು ತಲುಪಲು ಸುಲಭವಾಗುತ್ತಿತ್ತು. ಈಗ ಆಯಾ ನೌಕರರ ಆಸ್ಪತ್ರೆಗಳು ಎಲ್ಲೆಲ್ಲಿವೆಯೋ ಅಲ್ಲಿಗೇ ಹುಡುಕಿಕೊಂಡು ಹೋಗುವುದು ಕಷ್ಟವಾಗುತ್ತಿದೆ. ಅನಾರೋಗ್ಯದ ಸಮಸ್ಯೆ ಒಂದೆಡೆಯಾದರೆ, ಆಸ್ಪತ್ರೆಗಳ ಹುಡುಕಾಟ ಮತ್ತೊಂದು ಸಮಸ್ಯೆಯಾಗಿದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದೇವೆ. ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೂ ಮನವಿ ಸಲ್ಲಿಸಿದ್ದೇವೆ. ಅವರು ಇದೇ ಆಗಸ್ಟ್ ತಿಂಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.