ನಗರದಲ್ಲಿ ಬುಧವಾರ ನಡೆದ ಮಹಿಳೆಯ ಅಪಹರಣ ಮತ್ತು ಸರಣಿ ಅಪಘಾತ ಪ್ರಕರಣದ ಆರೋಪಿಗಳ ಪೈಕಿ ಒಬ್ಬಾತ ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.ಈ ಸಂಬಂಧ ಸಂತ್ರಸ್ತ ಮಹಿಳೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ
ಬೆಂಗಳೂರು : ನಗರದಲ್ಲಿ ಬುಧವಾರ ನಡೆದ ಮಹಿಳೆಯ ಅಪಹರಣ ಮತ್ತು ಸರಣಿ ಅಪಘಾತ ಪ್ರಕರಣದ ಆರೋಪಿಗಳ ಪೈಕಿ ಒಬ್ಬಾತ ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಸಂತ್ರಸ್ತ ಮಹಿಳೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಪೂಜಾ ಎಂಬ ವಿವಾಹಿತ ಮಹಿಳೆಯನ್ನು ದುಷ್ಕರ್ಮಿಗಳು ಅಪಹರಿಸುವ ಭರದಲ್ಲಿ ಹಲವು ವಾಹನಗಳಿಗೆ ಗುದ್ದಿ ಸರಣಿ ಅಪಘಾತ ಎಸಗಿದ್ದರು. ಘಟನೆಯ ಸಂಬಂಧ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಕಾರಿನಲ್ಲಿ ನನ್ನನ್ನು ಅಪಹರಣ ಮಾಡಿಕೊಂಡು ಹೋಗುವಾಗ ಜೋರಾಗಿ ಕಿರುಚಾಡುತ್ತಿದ್ದೆ. ನನ್ನನ್ನು ಹಿಡಿದುಕೊಂಡಿದ್ದವರ ಪೈಕಿ ಒಬ್ಬಾತ ನನ್ನ ಬಲಗೈಗೆ ಮುತ್ತನ್ನು ಕೊಟ್ಟು, ನನ್ನ ಖಾಸಗಿ ಅಂಗಗಳನ್ನು ಬಲವಂತವಾಗಿ ಮುಟ್ಟಿದ್ದಾನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ಥಳ ಮಹಜರು:
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ರಸ್ತೆ ಠಾಣೆ ಪೊಲೀಸರು ಗಾಯಾಳುಗಳ ಹೇಳಿಕೆ ದಾಖಲಿಸಿದ್ದಾರೆ. ಜತೆಗೆ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ಒಟ್ಟು ಆರು ಮಂದಿ ಸಾರ್ವಜನಿಕರು ಗಾಯಗೊಂಡಿದ್ದಾರೆ. ಈ ಪೈಕಿ ಜಯಲಕ್ಷ್ಮೀ ಎಂಬುವವರಿಗೆ ತಲೆಗೆ ಗಂಭೀರ ಗಾಯವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾರಿ ತಿಳಿಯದೇ ಅಡ್ಡಾದಿಡ್ಡಿ ಚಾಲನೆ:
ದುಷ್ಕರ್ಮಿಗಳು ಪೂಜಾ ಎಂಬ ಮಹಿಳೆಯನ್ನು ಅಪಹರಣ ಮಾಡಿದ ಬಳಿಕ ಸರಿಯಾಗಿ ದಾರಿ ತಿಳಿಯದೇ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದಾರೆ. ಒಮ್ಮೆ ಗುದ್ದಿದ ಮೇಲೆ ಸಿಕ್ಕಿ ಬಿದ್ದರೆ ಕಷ್ಟ ಎಂದು ಭಾವಿಸಿ ಕಾರು ನಿಲ್ಲಿಸದೇ ಭಯದಲ್ಲಿ ಸರಣಿ ಅಪಘಾತ ಮಾಡಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪ್ರಕರಣದ ವಿವರ:
ರಾಜಸ್ಥಾನದ ಪಾಲಿ ಜಿಲ್ಲೆ ಮೂಲದ ಮಹಿಳೆ ಪೂಜಾ ಮತ್ತು ಈಕೆಯ ಪತಿ ಓಂ ಪ್ರಕಾಶ್ ಒಂದೇ ಗ್ರಾಮದವರಾಗಿದ್ದು, ಸುಮಾರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಅಂತರ್ಜಾತಿ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಫೆಬ್ರವರಿಯಲ್ಲಿ ಪಾಲಿ ಜಿಲ್ಲೆಯ ಕೋರ್ಟ್‌ನಲ್ಲಿ ಇಬ್ಬರು ಮದುವೆಯಾಗಿದ್ದರು. ನಂತರ ಪೋಷಕರ ಪ್ರಾಣ ಭಯದಿಂದ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಓಂಪ್ರಕಾಶ್ ಸಹೋದರನ ಮನೆಯಲ್ಲಿ ವಾಸವಾಗಿದ್ದರು. 10 ದಿನಗಳ ಹಿಂದಷ್ಟೇ ಅಗ್ರಹಾರ ದಾಸರಹಳ್ಳಿಯಲ್ಲಿ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು.
ಈ ವಿಚಾರ ತಿಳಿದ ಪೂಜಾಳ ಸೋದರ ಅತ್ತೆ ಪಾಣಿದೇವಿ ನಾಲ್ಕೈದು ಮಂದಿ ಯುವಕರನ್ನು ಕಳುಹಿಸಿ ಪೂಜಾಳನ್ನು ಕರೆತರಲು ಸೂಚಿಸಿದ್ದರು. ಅದರಂತೆ ಆರೋಪಿಗಳು ಪೂಜಾಳ ಮನೆಗೆ ಬಂದು ಪೂಜಾಳ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಣ ಮಾಡಿದ್ದಾರೆ. ಪೂಜಾ ಅವರ ಸೋದರ ಅತ್ತೆ ಪಾಣಿದೇವಿಗೆ ವಿಡಿಯೋ ಕರೆ ಮಾಡಿ, ಆಕೆಯನ್ನು ಕರೆತರುವುದಾಗಿ ಮಾಹಿತಿ ನೀಡಿದ್ದಾರೆ. ಈ ವೇಳೆ ಪಾಣಿದೇವಿ ನಮ್ಮ ಹುಡುಗರ ಜತೆ ಮನೆಗೆ ಬರಬೇಕು. ಇಲ್ಲವಾದರೆ ನಿನ್ನ ಪತಿಯನ್ನು ಹತ್ಯೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.
ಬುಧವಾರ ಸಂಜೆ 7.30 ರ ಸುಮಾರಿಗೆ ಆರೋಪಿಗಳು ವಿವಾಹಿತೆಯನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದರು. ಆಕೆ ರಾಜಸ್ತಾನದಲ್ಲಿ ಪ್ರೇಮ ವಿವಾಹವಾಗಿ ನಗರದಲ್ಲಿ ಪತಿಯ ಜತೆ ನೆಲೆಸಿದ್ದರು. ಆಕೆಯ ಪತಿ ಎಲೆಕ್ಟ್ರಿಷನ್ ಆಗಿ ಕೆಲಸ ಮಾಡುತ್ತಿದ್ದಾನೆ. ಏಕಾಏಕಿ ಒಂದು ತಂಡ ಕಾರಿನಲ್ಲಿ ಒತ್ತಾಯಪೂರ್ವಕವಾಗಿ ಆಕೆಯನ್ನು ಅಪಹರಣ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.
-ಎನ್.ಯತೀಶ್, ಪಶ್ಚಿಮ ವಿಭಾಗದ ಡಿಸಿಪಿ


